ಮುಂಬಯಿ: ನಟಿ ಕೀರ್ತಿ ಸುರೇಶ್ ಕೊನೆಗೂ ಬಾಲಿವುಡ್ ರಂಗಕ್ಕೆ ಎಂಟ್ರಿ ಕೊಡೋದು ಕನ್ಫರ್ಮ್ ಆಗಿದೆ. ʼಜವಾನ್ʼ ನಿರ್ದೇಶಕ ಅಟ್ಲಿ ಅವರ ಪ್ರೊಡಕ್ಷನ್ ನಲ್ಲಿ ಬರಲಿರುವ ಸಿನಿಮಾದಲ್ಲಿ ʼಮಹಾನಟಿʼ ಬಿಟೌನ್ ಪ್ರವೇಶ ಮಾಡಲಿದ್ದಾರೆ.
ಕಾಲಿವುಡ್ ನಲ್ಲಿ 2016 ರಲ್ಲಿ ತೆರೆಗೆ ಬಂದ ಅಟ್ಲಿ ನಿರ್ದೇಶನದ ದಳಪತಿ ವಿಜಯ್ ಅಭಿನಯದ ʼತೇರಿʼ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಒಳ್ಳೆಯ ಕಮಾಯಿ ಮಾಡಿತ್ತು. ಸಮಂತಾ ಹಾಗೂ ಆಮಿ ಜಾಕ್ಸನ್ ಕಾಣಿಸಿಕೊಂಡ ಸಿನಿಮಾದಲ್ಲಿ ವಿಜಯ್ ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಇದೀಗ ಈ ಸಿನಿಮಾ ರಿಮೇಕ್ ಆಗಿ ಬಾಲಿವುಡ್ ನಲ್ಲಿ ತೆರೆ ಕಾಣಲಿದೆ.
ಬಾಲಿವುಡ್ ಚಾಕ್ಲೇಟ್ ಹೀರೋ ವರುಣ್ ಧವನ್ ನಾಯಕನಾಗಿ ಈ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ʼತೇರಿʼ ಸಿನಿಮಾದಲ್ಲಿ ಸಮಂತಾ ನಟಿಸಿದ ಪಾತ್ರವನ್ನು ಇಲ್ಲಿ ಕೀರ್ತಿ ಸುರೇಶ್ ಮಾಡಲಿದ್ದಾರೆ.
ಕಾಲಿವುಡ್ ನಲ್ಲಿ ʼತೇರಿʼಯನ್ನು ನಿರ್ದೇಶನ ಮಾಡಿದ್ದ ಅಟ್ಲಿ. ಹಿಂದಿಯಲ್ಲಿನ ʼತೇರಿʼ ರಿಮೇಕ್ ಸಿನಿಮಾವನ್ನು ಪ್ರಸ್ತುತಪಡಿಸಲಿದ್ದಾರೆ. ಅಟ್ಲಿ ಅವರ ಪ್ರೊಡಕ್ಷನ್ ಸಂಸ್ಥೆ ಆಗಿರುವ ಎ ಫಾರ್ ಆ್ಯಪಲ್ ಸ್ಟುಡಿಯೋಸ್ ಅಡಿಯಲ್ಲಿ ಪ್ರಿಯಾ ಅಟ್ಲಿ ಹಾಗೂ ಕಬೀರ್ ಸಿಂಗ್ ಸಿನಿಮಾವನ್ನು ನಿರ್ಮಾಣ ಮಾಡಿದ್ದ ಮುರಾದ್ ಖೇತಾನಿ (ಸಿನಿ1 ಸ್ಟುಡಿಯೋಸ್) ಅವರು ಜಂಟಿಯಾಗಿ ಸಿನಿಮಾವನ್ನು ನಿರ್ಮಾಣ ಮಾಡಲಿದ್ದಾರೆ.
ಇನ್ನು ಈ ಸಿನಿಮಾಕ್ಕೆ ತಾತ್ಕಾಲಿಕವಾಗಿ “VD18” ಎಂದು ಟೈಟಲ್ ಇಡಲಾಗಿದ್ದು, ಕಾಲೀಸ್ ಅವರು ಸಿನಿಮಾಕ್ಕೆ ಆ್ಯಕ್ಷನ್ ಕಟ್ ಹೇಳಲಿದ್ದಾರೆ.
ಮುಂದಿನ ತಿಂಗಳಿನಿಂದ ಶೂಟಿಂಗ್ ಆರಂಭಗೊಳ್ಳಲಿದ್ದು, ನವೆಂಬರ್ ವೇಳೆ ಶೂಟ್ ಮುಗಿಸುವ ಯೋಜನೆಯನ್ನು ಚಿತ್ರತಂಡ ಹಾಕಿಕೊಂಡಿದೆ. ಎಲ್ಲವೂ ಅಂದುಕೊಂಡಂತೆಯಾದರೆ 2024ರ ಮೇ 31 ರಂದು ಸಿನಿಮಾ ರಿಲೀಸ್ ಆಗಲಿದೆ ಎಂದು ಚಿತ್ರತಂಡ ಹೇಳಿದೆ.
ವರುಣ್ ಧವನ್ ಅವರ ʼಬವಾಲ್ʼ ಸಿನಿಮಾ ಜು.21 ರಂದು ಅಮೇಜಾನ್ ಪ್ರೈಮ್ ನಲ್ಲಿ ಪ್ರಿಮಿಯರ್ ಆಗಲಿದೆ.