Advertisement

ವಿದೇಶಿ ಪ್ರವಾಸಿಗರ ಬಗ್ಗೆ ನಿಗಾವಹಿಸಿ

06:21 PM Mar 06, 2020 | Suhan S |

ರಾಮನಗರ: ಕೊರೊನಾ ವೈರಾಣು ಭಾದಿತ ದೇಶಗಳಿಂದ ಹಿಂದಿಗಿರುವ ಮತ್ತು ಆ ದೇಶಗಳಿಂದ ಬರುವ ಪ್ರವಾಸಿಗಳ ಬಗ್ಗೆ ಹೆಚ್ಚಿನ ನಿಗಾವಹಿಸಿ ಎಂದು ಜಿಲ್ಲಾಧಿಕಾರಿ ಎಂ.ಎಸ್‌.ಅರ್ಚನಾ ಆರೋಗ್ಯ ಇಲಖೆಯ ಅಧಿಕಾರಿಗಳಿಗೆ ಸೂಚನೆ ಕೊಟ್ಟರು. ಜಿಲ್ಲಾ ಕಚೇರಿಗಳ ಸಂಕೀರ್ಣದಲ್ಲಿರುವ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಕೊರೊನಾ ವೈರಸ್‌ ಕುರಿತ ಸಮನ್ವಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

Advertisement

ವಿದೇಶಗಳಿಂದ ಬರುವವರನ್ನು ವಿಮಾನ ನಿಲ್ದಾಣದಲ್ಲೇ ಪರೀಕ್ಷಿಸಲಾಗುತ್ತದೆ. ಆ ವಿವರಗಳನ್ನು ಜಿಲ್ಲಾ ಆರೋಗ್ಯ ಇಲಾಖೆಗೂ ಸಹ ಮಾಹಿತಿ ನೀಡಲಾಗುತ್ತದೆ. ಇವರ ಬಗ್ಗೆ ಜಿಲ್ಲಾ ಸರ್ವೇಕ್ಷಣಾ ತಂಡದವರು ಹೆಚ್ಚಿನ ನಿಗಾ ವಹಿಸಬೇಕು. ಸರ್ಕಾರ ನೀಡುವ ಸೂಚನೆಗಳನ್ವಯ ಪರೀಕ್ಷೆಗಳನ್ನು ನಡೆಸುವಂತೆ ಅವರು ಅಧಿಕಾರಿಗಳಿಗೆ ತಿಳಿಸಿದರು.

ಹೊರದೇಶದಿಂದ ಬಂದ ಪ್ರವಾಸಿಗರಿಂದ ಸೋಂಕು ತಗಲುವ ಸಾಧ್ಯತೆ ಇರುತ್ತದೆ. ಹೀಗಾಗಿ ತುರ್ತಾಗಿ ಜಿಲ್ಲೆಯಲ್ಲಿರುವ ಹೋಟೆಲ್‌, ರೆಸಾರ್ಟ್‌ ಮಾಲೀಕರ ಸಭೆ ಕರೆದು ಅವರಿಗೆ ಪ್ರವಾಸಿಗರಲ್ಲಿ ರೋಗದ ಲಕ್ಷಣಗಳು ಕಂಡು ಬಂದಲ್ಲಿ ಕೈಗೊಳ್ಳಬೇಕಾದ ಕ್ರಮಗಳು ಹಾಗೂ ಅನುಸರಿಸಬೇಕಾದ ಮುನ್ನೆಚ್ಚರಿಕಾ ಕ್ರಮಗಳ ಬಗ್ಗೆ ತಿಳಿಸಿ ಎಂದು ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ಆದೇಶ ನೀಡಿದರು. ಈ ವಿಚಾರದಲ್ಲಿ ಪ್ರವಾಸಿ ಮಿತ್ರರಲ್ಲೂ ಜಾಗೃತಿ ಮೂಡಿಸಿ ಎಂದರು.

