Advertisement

ಬ್ಯಾಂಕ್‌ ಖಾತೆ‌ ಮೇಲೆ ನಿಗಾವಹಿಸಿ

07:03 AM Mar 17, 2019 | |

ಬಳ್ಳಾರಿ: ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಬ್ಯಾಂಕ್‌ಗಳಲ್ಲಿ ಗ್ರಾಹಕರು 1 ಲಕ್ಷಕ್ಕಿಂತ ಹೆಚ್ಚು ಹಣ ಜಮಾಗೊಳಿಸುವ, ಡ್ರಾ ಮಾಡುವವರ ಖಾತೆಗಳ ಮೇಲೆ ನಿಗಾ ವಹಿಸಬೇಕಿದ್ದು, ಅಂತಹ ಗ್ರಾಹಕರ ವರದಿಯನ್ನು ಪ್ರತಿನಿತ್ಯ ನೀಡಬೇಕು ಎಂದು ಜಿಲ್ಲಾ ಚುನಾವಣಾಧಿಕಾರಿ ಡಾ|ರಾಮ್‌ ಪ್ರಸಾತ್‌ ಮನೋಹರ್‌, ಬ್ಯಾಂಕ್‌ ಅಧಿಕಾರಿಗಳಿಗೆ ತಾಕೀತು ಮಾಡಿದರು.

Advertisement

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಶುಕ್ರವಾರ ಸಂಜೆ ನಡೆದ ಬ್ಯಾಂಕ್‌ ವ್ಯವಸ್ಥಾಪಕರ ಸಭೆಯಲ್ಲಿ ಮಾತನಾಡಿದ ಅವರು, ಕಳೆದ ಎರಡು ತಿಂಗಳು ಅವಧಿಯಲ್ಲಿ ದಿಢೀರ್‌ ಡ್ರಾ ಮಾಡುತ್ತಿದ್ದರೆ,
ಎರಡು ತಿಂಗಳಲ್ಲಿ 1 ಲಕ್ಷಕ್ಕಿಂತ ಹೆಚ್ಚು ವ್ಯವಹಾರ ನಡೆದಿದ್ದರೆ, ಅಂತಹ ಖಾತೆಗಳ ಮಾಹಿತಿ ನೀಡಬೇಕು.

ಅಂತಹ ಖಾತೆಗಳತ್ತ ವಿಶೇಷ ಗಮನ ಹರಿಸಲು ಅನುಕೂಲವಾಗುತ್ತದೆ ಎಂದು ತಿಳಿಸಿದರು. ಜಿಲ್ಲೆಯಲ್ಲಿ 320 ಬ್ಯಾಂಕ್‌ ಶಾಖೆಗಳಿದ್ದು, ಅವುಗಳೆಲ್ಲವುದರ ವರದಿಯನ್ನು ಬ್ಯಾಂಕ್‌ ವ್ಯವಸ್ಥಾಪಕರು ಮತ್ತು ಕೋ- ಆರ್ಡಿನೇಟರ್‌ಗಳು ಪ್ರತಿನಿತ್ಯ ವರದಿಯನ್ನು ಚುನಾವಣಾ ವೆಚ್ಚ ಪರಿಶೀಲನಾ ವಿಭಾಗಕ್ಕೆ ಸಲ್ಲಿಸಬೇಕು. ವಾರದ ವರದಿ ಸಲ್ಲಿಸುವುದು ಕಡ್ಡಾಯವಾಗಿದ್ದು, ನಿಗದಿಪಡಿಸಿದ ಅವಧಿಯೊಳಗೆ ವರದಿ ಸಲ್ಲಿಸದಿದ್ದರೆ ಪ್ರಜಾಪ್ರತಿನಿತ್ಯ ಕಾಯ್ದೆ ಸೆಕ್ಷನ್‌ 32ರ ಅನ್ವಯ ಬ್ಯಾಂಕ್‌ ವ್ಯವಸ್ಥಾಪಕರು ಮತ್ತು ಬ್ಯಾಂಕ್‌ ಕೋ-ಆರ್ಡಿನೇಟರ್‌ಗಳ ಮೇಲೆ ಕ್ರಿಮಿನಲ್‌ ಕೇಸ್‌ ದಾಖಲಿಸಲಾಗುವುದು ಎಂದು ಎಚ್ಚರಿಸಿದರು.

