Advertisement

ವೈಜ್ಞಾನಿಕ ಮನೋಭಾವ ಮೈಗೂಡಿಸಿಕೊಳ್ಳಿ

09:07 PM Nov 25, 2019 | Lakshmi GovindaRaj |

ಚಾಮರಾಜನಗರ: ಮಾದಿಗ ಸಮುದಾಯದವರು ಕಂದಾಚಾರ, ಮೌಡ್ಯಗಳನ್ನು ಬದಿಗಿಟ್ಟು ವೈಜ್ಞಾನಿಕ ಮನೋಭಾವ ಮೈಗೂಡಿಸಿಕೊಂಡು ಅಭಿವೃದ್ಧಿ ಪಥದತ್ತ ಸಾಗಬೇಕು ಎಂದು ಹಿರಿಯೂರು ಶಾಖೆಯ ಆದಿಜಾಂಬವ ಕೋಡಿಹಳ್ಳಿ ಬೃಹನ್ಮಠದ ಪೀಠಾಧಿಪತಿ ಷಡಕ್ಷರಿ ದೇಶಿಕೇಂದ್ರ ಸ್ವಾಮೀಜಿ ಹೇಳಿದರು.

Advertisement

ನಗರದ ಜೆ.ಎಚ್‌.ಪಟೇಲ್‌ ಸಭಾಂಗಣದಲ್ಲಿ ಮಾತಂಗ ಪರಿವಾರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಮಾತಂಗ ಸಮಾನ ಮನಸ್ಕರ ಪ್ರಗತಿಪರ ವೇದಿಕೆ ವತಿಯಿಂದ ನಡೆದ ಪ್ರತಿಭಾ ಪುರಸ್ಕಾರ ಹಾಗೂ ವಿದ್ಯಾರ್ಥಿ ಸಮಾವೇಶ ಸಮಾರಂಭದಲ್ಲಿ ಅವರು ಮಾತನಾಡಿದರು.

ಮಕ್ಕಳಿಗೆ ಹೆಚ್ಚು ಮಾರ್ಗದರ್ಶನ ಅಗತ್ಯ: ಮಾದಿಗ ಸಮಾಜ ಶೈಕ್ಷಣಿಕ, ರಾಜಕೀಯ, ಸಾಮಾಜಿಕ, ಆರ್ಥಿಕವಾಗಿ ಮುಂದೆ ಬರಬೇಕಿದೆ. ಉತ್ತಮ ನಾಗರಿಕರರಾಗಿ ಮೇಲೆ ಬಂದಾಗ ಸಮಾಜದಲ್ಲಿ ಸಮಾನತೆ, ಸಹಕಾರ ಸಿಗುತ್ತದೆ. ಓದು, ನಮ್ಮ ಜ್ಞಾನದ ಅರಿವು ಉಂಟು ಮಾಡುತ್ತದೆ. ಸಮುದಾಯದಲ್ಲಿ ಓದುವ ಮಕ್ಕಳಿಗೆ ಹೆಚ್ಚು ಮಾರ್ಗದರ್ಶನ ಆಗಬೇಕು. ಒಳಿತು ಸಮಾಜ ಕಟ್ಟುವ ಜವಾಬ್ದಾರಿ ನಮ್ಮ ಮೇಲಿದೆ.

ವಿದ್ಯಾರ್ಥಿಗಳು ಕಷ್ಟದ ಹೆಜ್ಜೆಗಳನ್ನು ದಾಟಿ ಶ್ರಮ, ಅಸಕ್ತಿಯಿಂದ ಓದಿದರೆ ಐಎಎಸ್‌, ಕೆಎಎಸ್‌ ಕೋರ್ಸ್‌ ಹಾಗೂ ಉನ್ನತ ಶಿಕ್ಷಣ ಕೋರ್ಸ್‌ಗಳ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಸುಲಭವಾಗಿ ಎದುರಿಸಬಹುದು ಎಂದರು. ಗಡಿಜಿಲ್ಲೆಯಾದ ಚಾಮರಾಜನಗರದಲ್ಲಿ ಮಾತಂಗ ಪರಿವಾರ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಕಾರದಲ್ಲಿ ಸಮುದಾಯದ ಪ್ರತಿಭಾವಂತ ಮಕ್ಕಳನ್ನು ಒಂದು ಕಡೆ ಸೇರಿ ಅವರಿಗೆ ಸಾಂಸ್ಕೃತಿಕ, ಶೈಕ್ಷಣಿಕ ಜಾಗೃತಿ ಮೂಡಿಸಿ, ಪ್ರತಿಭಾ ಪುರಸ್ಕಾರ ನೀಡಿ ಗೌರವಿಸುತ್ತಿರುವುದು ಅರ್ಥಪೂರ್ಣ ಕಾರ್ಯಕ್ರಮವಾಗಿದೆ. ಇಂತಹ ಕಾರ್ಯಕ್ರಮ ಹೆಚ್ಚು ಹೆಚ್ಚು ನಡೆಯಬೇಕು ಎಂದು ಹೇಳಿದರು.

