ಗದಗ: ಜಿಲ್ಲೆಯಲ್ಲಿ ಕೋವಿಡ್-19 ಸೋಂಕು ನಿಯಂತ್ರಿಸುವ ಹಲವಾರು ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಅವುಗಳ ಸರಿಯಾದ ಪಾಲನೆಯೊಂದಿಗೆ ಸೋಂಕಿತರ ಆರೈಕೆ ಬಗ್ಗೆ ಸೂಕ್ತ ನಿಗಾ ವಹಿಸಬೇಕು ಎಂದು ಜಿಲ್ಲಾಧಿಕಾರಿ ಎಂ. ಸುಂದರೇಶ್ ಬಾಬು ಸೂಚಿಸಿದರು.
ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಜರುಗಿದ ಆರೋಗ್ಯ ಇಲಾಖೆಯ ಉನ್ನತ ಮಟ್ಟದ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಆಯುಷ್ ಆಸ್ಪತ್ರೆ ಹಾಗೂ ಜಿಮ್ಸ್ ಆಸ್ಪತ್ರೆಗಳನ್ನು ಜಿಲ್ಲಾ ನಿಗದಿತ ಕೋವಿಡ್ ಆಸ್ಪತ್ರೆಗಳಾಗಿ ಗುರುತಿಸಿ, ಕೋವಿಡ್ ಸೋಂಕಿತರಿಗೆ ಸೂಕ್ತ ಚಿಕಿತ್ಸೆ ನೀಡಲಾಗುತ್ತಿದ್ದು, ಅಗತ್ಯವಿರುವ ಎಲ್ಲ ರೀತಿಯ ಸಹಕಾರವನ್ನು ಸೋಂಕಿತರ ಚಿಕಿತ್ಸೆಗೆ ಹಾಗೂ ಸೋಂಕು ನಿಯಂತ್ರಣಕ್ಕೆ ಜಿಲ್ಲಾಡಳಿತ ನೀಡಲಿದೆ ಎಂದರು.
ಕೋವಿಡ್ ಸೋಂಕು ಪತ್ತೆಯಾದವರನ್ನು ಆಸ್ಪತ್ರೆಗೆ ಕರೆ ತರಲು ಇರುವ ಆಂಬ್ಯುಲೆನ್ಸ್‌ಗಳನ್ನು ಅಗತ್ಯಕ್ಕೆ ತಕ್ಕಂತೆ ಬಳಸಿಕೊಳ್ಳಬೇಕು. ಕೋವಿಡ್ ಆರೈಕೆ ಕೇಂದ್ರಗಳಲ್ಲಿ ಸೋಂಕಿತರಿಗೆ ಗುಣಮಟ್ಟದ ಆಹಾರ ನೀಡಬೇಕು. ಸೋಂಕಿತರಿಗೆ ಚಿಕಿತ್ಸೆ ನೀಡುವಲ್ಲಿ ವಿಳಂಬ ಮಾಡಬಾರದು. ಕೋವಿಡ್ ಮಾರ್ಗಸೂಚಿಗಳನ್ವಯ ಮೃತರ ಅಂತ್ಯಸಂಸ್ಕಾರ ನೆರವೇರಿಸಬೇಕು.
