ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ ಸಿಬಿ) ತಂಡದ ವಿಕೆಟ್ ಕೀಪರ್ ಬ್ಯಾಟರ್ ದಿನೇಶ್ ಕಾರ್ತಿಕ್ ಅವರು ಕ್ರಿಕೆಟ್ ನಿಂದ ದೂರವಾಗುವ ಮಾತನಾಡಿದ್ದಾರೆ. ಮಾರ್ಚ್ 22ರಿಂದ ಆರಂಭವಾಗಲಿರುವ 17ನೇ ಸೀಸನ್ ನ ಐಪಿಎಲ್ ತನ್ನ ಕೊನೆಯ ಕೂಟವಾಗಿರಲಿದೆ ಎಂದು ತಮಿಳುನಾಡು ಕ್ರಿಕೆಟಿಗ ಹೇಳಿದ್ದಾರೆ.
ಈ ಬಗ್ಗೆ ಬಿಸಿಸಿಐ ಮೂಲವೊಂದನ್ನು ಉಲ್ಲೇಖಿಸಿ ಪಿಟಿಐ ವರದಿ ಮಾಡಿದೆ. ಈ ಸೀಸನ್ ದಿನೇಶ್ ಕಾರ್ತಿಕ್ ಅವರ ಕೊನೆಯ ಐಪಿಎಲ್ ಆಗಿರಲಿದೆ. ಐಪಿಎಲ್ ಬಳಿಕ ಕಾರ್ತಿಕ್ ಅವರು ಅಂತಾರಾಷ್ಟ್ರೀಯ ಕ್ರಿಕೆಟ್ ನಿವೃತ್ತಿಯ ಬಗ್ಗೆ ನಿರ್ಧರಿಸಲಿದ್ದಾರೆ ಎಂದು ಅವರು ಹೇಳಿದ್ದಾರೆ.
ಐಪಿಎಲ್ ನಲ್ಲಿ ಅತ್ಯಂತ ಅನುಭವಿ ವಿಕೆಟ್ ಕೀಪರ್ ಬ್ಯಾಟರ್ ಗಳಲ್ಲಿ ಒಬ್ಬರಾದ ಕಾರ್ತಿಕ್ ಲೀಗ್‌ನಲ್ಲಿ ಆರು ತಂಡಗಳನ್ನು ಪ್ರತಿನಿಧಿಸಿದ್ದಾರೆ. ಸದ್ಯ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರವಾಗಿ ಆಡುತ್ತಿದ್ದಾರೆ.
2008 ರಲ್ಲಿ ಡೆಲ್ಲಿ ಡೇರ್‌ಡೆವಿಲ್ಸ್ (ಈಗ ಕ್ಯಾಪಿಟಲ್ಸ್) ಜೊತೆ ಐಪಿಎಲ್ ಪಯಣ ಆರಂಭಿಸಿದ ಕಾರ್ತಿಕ್, 2011 ರಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ಗೆ ತೆರಳಿದರು. ಮುಂಬೈ ಇಂಡಿಯನ್ಸ್ ಗೆ ಎರಡು ಸೀಸನ್ ಆಡಿದ ಅವರು 2014 ರಲ್ಲಿ ದೆಹಲಿಗೆ ಮರಳಿದರು.
ರಾಯಲ್ ಚಾಲೆಂಜರ್ಸ್ ಅವರನ್ನು 2015 ರಲ್ಲಿ ರೂ 10.5 ಕೋಟಿಗೆ ಸಹಿ ಹಾಕಿತು. 2016 ಮತ್ತು 2017 ರಲ್ಲಿ ಗುಜರಾತ್ ಲಯನ್ಸ್‌ಗಾಗಿ ಆಡಿದ ನಂತರ ಅವರು ಕೋಲ್ಕತ್ತಾ ನೈಟ್ ರೈಡರ್ಸ್‌ನೊಂದಿಗೆ ನಾಲ್ಕು ಋತುಗಳನ್ನು ಕಳೆದರು. ಐಪಿಎಲ್ 2022 ರ ಮೊದಲು, ಕಾರ್ತಿಕ್ ಅವರನ್ನು ಕೆಕೆಆರ್ ಬಿಡುಗಡೆ ಮಾಡಿತು. ಆರ್‌ಸಿಬಿ ಎರಡನೇ ಬಾರಿಗೆ ರೂ 5.5 ಕೋಟಿಗೆ ಖರೀದಿಸಿತು.