ಲೋಕಸಭೆ ಚುನಾವಣೆಯಲ್ಲಿ ಬ್ಯಾಂಕ್‌ ಅಧಿಕಾರಿಗಳು ಸಹ ಚುನಾವಣಾ ಮಶಿನರಿಗಳಾಗಿದ್ದು, ಚುನಾವಣಾ ಪ್ರಕ್ರಿಯೆಗೆ ಸಹಕರಿಸಬೇಕು. ಈ ಬಾರಿಯ ಚುನಾವಣೆಯಲ್ಲಿ ಹೆಚ್ಚಿನ ಹಣದ ಹರಿವು ಉಂಟಾಗುವ ಸಾಧ್ಯತೆ ಇದ್ದು, ತಮಗೆ ವಹಿಸಿದ ಜವಾಬ್ದಾರಿಯನ್ನು ಸಮರ್ಪಕವಾಗಿ ನಿಭಾಯಿಸಬೇಕು ಎಂದು ಕಟ್ಟುನಿಟ್ಟಾಗಿ ಸೂಚಿಸಿದರು. ಕಣ್ಮುಂದೆಯೇ ಎರ್ರಾಬಿರ್ರಿ ಹಣದ ವ್ಯವಹಾರ ನಡಿತಾ ಇದ್ದರೂ ಕಣ್ಮುಚ್ಚಿ ಕುಳಿತುಕೊಳ್ಳುವುದು ಮಹಾ ಅಪರಾಧ. ಅಂತವುಗಳ ಮಾಹಿತಿ ನೀಡುವುದು ಅಗತ್ಯ. ಒಂದು ಖಾತೆಯಿಂದ ನಾಲ್ಕೈದು ಖಾತೆಗಳಿಗೆ ಹಣ ವರ್ಗಾವಣೆಯಾಗುತ್ತಿದ್ದರೆ ಅಂತವುಗಳನ್ನು ಪತ್ತೆ ಹಚ್ಚಿ ನೆಪ್ಟ್ ಮತ್ತು ಆರ್‌ಟಿಜಿಎಸ್‌ ಮಾಡುವುದಕ್ಕಿಂತ ಮುಂಚೆ ಎರಡು ಬಾರಿ ಚೆಕ್‌ ಮಾಡಿ ರಾಜಕೀಯ ಪಕ್ಷಗಳು, ಅಭ್ಯರ್ಥಿಗಳು ಮತ್ತು ಅವರ ಕುಟುಂಬದವರು ಚುನಾವಣಾ ಪ್ರಕ್ರಿಯೆಗಾಗಿ 1 ಲಕ್ಷ ರೂ.ಗಳಿಗಿಂತ ಹೆಚ್ಚು ಹಣ ತೆಗೆದರೆ ಅವುಗಳ ವಿವರ ಸಲ್ಲಿಸಬೇಕು ಎಂದು ಸೂಚಿಸಿದರು. 

ಎನ್‌ಜಿಒ ಖಾತೆಗಳ ಮೇಲೆಯೂ ನಿಗಾ: ಚುನಾವಣಾ ಸಂದರ್ಭದಲ್ಲಿ ಅಭ್ಯರ್ಥಿಗಳು ಸ್ವ ಸಹಾಯ ಸಂಘಗಳು ಮತ್ತು ಎನ್‌ಜಿಒ ಸದಸ್ಯರ ಓಲೈಕೆ ಮಾಡಲಿದ್ದಾರೆ. ಇಂತಹ ಸಂದರ್ಭದಲ್ಲಿ ಎನ್‌ಜಿಒ ಮತ್ತು ಸ್ವಸಹಾಯ ಸಂಘಗಳ ಖಾತೆಗಳಿಗೆ ಹೆಚ್ಚಿನ ಹಣ ಹರಿದು ಬರುವ ಸಾಧ್ಯತೆ ಇದ್ದು, ಅವುಗಳ ಖಾತೆ ಮೇಲೆ ಹೆಚ್ಚಿನ ನಿಗಾ ವಹಿಸಬೇಕು ಮತ್ತು ಸಂಶಯ ಮೂಡಿದಲ್ಲಿ ತಕ್ಷಣ ನಮ್ಮ ಗಮನಕ್ಕೆ ತರಬೇಕು. ಇವುಗಳ ಖಾತೆಗೆ ಕನಿಷ್ಠ 50 ಸಾವಿರ ರೂ. ಹಣ ಸಂಗ್ರಹವಾದರೂ ಮಾಹಿತಿ ನೀಡಬೇಕು ಎಂದು ಸೂಚಿಸಿದರು.

