ರಾಮನಗರ: ಗ್ರಾಮ ಪಂಚಾಯಿತಿಗಳ ಅಧಿಕಾರದ ಅವಧಿ ಇದೇ ತಿಂಗಳು ಮುಕ್ತಾಯವಾಗಲಿದೆ. ಪಂಚಾಯತ್‌ರಾಜ್ ವ್ಯವಸ್ಥೆ ಬಗ್ಗೆ ಬಿಎಸ್‌ವೈ ಸರ್ಕಾರಕ್ಕೆ ಕಾಳಜಿಯಿದ್ದರೆ ಚುನಾವಣೆ ಘೋಷಣೆಯಾಗುವವರೆಗೂ ಹಾಲಿಯಿರುವ ಪ್ರತಿನಿಧಿಗಳನ್ನೇ ಅಧಿಕಾರ ದಲ್ಲಿ ಮುಂದುವರಿಯಲು ಅವಕಾಶ ಕೊಡ ಬೇಕು ಎಂದು ಸಂಸದ ಡಿ.ಕೆ.ಸುರೇಶ್ ಒತ್ತಾಯಿಸಿದರು.
ತಾಲೂಕಿನ ಲಕ್ಷ್ಮೀಪುರ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿರುವ ಭಾರತ್ ನಿರ್ಮಾಣ್ ರಾಜೀವ್ ಗಾಂಧಿ ಸೇವಾ ಕೇಂದ್ರ ಹಾಗೂ ಗ್ರಾಪಂ ಕಟ್ಟಡ ಉದ್ಘಾಟಿಸಿ ಸುದ್ದಿಗಾರರೊಂದಿಗೆ ಮಾತನಾಡಿದರು. ಲಾಕ್‌ಡೌನ್ ಜಾರಿಯಲ್ಲಿದ್ದು, ಇನ್ನು 6 ತಿಂಗಳು ಚುನಾವಣೆಗಳು ನಡೆಯುವ ಸಾಧ್ಯತೆಗಳಿಲ್ಲ. ಆದರೆ ಗ್ರಾಮಗಳ ಅಭಿವೃದಿಗೆ ಪಂಚಾಯ್ತಿ ವ್ಯವಸ್ಥೆ ಮುಂದುವರಿಯ ಬೇಕಾಗಿದೆ. ಎಲ್ಲವೂ ಅಧಿಕಾರಿಗಳಿಂದಲೇ ಸಾಧ್ಯವಾಗುವುದಿಲ್ಲ. ಗ್ರಾಪಂಗಳ ಚುನಾಯಿತ ಪ್ರತಿನಿಧಿಗಳ ಅವಧಿ ಮುಕ್ತಾಯವಾದ ನಂತರ ಸರ್ಕಾರ ಆಡಳಿತಾಧಿಕಾರಿ ನೇಮಕ ಇತ್ಯಾದಿ ವ್ಯವಸ್ಥೆ ಮಾಡಿದೆ.
ಹಾಲಿಯಿರುವ ಚುನಾಯಿತ ಪ್ರತಿನಿಧಿಗಳನ್ನೇ ಅಧಿಕಾರದಲ್ಲಿ ಮುಂದುವರಿಸಬೇಕು. ಸರ್ಕಾರಕ್ಕೆ ಈ ವ್ಯವಸ್ಥೆ ಬಗ್ಗೆ ಕಾಳಜಿಯಿದ್ದಿದ್ದರೆ ಮೂರು ತಿಂಗಳ ಹಿಂದೆಯೇ ಚುನಾವಣೆಗಳಿಗೆ ತಯಾರಿ ನಡೆಸಬೇಕಿತ್ತು. ಈ ಸರ್ಕಾರಕ್ಕೆ ಪಂಚಾಯಿತಿ ಬಗ್ಗೆ ಆಸಕ್ತಿಯಿಲ್ಲ ಎಂಬುದನ್ನು ಸ್ಪಷ್ಟಪಡಿಸು ತ್ತದೆ ಎಂದು ಹರಿಹಾಯ್ದರು. ಪಂಚಾಯಿತಿ ಸದಸ್ಯರು ಯಾವ ಪಕ್ಷದ ಚಿಹ್ನೆಯ ಮೇಲೂ ಗೆದ್ದಿಲ್ಲದ ಕಾರಣ ಇಲ್ಲಿ ರಾಜಕೀಯ ಪ್ರಶ್ನೆ ಬರೋಲ್ಲ. ಹಾಲಿ ಸದಸ್ಯ ರನ್ನೇ ಮುಂದುವರಿಸಿ ಎಂದು ಆಗ್ರಹಿಸಿದರು.
ಎಪಿಎಂಸಿ ತಿದ್ದುಪಡಿ: ಎಪಿಎಂಸಿ ತಿದ್ದುಪಡಿ ವಿರೋಧಿಸಿದ ಸಂಸದ ಡಿ.ಕೆ.ಸುರೇಶ್, ಇದು ಖಾಸಗಿಕರಣದ ಹುನ್ನಾರ. ರೈತರ ಬಾಯಿ ಕಟ್ಟಿಹಾಕುವ ವ್ಯವಸ್ಥೆ. ರೈತರ ಹಕ್ಕುಗಳನ್ನು ಹತ್ತಿಕ್ಕುವ ವ್ಯವಸ್ಥೆ, ಮಲ್ಟಿ ನ್ಯಾಷನಲ್ ಕಂಪನಿಗಳಿಗೆ ಉಪಯೋಗ ಮಾಡಿಕೊಡುವ ವ್ಯವಸ್ಥೆಗಾಗಿ ತಿದ್ದುಪಡಿ, ತಿದ್ದಿಪಡಿ ಜಾರಿ ಯಾದರೆ ರೈತರಿಗೆ ದೊಡ್ಡ ಕೊಡಲಿ ಪೆಟ್ಟು ಕೊಟ್ಟಂತಾಗುತ್ತದೆ ಎಂದರು.
ರೈತರ ಪರ: ಬಿಡದಿ ಬಳಿ ಟೌನ್‌ಶಿಪ್ ನಿರ್ಮಾಣದ ಸಂಬಂಧ ಹಾಲಿ ವಿವಾದಗಳ ಬಗ್ಗೆ ಸ್ಪಷ್ಟನೆ ನೀಡಿದ ಸಂಸದ ಡಿ.ಕೆ.ಸುರೇಶ್, ತಾವು ರೈತರ ಪರ ಎಂದರು.