Advertisement

ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿಸಲು ನಿಗಾ ವಹಿಸಿ

02:05 PM Jun 19, 2018 | Team Udayavani |

ಮೈಸೂರು: ಶತಮಾನದ ಇತಿಹಾಸವಿರುವ ಮಹಾರಾಜ ಪ್ರೌಢಶಾಲೆಯಲ್ಲಿ ಬೆರಳೆಣಿಕೆಯಷ್ಟು ವಿದ್ಯಾರ್ಥಿಗಳಿರುವುದು ಇಲಾಖೆಯ ದೌರ್ಬಲ್ಯವಾಗಿದ್ದು, ಮುಂದಿನ ದಿನಗಳಲ್ಲಿ ಮಕ್ಕಳ ಸಂಖ್ಯೆ ಹೆಚ್ಚಿಸಲು ಅಧಿಕಾರಿಗಳು, ಶಿಕ್ಷಕರು ನಿಗಾ ವಹಿಸಬೇಕೆಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಮಹೇಶ್‌ ತಾಕೀತು ಮಾಡಿದರು. 

Advertisement

ನಗರದ ಮಹಾರಾಜ ಪ್ರೌಢಶಾಲೆಯಲ್ಲಿ ಮಕ್ಕಳ ಹಾಜರಾತಿ ಕೊರತೆ ಉಂಟಾಗಿರುವ ಹಿನ್ನೆಲೆಯಲ್ಲಿ ಸೋಮವಾರ ಶಾಲೆಗೆ ಭೇಟಿ ನೀಡಿದ ಅವರು, ಅಲ್ಲಿನ ವಾಸ್ತವ ಸ್ಥಿತಿಗತಿಗಳ ಕುರಿತು ಕೂಲಂಕಷವಾಗಿ ಪರಿಶೀಲಿಸಿದರು. ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದರು.

ಒಂದು ಕಾಲದಲ್ಲಿ ಸಾವಿರಾರು ಮಕ್ಕಳು ವ್ಯಾಸಂಗ ಮಾಡುತ್ತಿದ್ದ ನೂರು ವರ್ಷಗಳ ಇತಿಹಾಸವಿರುವ ಮಹಾರಾಜ ಶಾಲೆಯಲ್ಲಿ ಇಂದು ಕೇವಲ 127 ಮಕ್ಕಳು ಮಾತ್ರವೇ ವ್ಯಾಸಂಗ ಮಾಡುತ್ತಿದ್ದಾರೆ. ಶಾಲೆಯಲ್ಲಿ ಖಾಸಗಿ ಶಾಲೆಗಳಿಗಿಂತಲೂ ಉತ್ತಮ ಮೂಲಸೌಕರ್ಯ ಇದ್ದರೂ, ಮಕ್ಕಳ ಸಂಖ್ಯೆ ಕಡಿಮೆಯಾಗುತ್ತಿರುವುದು ಬೇಸರದ ಸಂಗತಿಯಾಗಿದೆ.

ನಗರ ವ್ಯಾಪ್ತಿಯಲ್ಲಿ ಒಟ್ಟು 22 ಪ್ರಾಥಮಿಕ ಹಾಗೂ ಹಿರಿಯ ಪ್ರಾಥಮಿಕ ಶಾಲೆಗಳಿದ್ದು, ಈ ಶಾಲೆಗಳಿಂದ ಪ್ರತಿವರ್ಷ ಅಂದಾಜು 4000 ಮಕ್ಕಳು ತೇರ್ಗಡೆಯಾಗುತ್ತಾರೆ. ಆದರೂ ಮಹಾರಾಜ ಶಾಲೆಗೆ 500 ಮಕ್ಕಳನ್ನು ಸೆಳೆಯಲು ಸಾಧ್ಯವಾಗದಿರುವುದು ಇಲಾಖೆಯ ದೌರ್ಬಲ್ಯ ಎಂದು ಅಸಮಾಧಾನ ವ್ಯಕ್ತಪಡಿಸಿದರು. 

ಬಸ್‌ ಸೌಲಭ್ಯ ನೀಡೋಣ: ಪ್ರಾಥಮಿಕ ಹಾಗೂ ಹಿರಿಯ ಪ್ರಾಥಮಿಕ ಶಾಲೆಗಳಿಂದ ತೇರ್ಗಡೆಯಾಗುವ ಶೇ.60ಕ್ಕೂ ಹೆಚ್ಚು ಮಕ್ಕಳು ಖಾಸಗಿ ಶಾಲೆಗಳಿಗೆ ದಾಖಲಾಗುತ್ತಿದ್ದಾರೆ. ಇಂತಹ ಮಕ್ಕಳನ್ನು ಸರ್ಕಾರಿ ಶಾಲೆಯತ್ತ ಸೆಳೆಯಲು ಸರ್ಕಾರದಿಂದ ಕರಪತ್ರಗಳನ್ನು ಹಂಚುವ ಮೂಲಕ ಕೇವಲ ಜಾಹೀರಾತು ಮಾತ್ರ ನೀಡಲಾಗುತ್ತಿದೆ.