ಅವಕಾಶ ಉಪಯೋಗಿಸಿಕೊಳ್ಳಿ: ಕಾರ್ಯಕ್ರಮ ಉದ್ಘಾಟಿಸಿದ ಜಿಲ್ಲಾಧಿಕಾರಿ ಬಿ.ಬಿ. ಕಾವೇರಿ ಮಾತನಾಡಿ, ಡಾ.ಬಿ.ಆರ್‌.ಅಂಬೇಡ್ಕರ್‌ ಅವರನ್ನು ನೆನಪಿಸಿಕೊಳ್ಳುವ ಮೂಲಕ ಶಿಕ್ಷಣಕ್ಕೆ ಹೆಚ್ಚು ಒತ್ತು ಕೊಡಬೇಕು. ಸಂವಿಧಾನ ಬರೆದುಕೊಟ್ಟ ಕೀರ್ತಿ ಅಂಬೇಡ್ಕರ್‌ ಅವರಿಗೆ ಸಲ್ಲುತ್ತದೆ. ಸಂವಿಧಾನ ಮೂಲಕ ಉಚಿತ ಶಿಕ್ಷಣ, ವಿದ್ಯಾರ್ಥಿವೇತನ ಸೇರಿದಂತೆ ಎಲ್ಲ ಸೌಲಭ್ಯ ನೀಡಿದ್ದಾರೆ.

Advertisement

ಇಂತಹ ಅವಕಾಶವನ್ನು ಸದುಪಯೋಗಪಡಿಸಿಕೊಂಡು ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಗುರಿಯಟ್ಟುಕೊಂಡು ಓದಬೇಕು. ಶ್ರಮಪಟ್ಟು ಓದಿದರೆ ಸರ್ಕಾರಿ ಕೆಲಸ ಸಿಕ್ಕೇ ಸಿಗುತ್ತದೆ. ಶಿಕ್ಷಣದಿಂದ ಸಮಾನತೆ ಬರುತ್ತದೆ. ಹೆಣ್ಣುಮಕ್ಕಳು ಆರ್ಥಿಕವಾಗಿ ಸಬಲರಾಗಬೇಕು. ವಿದ್ಯಾರ್ಥಿಗಳ ತಮ್ಮ ಚಿನ್ನದ ಜೀವನವನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಜಿಲ್ಲೆಯಲ್ಲಿ ಜಾತೀಯತೆ ಜೀವಂತವಾಗಿದ್ದು, ಜಾತಿ ಜಾತಿಗೊಂದು ಅಂಗನವಾಡಿ ಕೇಂದ್ರಗಳು ಇದು ಹೋಗಬೇಕಾದರೆ ಜಿಲ್ಲೆಯಲ್ಲಿ ಇನ್ನೂ ಹೆಚ್ಚಿನ ಶಿಕ್ಷಣ ಆಗಬೇಕಿದೆ ಎಂದರು.

ಶಿಕ್ಷಣಕ್ಕೆ ಆದ್ಯತೆ ನೀಡಿ: ಮಾತಂಗ ಪರಿವಾರದ ರಾಜ್ಯ ಕಾರ್ಯಾಧ್ಯಕ್ಷ ಅರಕಲವಾಡಿ ನಾಗೇಂದ್ರ ಮಾತನಾಡಿ, ಮಾದಿಗ ಸಮುದಾಯ ಸಾಮಾಜಿಕ, ಶೈಕ್ಷಣಿಕ, ಸಾಮಾಜಿಕ, ಆರ್ಥಿಕವಾಗಿ ದುರ್ಬಲವಾಗಿದ್ದೇನೆ. ಆ ಕ್ಷೇತ್ರಗಳಲ್ಲಿ ಸಮಾಜವನ್ನು ಎಚ್ಚರಿಸುವ ಉದ್ದೇಶದಿಂದ ಶಿಕ್ಷಣ ಒತ್ತು ನೀಡಲಾಗಿದೆ.

