Advertisement

ಸಂಶಯಾಸ್ಪದ ವ್ಯಕ್ತಿಗಳತ್ತ ನಿಗಾ ಇರಲಿ

11:39 AM Apr 28, 2019 | Team Udayavani |

ಹುಬ್ಬಳ್ಳಿ: ನಗರದ ಜನಸಂದಣಿ ಪ್ರದೇಶ, ಮಾಲ್, ವಾಣಿಜ್ಯ ಸಂಕೀರ್ಣ ಸೇರಿದಂತೆ ಧಾರ್ಮಿಕ ಕ್ಷೇತ್ರಗಳಲ್ಲಿ ಸಂಶಯಾಸ್ಪದ ವ್ಯಕ್ತಿಗಳು ತಿರುಗಾಡುತ್ತಿರುವುದು ಕಂಡುಬಂದರೆ ನಿರ್ಲಕ್ಷ್ಯ ತೋರಬೇಡಿ. ಅವರ ಬಗ್ಗೆ ತೀವ್ರ ನಿಗಾ ವಹಿಸಿ ತಕ್ಷಣ ಪೊಲೀಸರಿಗೆ ಮಾಹಿತಿ ಕೊಡಿ. ಜವಾಬ್ದಾರಿಯಿಂದ ಕೆಲಸ ಮಾಡಿ ಪ್ರತಿಯೊಬ್ಬರು ಪೊಲೀಸರಾಗಿ ಎಂದು ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಡಿಸಿಪಿ ಡಿ.ಎಲ್. ನಾಗೇಶ ಹೇಳಿದರು.

Advertisement

ಕಾರವಾರ ರಸ್ತೆಯ ಹಳೆಯ ಸಿಎಆರ್‌ ಮೈದಾನದ ಆವರಣದಲ್ಲಿ ಶನಿವಾರ ನಡೆದ ಸಾರ್ವಜನಿಕ ಸುರಕ್ಷತಾ ಕ್ರಮಗಳ ಕುರಿತ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಶ್ರೀಲಂಕಾದಲ್ಲಿ ನಡೆದ ಭಯೋತ್ಪಾದಕರ ದಾಳಿ ಅಮಾನವೀಯವಾಗಿದ್ದು, ಉಗ್ರರು ತಮಿಳುನಾಡಿನ ಸಂಪರ್ಕ ಹೊಂದಿದ್ದರಿಂದ ಅವರ ಬಗ್ಗೆ ಹೆಚ್ಚಿನ ನಿಗಾ ವಹಿಸಬೇಕಾಗಿದೆ. ಅವರು ಒಂದು ಸಮುದಾಯದ ಜನರನ್ನು ಗುರಿಯಾಗಿಟ್ಟುಕೊಂಡು ಜನರು ಹೆಚ್ಚಾಗಿ ಸೇರುವ ಸ್ಥಳದಲ್ಲೇ ದಾಳಿ ನಡೆಸುತ್ತಿದ್ದಾರೆ. ಆದ್ದರಿಂ ಸಾರ್ವಜನಿಕರು ಅನುಮಾನಾಸ್ಪದ ವ್ಯಕ್ತಿಗಳ ಬಗ್ಗೆ ಗಮನ ಹರಿಸಬೇಕು ಎಂದರು.

ಧಾರ್ಮಿಕ ಕ್ಷೇತ್ರಗಳು, ಶಾಲಾ-ಕಾಲೇಜು ಆಡಳಿತ ಮಂಡಳಿಯವರು ಸಿಸಿ ಕ್ಯಾಮರಾಗಳನ್ನು ಅಳವಡಿಸಬೇಕು. ಮಾಲ್ ಮತ್ತು ವಾಣಿಜ್ಯ ಸಂಕೀರ್ಣದವರು ಪ್ರವೇಶದ್ವಾರಗಳ ಬಳಿ ಡಿಎಫ್‌ಎಂಡಿ ಅಳವಡಿಸುವ ಮೂಲಕ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು. ಹೆಚ್ಚಿನ ಪ್ರಮಾಣದಲ್ಲಿ ಜನ ಸೇರುವ ಪ್ರದೇಶಗಳಲ್ಲಿ ಕರ್ತವ್ಯದಲ್ಲಿರುವ ಖಾಸಗಿ ಭದ್ರತಾ ಸಿಬ್ಬಂದಿ ಯಾರಾದರೂ ಶಂಕಿತರೆಂದು ಕಂಡುಬಂದರೆ ಅವರನ್ನು ತಪಾಸಣೆ ಮಾಡಬೇಕು. ನಿರಾಕರಿಸಿದರೆ ತಕ್ಷಣ ಪೊಲೀಸರಿಗೆ ಮಾಹಿತಿ ಕೊಡಿ. ಅವರು ಒಳಗೆ ಪ್ರವೇಶಿಸದಂತೆ ಮಧ್ಯದಲ್ಲಿಯೇ ತಡೆಗಟ್ಟುವ ಮುಖಾಂತರ ದೊಡ್ಡ ಅನಾಹುತ ತಪ್ಪಿಸಬಹುದು ಎಂದು ಹೇಳಿದರು.