Advertisement

ಹೀಗಾಗಿ ಮುಂದಿನ ದಿನಗಳಲ್ಲಿ ಖುದ್ದು ಪ್ರಾಥಮಿಕ ಹಾಗೂ ಹಿರಿಯ ಪ್ರಾಥಮಿಕ ಶಾಲೆಗಳಿಗೆ ಭೇಟಿ ನೀಡಿ ಹಾಗೂ ಪೋಷಕರೊಂದಿಗೆ ನೇರವಾಗಿ ಮಾತುಕತೆ ನಡೆಸುವಂತೆ ಸೂಚಿಸಿದ್ದೇನೆ. ಅಲ್ಲದೆ ಸರ್ಕಾರಿ ಶಾಲೆಗಳಿಗೆ ಬರುವ ಮಕ್ಕಳ ಅನುಕೂಲಕ್ಕಾಗಿ ಬಸ್‌ ಸೌಲಭ್ಯ ಅಥವಾ ಬಸ್‌ಪಾಸ್‌ ನೀಡುವ ಬಗ್ಗೆ ಚಿಂತನೆ ಮಾಡಿದ್ದು, ಇಲಾಖೆ ಅಧಿಕಾರಿಗಳೊಂದಿಗೆ ಚರ್ಚಿಸಿ ತೀರ್ಮಾನಿಸುತ್ತೇನೆ.

ಸರ್ಕಾರಿ ಶಾಲೆಗಳ ಶಿಕ್ಷಕರು, ಉಪನ್ಯಾಸಕರು ಖಾಸಗಿ ಶಾಲಾ ಶಿಕ್ಷಕರಿಗಿಂತಲೂ ಹೆಚ್ಚಿನ ಜ್ಞಾನ ಹೊಂದಿದ್ದು, ಈ ನಿಟ್ಟಿನಲ್ಲಿ ಸರ್ಕಾರಿ ಶಾಲೆಗಳಲ್ಲಿ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ, ಸ್ಪೂಕನ್‌ ಇಂಗ್ಲಿಷ್‌ ಸೇರಿದಂತೆ ಇನ್ನಿತರ ವಿಷಯಗಳ ಬಗ್ಗೆ ಸಮರ್ಪಕ ತಿಳುವಳಿಕೆ ಮೂಡಿಸಿದರೆ ಮುಂದಿನ ದಿನಗಳಲ್ಲಿ ಸರ್ಕಾರಿ ಶಾಲಾ ಮಕ್ಕಳ ದಾಖಲಾತಿ ಹೆಚ್ಚಿಸಬಹುದು ಎಂದರು. 

ಶಾಲೆಯಲ್ಲಿ ಪರಿಶೀಲನೆ: ಇದಕ್ಕೂ ಮುನ್ನ ಶಾಲೆಗೆ ಆಗಮಿಸಿದ ಸಚಿವ ಎನ್‌. ಮಹೇಶ್‌, ಶಾಲೆಯ ಗ್ರಂಥಾಲಯ, ಸ್ಮಾರ್ಟ್‌ಕ್ಲಾಸ್‌ ಸೇರಿದಂತೆ ಹೆಲವು ತರಗತಿಗಳಿಗೆ ಬೇಟಿ ನೀಡಿದರು. ಈ ವೇಳೆ ಪಠ್ಯದ ವಿಷಯಗಳ ಬಗ್ಗೆ ವಿದ್ಯಾರ್ಥಿಗಳು ಹಾಗೂ ಶಿಕ್ಷಕರೊಂದಿಗೆ ಮಾತುಕತೆ ನಡೆಸಿದರು,

ಸ್ಮಾರ್ಟ್‌ಕ್ಲಾಸ್‌ಗೆ ತೆರಳಿದ ಸಂದರ್ಭ ಭೂಗೋಳ ಶಾಸ್ತ್ರದ ಬಗ್ಗೆ ವಿಡಿಯೋ ಮೂಲಕ ನೀಡಲಾಗುತ್ತಿದ್ದ ಮಾಹಿತಿಯನ್ನು ವೀಕ್ಷಿಸಿದರು. ಅಲ್ಲದೆ ತರಗತಿಯಲ್ಲಿ ಪ್ರದರ್ಶಿಸಲಾಗುವ ವಿಡಿಯೋ ದೃಶ್ಯಾವಳಿಯ ವೇಗವನ್ನು ಸ್ವಲ್ಪಮಟ್ಟಿಗೆ ಕಡಿಮೆ ಮಾಡುವಂತೆ ಶಿಕ್ಷಕರಿಗೆ ಸೂಚಿಸಿದರು.