ಎಲ್ಲವೂ ಶಿಕ್ಷಣವೇ ಆಗಿರುವುದರಿಂದ ಸಮುದಾಯದ ವಿದ್ಯಾರ್ಥಿಗಳ ಭವಿಷ್ಯಕ್ಕಾಗಿ ಆತ್ಮಾವಲೋಕನ ಮೂಡಿಸಲು ಜಿಲ್ಲೆಯಲ್ಲಿ 3 ದಿನಗಳ ಕಾಲ ಕಾರ್ಯಕ್ರಮ ಹಮ್ಮಿಕೊಂಡು ವಿದ್ಯಾರ್ಥಿಗಳಿಗೆ ವಿಷಯ ತಜ್ಞರಿಂದ ಜಾಗೃತಿ ಮೂಡಿಸಲಾಗುತ್ತಿದೆ. ಮಾತಂಗ ಪರಿಹಾರವು 18 ವರ್ಷಗಳಿಂದ ಸಮುದಾಯದ ಅಭಿವೃದ್ಧಿಗೆ ಶ್ರಮಿಸುತ್ತಿದೆ. ಎಸ್‌ಎಸ್‌ಎಲ್‌ಸಿ, ಪಿಯುಸಿ ಮಕ್ಕಳಿಗೆ ಪ್ರತಿಭಾ ಪುರಸ್ಕಾರ, ಜನಪ್ರತಿನಿಧಿಗಳಿಗೆ ತರಬೇತಿ ನೀಡುವುದು, ಐಎಎಸ್‌, ಕೆಪಿಎಸ್‌ ವಿದ್ಯಾರ್ಥಿಗಳಿಗೆ ತರಬೇತಿ, ನೆರವು ನೀಡುತ್ತಾ ಬಂದಿದೆ ಎಂದರು.

200 ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ: ಕಳೆದ ಸಾಲಿನಲ್ಲಿ ಪಿಯುಸಿ, ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದಿದ್ದ ರಾಜ್ಯ ವಿವಿಧ ಜಿಲ್ಲೆಗಳಿಂದ ಆಯ್ಕೆಯಾದ 200 ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ತಲಾ 2 ಸಾವಿರ ನಗದು ರೂ. ಸಾಧಕರ ಪುಸ್ತಕ ಹಾಗೂ ಪ್ರಮಾಣ ಪತ್ರ, ಪಿಯುಸಿ ವಿದ್ಯಾರ್ಥಿಗಳಿಗೆ 3 ಸಾವಿರ ನಗದು ರೂ. ಸಾಧಕ ಪುಸ್ತಕ, ಪ್ರಮಾಣಪತ್ರ ನೀಡಿ ಗೌರವಿಸಲಾಯಿತು.

ಸಮಾರಂಭದಲ್ಲಿ ಪರಿವಾರ ಮಾತಂಗ ರಾಜ್ಯಾಧ್ಯಕ್ಷ ಜಿ.ಜಿ.ಬಸಪ್ಪ, ರಾಜ್ಯ ಲೆಕ್ಕಪತ್ರ ಇಲಾಖೆ ಜಂಟಿ ನಿಯಂತ್ರಾಣಾಧಿಕಾರಿ ಡಾ.ಪಿ.ಎಲ್‌.ವೆಂಕಟೇಶ್‌ಮೂರ್ತಿ, ನಗರ ಮತ್ತು ಗ್ರಾಮೀಣ ಯೋಜನಾ ಇಲಾಖೆ ಎಲ್‌.ಶಶಿ ಕುಮಾರ್‌, ಉಪ ವಿಭಾಗಾಧಿಕಾರಿ ಎನ್‌.ಸಿ.ವೆಂಕಟರಾಜು, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಎಚ್‌.ಎಸ್‌.ಪ್ರೇಮನಾಥ್‌, ಕೂಸಣ್ಣ, ವಕೀಲರಾದ ರಾಜೇಂದ್ರ, ಸಹಾಯಕ ಸಬ್‌ಇನೆ³ಕ್ಟರ್‌ ಶಿವಣ್ಣ, ಡಾ.ಶಿವಲಿಂಗು, ನಗರಸಭಾ ಸದಸ್ಯ ಮಹದೇವಯ್ಯ ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next