ಬೆಂಗಳೂರು: ರಾಜಧಾನಿಯಲ್ಲಿ ತಲ್ಲಣ ಮೂಡಿಸಿರುವ ಐಎಂಎ ಜುವೆಲರ್ ಸಂಸ್ಥೆಯ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಸ್ಥೆಯ ಮುಖ್ಯಸ್ಥ ಮನ್ಸೂರ್ ಖಾನ್ ಪತ್ತೆ ಕಾರ್ಯಾಚರಣೆ ನಡುವೆಯೇ ಏಳು ನಿರ್ದೇಶಕರನ್ನು ಬುಧವಾರ ಬಂಧಿಸಲಾಗಿದೆ. ಈ ನಡುವೆ ಜಾರಿ ನಿರ್ದೇಶನಾಲಯ ‘ರಂಗಪ್ರವೇಶ’ ಮಾಡಿದ್ದು ಪ್ರಕರಣದ ಮಾಹಿತಿ ಸಂಗ್ರಹಿಸುತ್ತಿದೆ. ಇನ್ನೊಂದೆಡೆ ಡಿಐಜಿ ರವಿಕಾಂತೇಗೌಡ ನೇತೃತ್ವದಲ್ಲಿ ವಿಶೇಷ ತನಿಖಾ ತಂಡವನ್ನು ರಚನೆ ಮಾಡಲಾಗಿದೆ.
ಐಎಂಎ ನಿರ್ದೇಶಕರಾದ ನಿಜಾಮುದ್ದೀನ್, ನಾಸಿರ್ ಹುಸೇನ್, ನವೀದ್ ಅಹ್ಮದ್, ಹರ್ಷದ್ ಖಾನ್, ವಾಸಿಂ, ಅಫ‌್ಸರ್ ಪಾಷಾ ಮತ್ತು ದಾದಾಪೀರ್ ಬಂಧಿತರು. ನಾಪತ್ತೆಯಾಗಿರುವ ಮನ್ಸೂರ್ ಖಾನ್ ಬಗ್ಗೆಯೂ ಮಾಹಿತಿ ಪಡೆಯಲಾಗುತ್ತಿದೆ.
ಜೂ.6, 7ರಂದು ಮನ್ಸೂರ್ ಮತ್ತು ಆರೋಪಿಗಳು ಭೇಟಿಯಾಗಿದ್ದರು. ಈ ವೇಳೆ ವ್ಯವಹಾರದಲ್ಲಿ ನಷ್ಟವಾಗುತ್ತಿದ್ದು, ಅಂಗಡಿಯಲ್ಲಿರುವ ಚಿನ್ನಾಭರಣ ಹಾಗೂ ಕೆಲವು ಆಸ್ತಿಯನ್ನು ಮಾರಾಟ ಮಾಡಿ ಹಣ ನೀಡುವ ಬಗ್ಗೆ ಮನ್ಸೂರ್ ತೀರ್ಮಾನಿಸಿದ್ದ. ಆದರೆ ಜೂ. 8ರಂದು ಮನ್ಸೂರ್ ತಲೆಮರೆಸಿಕೊಂಡಿದ್ದಾನೆ ಎಂದು ನಿರ್ದೇಶಕರು ತನಿಖೆ ವೇಳೆ ತಿಳಿಸಿದ್ದಾಗಿ ಪೊಲೀಸರು ಹೇಳಿದ್ದಾರೆ.
20 ಸಾವಿರ ದೂರು ದಾಖಲು
ಘಟನೆಗೆ ಸಂಬಂಧಿಸಿ ಈಗಾಗಲೇ 20 ಸಾವಿರ ದೂರುಗಳು ದಾಖಲಾಗಿವೆ. ಬುಧವಾರ ಒಂದೇ ದಿನ 9 ಸಾವಿರ ದೂರುಗಳು ದಾಖಲಾಗಿವೆ. ರಾತ್ರಿ 8 ಗಂಟೆಯವರೆಗೂ ದೂರುಗಳನ್ನು ಸ್ವೀಕರಿಸಲಾಗಿದೆ.