ಅಂತೆಯೇ ಸ್ಥಳದಲ್ಲಿ ನಡೆಯುತ್ತಿರುವ ಕಟ್ಟಡದ ಪುನರ್‌ ನವೀಕರಣ ಕಾಮಗಾರಿಯ ಗುಣಮಟ್ಟ ಪರಿಶೀಲಿಸಿ, ಕಾಮಗಾರಿಯ ವೇಗವನ್ನು ಹೆಚ್ಚಿಸುವಂತೆ ಸ್ಥಳದಲ್ಲಿದ್ದ ಗುತ್ತಿಗೆದಾರನಿಗೆ ಸೂಚಿಸಿದರು. ಈ ವೇಳೆ ಡಿಡಿಪಿಐ ಮಮತ, ಬಿಇಒ ಶಿವಕುಮಾರ್‌, ಇಒಗಳಾದ ಉದಯಕುಮಾರ್‌, ರಾಜಶೇಖರಮೂರ್ತಿ, ಮಹಾರಾಜ ಕಾಲೇಜು ಪ್ರಾಂಶುಪಾಲ ಸಿದ್ದರಾಜು ಮತ್ತಿತರರು ಹಾಜರಿದ್ದರು. 

ಹಣ ನೀಡಿ ಬುಕ್ಕಿಂಗ್‌..!: ಪೋಷಕರಿಂದ ಭಾರೀ ಪ್ರಮಾಣದ ಹಣ ಪಡೆದು ಮಕ್ಕಳಿಗೆ ಶಾಲೆಯಲ್ಲಿ ಸೀಟ್‌ ಕೊಡುವ ಖಾಸಗಿ ಶಾಲೆಗಳ ಹಾವಳಿ ನಡುವೆಯೇ, ಖಾಸಗಿ ಶಾಲೆಯೊಂದು ಪೋಷಕರಿಗೆ ಹಣ ನೀಡಿ, ಮಕ್ಕಳನ್ನು ಶಾಲೆಗೆ ಸೇರಿಸಿಕೊಂಡಿರುವ ಸಂಗತಿ ಬೆಳಕಿಗೆ ಬಂದಿದೆ.

ಶಿಕ್ಷಣ ಸಚಿವರ ಪರಿಶೀಲನೆ ವೇಳೆ ವಿದ್ಯಾರ್ಥಿಗಳ ಕೊರತೆಗೆ ಕಾರಣವೇನೆಂಬುದನ್ನು ಶಿಕ್ಷಣ ಇಲಾಖೆ ಅಧಿಕಾರಿಗಳನ್ನು ಪ್ರಶ್ನಿಸಿದರು. ಈ ವೇಳೆ ಸ್ಥಳದಲ್ಲಿದ್ದ ಶಿಕ್ಷಕಿಯೊಬ್ಬರು, ದೇವಯ್ಯನಹುಂಡಿಯಲ್ಲಿ ಖಾಸಗಿ ಶಾಲಾ ಆಡಳಿತಮಂಡಳಿಯವರು ಮಕ್ಕಳ ಪೋಷಕರಿಗೆ 1 ಸಾವಿರ ರೂ. ನೀಡಿ, ಮಕ್ಕಳ ಟಿಸಿ ಪಡೆದು, ತಮ್ಮ ಶಾಲೆಗೆ ನೇಮಿಸಿಕೊಂಡಿವೆ ಎಂಬ ವಿಷಯವನ್ನು ಸಚಿವರ ಮುಂದಿಟ್ಟರು. 

ಮಹಾರಾಜ ಕಾಲೇಜಿನಲ್ಲಿ ಹೆಚ್ಚಿನ ಮಕ್ಕಳನ್ನು ಆಕರ್ಷಿಸಲು ಹಾಸ್ಟೆಲ್‌ ಸೌಲಭ್ಯ ನೀಡುವ ಬಗ್ಗೆಯೂ ಚಿಂತನೆ ನಡೆಸಲಾಗಿದೆ. ಇದಕ್ಕಾಗಿ ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಇಲಾಖೆಯೊಂದಿಗೆ ಚರ್ಚೆ ನಡೆಸಿ, ಹಾಸ್ಟೆಲ್‌ ಪ್ರಾರಂಭಿಸಿದರೆ ಶಾಲೆಯಲ್ಲಿ ವಿದ್ಯಾರ್ಥಿಗಳ ಸಂಖ್ಯೆಯನ್ನು ಹೆಚ್ಚಿಸಬಹುದು.
-ಮಹೇಶ್‌, ಶಿಕ್ಷಣ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next