Advertisement

ಒಂದು ಕಡೆಯಿಂದ ಇನ್ನೊಂದು ಕಡೆಗೆ ಹಣ ವರ್ಗಾವಣೆ ಮಾಡುವ ಸಂದರ್ಭದಲ್ಲಿ ವಾಹನದೊಂದಿಗೆ ಅಗತ್ಯ ದಾಖಲೆ ತೆಗೆದುಕೊಂಡು, ಆ ಮೇಲೆ ಸಬೂಬು ಹೇಳಿದರೆ ನಡೆಯುವುದಿಲ್ಲ. ಏನೇ ಸಮಸ್ಯೆಗಳಿದ್ದರೂ ಗಮನಕ್ಕೆ ತರಬೇಕು ಎಂದರು.

ಜನಧನ ಖಾತೆಗಳ ಮೇಲೆ ನಿಗಾ ಇಡಿ: ಬಹಳಷ್ಟು ದಿನಗಳಿಂದ ನಿಷ್ಕ್ರಿಯವಾಗಿರುವ ಜನಧನ ಖಾತೆಗಳಿಗೆ ಹಾಗೂ ಶೂನ್ಯ ಖಾತೆಗಳಿಗೆ ದಿಢೀರ್‌ ಹಣ ಬಂದು ಬಿಳುವ ಸಾಧ್ಯತೆ ಇದ್ದು, ಪರಿಶೀಲಿಸಿ ವರದಿ ಕೊಡಬೇಕು. ಶಾಂತಿ ಮತ್ತು ನಿಷ್ಪಕ್ಷಪಾತ ಚುನಾವಣೆ ನಡೆಯುವ ನಿಟ್ಟಿನಲ್ಲಿ ಜನರ ಸೇವೆ ಮಾಡುವ ತಾವು ನಮ್ಮೊಂದಿಗೆ ಸಹಕರಿಸಬೇಕು ಎಂದು ಕೋರಿದರು. ಎಸ್‌ಪಿ ಅರುಣ ರಂಗರಾಜನ್‌ ಮಾತನಾಡಿದರು. ಸಭೆಯಲ್ಲಿ ಲೀಡ್‌ ಬ್ಯಾಂಕ್‌ ಅಧಿಕಾರಿಗಳು ಮತ್ತು ಜಿಲ್ಲೆಯ ವಿವಿಧೆಡೆಯಿಂದ ಆಗಮಿಸಿದ್ದ ಬ್ಯಾಂಕ್‌ ಅಧಿಕಾರಿಗಳು ಇದ್ದರು. 

ಜಿಲ್ಲೆಯಲ್ಲಿ 320 ಬ್ಯಾಂಕ್‌ ಶಾಖೆಗಳಿದ್ದು, ಬ್ಯಾಂಕ್‌ ವ್ಯವಸ್ಥಾಪಕರು ಮತ್ತು ಕೋ-ಆರ್ಡಿನೇಟರ್‌ಗಳು ಪ್ರತಿನಿತ್ಯ ವರದಿಯನ್ನು ಚುನಾವಣಾ ವೆಚ್ಚ ಪರಿಶೀಲನಾ ವಿಭಾಗಕ್ಕೆ ಸಲ್ಲಿಸಬೇಕು. ವಾರದ ವರದಿ ಸಲ್ಲಿಸುವುದು ಕಡ್ಡಾಯವಾಗಿದ್ದು, ನಿಗದಿಪಡಿಸಿದ ಅವಧಿಯೊಳಗೆ ವರದಿ ಸಲ್ಲಿಸದಿದ್ದರೆ ಪ್ರಜಾಪ್ರತಿನಿತ್ಯ ಕಾಯ್ದೆ ಸೆಕ್ಷನ್‌ 32ರ ಅನ್ವಯ ಬ್ಯಾಂಕ್‌ ವ್ಯವಸ್ಥಾಪಕರು ಮತ್ತು ಬ್ಯಾಂಕ್‌ ಕೋ-ಆರ್ಡಿನೇಟರ್‌ಗಳ ಮೇಲೆ ಕ್ರಿಮಿನಲ್‌ ಕೇಸ್‌ ದಾಖಲಿಸಲಾಗುವುದು.
 ಡಾ| ರಾಮ್‌ ಪ್ರಸಾತ್‌ ಮನೋಹರ್‌, ಜಿಲ್ಲಾ ಚುನಾವಣಾಧಿಕಾರಿ

Advertisement

Udayavani is now on Telegram. Click here to join our channel and stay updated with the latest news.

Next