ಇಲಾಖೆಯಲ್ಲಿ ಈಗಿರುವ ಆಂಬ್ಯುಲೆನ್ಸ್ ಸೇರಿದಂತೆ ಇನ್ನಿತರೆ ಸಾಮಗ್ರಿಗಳನ್ನು ಸರಿಯಾಗಿ ನಿರ್ವಹಣೆ ಮಾಡಬೇಕು. ಜಿಲ್ಲೆಯ ಎಲ್ಲಾ ತಾಲೂಕು ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತವಾಗಿ ಕೋವಿಡ್ ಸೋಂಕು ಪರೀಕ್ಷೆಮಾಡಲಾಗುತ್ತಿದೆ. ಈ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಬೇಕು. ಸರ್ಕಾರದ ಆದೇಶದನ್ವಯ ಜಿಲ್ಲೆಯ ಖಾಸಗಿ ಆಸ್ಪತ್ರೆಗಳಲ್ಲಿ ಸೋಂಕಿತರ ಚಿಕಿತ್ಸೆಗೆ ಬೆಡ್ ಕಾಯ್ದಿರಿಸಿ ಚಿಕಿತ್ಸೆ ನೀಡಲು ಸೂಚಿಸಿ ಕ್ರಮ ವಹಿಸಲಾಗಿದೆ. ಸರ್ಕಾರ ನಿಗದಿ ಪಡಿಸಿದ ದರದಂತೆ ಸೂಕ್ತ ಚಿಕಿತ್ಸೆ ನೀಡಬೇಕು.ಈ ಕುರಿತು ಆರೋಗ್ಯ ಇಲಾಖೆ ಅಧಿಕಾರಿಗಳು ನಿಗಾ ವಹಿಸಬೇಕು ಎಂದು ನಿರ್ದೇಶಿಸಿದರು.
ಜಿಮ್ಸ್ ನಿರ್ದೇಶಕ ಡಾ| ಭೂಸರೆಡ್ಡಿ ಮಾತನಾಡಿ, ಆಸ್ಪತ್ರೆಯಲ್ಲಿ ಒಟ್ಟು 133 ಆಕ್ಸಿಜನ್ ಬೆಡ್ ಸಾಮರ್ಥ್ಯ ಹೊಂದಿದ್ದು, ಸೋಂಕಿತರ ಸಂಖ್ಯೆಗೆ ಅಗನುಗುಣವಾಗಿ ಆಕ್ಸಿಜನ್ ಬೆಡ್‌ಗಳ ಸಾಮರ್ಥ್ಯವನ್ನು233ಕ್ಕೆ ಹೆಚ್ಚಿಸುವ ಅಗತ್ಯವಿದೆ. ಪ್ರತಿದಿನ 300 ಆಕ್ಸಿಜನ್ ಸಿಲಿಂಡರ್ ಬಳಕೆಯಾಗುತ್ತಿದ್ದು, 6 ಕೆಎಲ್ ಸಾಮರ್ಥ್ಯದಹೆಚ್ಚುವರಿ ಸಿಲಿಂಡರ್ ಅಗತ್ಯವಿದೆ ಎಂದು ಸಭೆಗೆ ಮಾಹಿತಿ ನೀಡಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ| ಸತೀಶ ಬಸರೀಗಿಡದ ಮಾತನಾಡಿ, ತಾಲೂಕು ಆಸ್ಪತ್ರೆ ಸೇರಿದಂತೆ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಂದ ಸೋಂಕು ಪತ್ತೆಗೆ ಗಂಟಲು ದ್ರವ ಪರೀಕ್ಷೆಗಾಗಿ ಸಂಗ್ರಹಿಸಲು ಇಂದು3200 ಆರ್‌ಟಿ ಕಿಟ್‌ಗಳನ್ನು ವಿತರಿಸಲಾಗಿದೆ. ಅಗತ್ಯ ಬೇಡಿಕೆಗೆ ಅನುಗುಣವಾಗಿ ಪೂರೈಸಲು ಕ್ರಮ ವಹಿಸಲಾಗುತ್ತಿದೆ. ಪ್ರತಿಬಂಧಿತ ಪ್ರದೇಶಗಳಲ್ಲಿ ಸರ್ವೇ ಕಾರ್ಯ ಶೇ. 93ರಷ್ಟಾಗಿದೆ ಎಂದು ಸಭೆಗೆ ಮಾಹಿತಿ ಒದಗಿಸಿದರು.
ಸಭೆಯಲ್ಲಿ ಜಿಪಂ ಸಿಇಒ ಡಾ| ಆನಂದ ಕೆ., ಅಪರ ಜಿಲ್ಲಾಧಿಕಾರಿ ಸತೀಶ್ ಕುಮಾರ್, ಉಪವಿಭಾಗಾ ಧಿಕಾರಿ ರಾಯಪ್ಪ ಹುಣಸಗಿ, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ| ಕರೇಗೌಡ್ರ ಉಪಸ್ಥಿತರಿದ್ದರು