Advertisement

ಯೋಜನೆಗಳು ಫಲಾನುಭವಿಗಳಿಗೆ ತಲುಪುವಂತೆ ನಿಗಾ: ಡಿಸಿ ಸೂಚನೆ

02:03 AM Jun 07, 2022 | Team Udayavani |

ಮಂಗಳೂರು: ಅಲ್ಪಸಂಖ್ಯಾಕರಿಗೆ ಇರುವ ಯೋಜನೆಗಳ ಬಗ್ಗೆ ವ್ಯಾಪಕ ಪ್ರಚಾರ ಕೈಗೊಂಡು ಅರ್ಹ ಫಲಾನುಭವಿಗಳಿಗೆ ಅದರ ಲಾಭ ತಲುಪುವಂತೆ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಡಾ| ರಾಜೇಂದ್ರ ಕೆ.ವಿ. ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.

Advertisement

ಸೋಮವಾರ ಜರಗಿದ ಪ್ರಧಾನಮಂತ್ರಿ 15 ಅಂಶಗಳ ಕಾರ್ಯಕ್ರಮಗಳ ಪ್ರಗತಿ ಪರಿಶೀಲನ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಜಿಲ್ಲೆಯಲ್ಲಿರುವ ಅಲ್ಪಸಂಖ್ಯಾಕ ವಸತಿ ರಹಿತ ಕುಟುಂಬಗಳ ಮಾಹಿತಿ ಸಂಗ್ರಹಿಸಿ ಅವರಿಗೆ ಸೂಕ್ತ ವಸತಿ ಯೋಜನೆಯನ್ನು ಕಲ್ಪಿಸಿಕೊಡಬೇಕು, ಮುಖ್ಯವಾಗಿ ಜಿಲ್ಲೆಯ ಅಲ್ಪಸಂಖ್ಯಾಕರ ಏಳಿಗೆಗೆ ಸಂಬಂಧಿಸಿದಂತೆ ಎಲ್ಲ ಯೋಜನೆಗಳೂ ಪ್ರತಿ ಫಲಾನುಭವಿಯನ್ನೂ ತಲುಪುವಂತೆ ಗುರಿ ನಿಗದಿಪಡಿಸಿ, ನಿಗದಿತ ಕಾಲಾವಧಿಯಲ್ಲಿ ಆ ಗುರಿಯನ್ನು ಸಾಧಿಸುವಂತೆ ನಿರ್ದೇಶನ ನೀಡಿದರು.

ಪ್ರಧಾನ ಮಂತ್ರಿ ಮಾತೃವಂದನಾ ಯೋಜನೆಯ ಸವಲತ್ತು ಪಡೆದ ಹಾಗೂ ಪಡೆಯದ ಮುಸ್ಲಿಂ, ಕ್ರಿಶ್ಚಿಯನ್‌, ಬೌದ್ಧ, ಜೈನ್‌, ಸಿಖ್‌, ಪಾರ್ಸಿ ಸೇರಿದಂತೆ ಅಲ್ಪಸಂಖ್ಯಾಕ‌ ಸಮುದಾಯದ ಫಲಾನುಭವಿಗಳ ಪಟ್ಟಿ ಒದಗಿಸುವಂತೆ ಜಿಲ್ಲಾ ಅಲ್ಪಸಂಖ್ಯಾಕರ ಇಲಾಖೆಯ ಜಿಲ್ಲಾ ಅಧಿಕಾರಿ ಅಂಜನಪ್ಪ ಅವರಿಗೆ ಸೂಚಿಸಿದರು. ಜಿಲ್ಲಾ ಆರೋಗ್ಯಾಧಿಕಾರಿಗಳಿಂದ ಮಾಹಿತಿ ಪಡೆದು, ತಾಲ್ಲೂಕುವಾರು ಗರ್ಭಿಣಿಯರನ್ನು ಸಂಪರ್ಕಿಸಿ, ಮಾತೃವಂದನಾ ಯೋಜನೆಯ ಸದುಪಯೋಗ ಪಡೆದಿರುವ ಬಗ್ಗೆ ಮಾಹಿತಿ ನೀಡುವಂತೆ ಸೂಚಿಸಿದ ಅವರು, ಶಾಲೆಯಿಂದ ಹೊರಗುಳಿದ ಪ್ರತಿ ವಿದ್ಯಾರ್ಥಿಗಳ ಮನೆಗಳಿಗೆ ಭೇಟಿ ನೀಡಿ ಅಲ್ಪಸಂಖ್ಯಾಕರ ಇಲಾಖೆಯ ಯೋಜನೆಗಳ ಮಾಹಿತಿ ನೀಡಿ ಅಂತಹ ಮಕ್ಕಳ ಪೋಷಕರ ಮನವೊಲಿಸಿ ಆ ವಿದ್ಯಾರ್ಥಿಗಳನ್ನು ಮರಳಿ ಶಾಲೆಗೆ ಕರೆ ತರುವಂತೆ ನಿರ್ದೇಶನ ನೀಡಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ| ಕಿಶೋರ್‌, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಸುಧಾಕರ್‌, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಪಾಪಭೋವಿ, ಜಿಲ್ಲಾ ಅಲ್ಪಸಂಖ್ಯಾಕ‌ರ ಕಚೇರಿ ಅಧೀಕ್ಷಕ ವೀರಭದ್ರಪ್ಪ, ತಾಲೂಕು ವಿಸ್ತರಣಾಧಿಕಾರಿ ಮಂಜುನಾಥ್‌ ಆರ್‌. ಸೇರಿದಂತೆ ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next