ಅಭಿಪ್ರಾಯ, ಸಲಹೆ: ದಾಜಿಬಾನಪೇಟೆಯ ಭಾಸ್ಕರ ಜಿತೂರಿ, ಕೇಶ್ವಾಪುರದ ಜೋಸೆಫ್‌, ವಿದ್ಯಾನಗರದ ಶಂಕರಮೂರ್ತಿ, ಉಣಕಲ್ಲದ ಮೆಣಸಿನಕಾಯಿ, ಬಿಗ್‌ಬಜಾರ್‌ನ ಅನಿಲ, ಭೈರಿದೇವರಕೊಪ್ಪದ ಚಂದ್ರಪ್ಪ, ಕಿಮ್ಸ್‌ ನ ಆಂಬ್ಯುಲೆನ್ಸ್‌ ಚಾಲಕ ಮಕಬೂಲಸಾಬ ತಾಳಿಕೋಟಿ, ಅಬ್ದುಲಅಜೀಜ ಮುಲ್ಲಾ, ಡಾ| ಸುಮಾ ಮಾತನಾಡಿ, ನಗರಕ್ಕೆ ಹೊರಗಿನಿಂದ ಬರುವ ಜನರ, ವಾಹನಗಳ ತಪಾಸಣೆ ಮಾಡಬೇಕು. ರಾತ್ರಿ ಗಸ್ತು, ಬೀಟ್ ವ್ಯವಸ್ಥೆ ಸುಧಾರಿಸಬೇಕು. ಧಾರ್ಮಿಕ ಉತ್ಸವ, ಹಬ್ಬ, ಜಾತ್ರೆಗಳ ಸಂದರ್ಭಗಳಲ್ಲಿ ಹಾಗೂ ಹೆಚ್ಚಿನ ಜನರು ಸೇರುವ ಸ್ಥಳಗಳಲ್ಲಿ ಆಗಂತುಕರ ಬಗ್ಗೆ ತೀವ್ರ ನಿಗಾ ವಹಿಸಬೇಕು ಎಂದು ಸಲಹೆ ನೀಡಿದರು.

ಸಿಸಿ ಕ್ಯಾಮರಾ ಅಳವಡಿಸಿದರೆ ಘಟನೆ ತಡೆಯಲು ಆಗಲ್ಲ. ಅದಕ್ಕಾಗಿ ಸಂಶಯಾಸ್ಪದ ವ್ಯಕ್ತಿಗಳ ಬಗ್ಗೆ ಮುಂಜಾಗ್ರತೆ ವಹಿಸಬೇಕು. ಉಣಕಲ್ಲ ಕೆರೆ ದಂಡೆ ಮೇಲಿನ ಉಳವಿ ಚನ್ನಬಸವೇಶ್ವರ ದೇವಸ್ಥಾನ ಹಾಗೂ ದುರ್ಗಾದೇವಿ ಗುಡಿ ಬಳಿ ಸಿಸಿ ಕ್ಯಾಮರಾ ಅಳವಡಿಸಬೇಕು. ಗೋವಾ, ಮಹಾರಾಷ್ಟ್ರಗಳಿಂದ ಬರುವ ವಾಹನಗಳನ್ನು ತಪಾಸಣೆಗೊಳಪಡಿಸಬೇಕು. ಪೊಲೀಸ್‌ ಇಲಾಖೆಯಿಂದ ಮೊಹಲ್ಲಾಗಳಲ್ಲಿ ಸಭೆ ನಡೆಸಿ ಶಂಕಿತ ವ್ಯಕ್ತಿಗಳ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯ ಆಗಬೇಕು. ಸಾರ್ವಜನಿಕ ಸ್ಥಳಗಳಲ್ಲಿ 4-5 ದಿನಗಳ ವರೆಗೆ ನಿಂತಿರುವ ಅನಾಮಧೇಯ ವಾಹನಗಳ ಬಗ್ಗೆ ಗಮನಹರಿಸಬೇಕು ಎಂದರು.

Advertisement

ಸಭೆಯಲ್ಲಿ ನಗರದ ವಿವಿಧ ಚರ್ಚ್‌ಗಳ ಪಾದ್ರಿಗಳು, ವಿವಿಧ ಧರ್ಮಗಳ ಮುಖಂಡರು, ಸಾರ್ವಜನಿಕರು, ಉತ್ತರ ವಿಭಾಗದ ವಿವಿಧ ಠಾಣೆಗಳ ಇನ್ಸ್‌ಪೆಕ್ಟರ್‌ಗಳು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next