ಕೊರೊನಾ ವೈರಸ್‌ ಬಗ್ಗೆ ಆತಂಕ ಬೇಡ: ಕೊರೊನಾವೈರಸ್‌ ಬಗ್ಗೆ ಆತಂಕ ಬೇಡ ಎಂದು ಜನರಲ್ಲಿ ಧೈರ್ಯ ತುಂಬುವಂತೆ ಅಧಿಕಾರಿಗಳಿಗೆ ಸಲಹೆ ನೀಡಿದ ಅವರು ಸಾರ್ವಜನಿಕರು ಮುನ್ನೆಚ್ಚರಿಕಾ ಕ್ರಮಗಳನ್ನು ಅನುಸರಿಸುವಂತೆ ಪ್ರೋತ್ಸಾಹಿಸಿ ಎಂದರು. ಜಿಲ್ಲಾಡಳಿತ ಸೋಂಕನ್ನು ತಡೆಗಟ್ಟಲು ಎಲ್ಲಾ ರೀತಿಯಲ್ಲೂ ಸಜ್ಜಾಗಿದ್ದು, ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಕೆಲಸವಾಗಲಿ ಎಂದರು.

ಕೊರೊನಾ ವೈರಸ್‌ ಹರಡದಂತೆ ತಡೆಗಟ್ಟಲು ಸಾರ್ವಜನಿಕರು ಹಾಗೂ ಎಲ್ಲಾ ಇಲಾಖೆಗಳ ಸಹಭಾಗಿತ್ವ ಅತ್ಯಂತ ಮುಖ್ಯವಾಗುತ್ತದೆ. ಶಾಲಾ, ಕಾಲೇಜು, ವಸತಿ ಶಾಲೆಗಳು, ಅಂಗನವಾಡಿಗಳು ಹಾಗೂ ಹಾಸ್ಟೆಲ್‌ ಗಳಲ್ಲಿರುವ ವಿದ್ಯಾರ್ಥಿಗಳಲ್ಲಿ ನೆಗಡಿ, ಕೆಮ್ಮು, ಉಸಿರಾಟದ ತೊಂದರೆ, ನ್ಯುಮೋನಿಯಾದಂತಹ ಲಕ್ಷಣಗಳು ಕಂಡುಬಂದರೆ ಅವರ ಪೋಷಕರಿಗೆ ತಿಳಿಸಿ ಅವರಿಗೆ ರಜೆ ಕೊಟ್ಟು ಚಿಕಿತ್ಸೆ ಪಡೆದುಕೊಳ್ಳುವಂತೆ ತಿಳಿಸಿ.

Advertisement

ಶಾಲೆಗಳಲ್ಲಿ ಬೆಳಗಿನ ಪ್ರಾರ್ಥನೆಯ ಸಂದರ್ಭದಲ್ಲಿ ಮಕ್ಕಳಿಗೆ ಸ್ವತ್ಛತೆಯ ಬಗ್ಗೆ ಅರಿವು ಮೂಡಿಸಿ ಎಂದು ಅವರು ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.

ಜಿಪಂ ಸಿಇಒ ಇಕ್ರಂ ಮಾತನಾಡಿ, ಕೊರೊನ ವೈರಸ್‌ ಗೆ ಲಸಿಕೆ ಇಲ್ಲ. ಪತ್ತೆ ಹಚ್ಚಿ ಹರಡದಂತೆ ತಡೆಗಟ್ಟುವುದು ಅತ್ಯಂತ ಮುಖ್ಯವಾದ ಕೆಲಸ. ಜಿಲ್ಲೆ ಯಲ್ಲಿರುವ ಕೈಗಾರಿಕೆಗಳಲ್ಲಿನ ಸಿಬ್ಬಂದಿ ಮತ್ತು ನೌಕರರಲ್ಲೂ ಜಾಗೃತಿ ಮೂಡಿಸುವ ಅವಶ್ಯಕತೆ ಇದೆ ಎಂದರು.

ಸಭೆಯಲ್ಲಿ ಬಾಷ್‌, ಟಯೋಟಾ ಕೈಗಾರಿಕಾ ಸಂಸ್ಥೆ , ಯೋಗ ಸಂಸ್ಥೆಯ ಪ್ರತಿನಿಧಿಗಳು ಭಾಗವಹಿಸಿದ್ದರು. ತಮ್ಮ ವ್ಯಾಪ್ತಿಯಲ್ಲಿ ಕೊರೊನಾ ವೈರಸ್‌ಗೆ ಸಂಬಂಧಿಸಿದಂತೆ ಕೈಗೊಂಡಿರುವ ಕ್ರಮಗಳ ಬಗ್ಗೆ ಮಾತನಾಡಿದರು.

ಡಿಎಚ್‌ಒ ಡಾ.ನಿರಂಜನ್‌ ಮಾತನಾಡಿ ಸ್ಕ್ರೀನಿಂಗ್‌ ವೇಳೆ ಕೊರೊನಾ ರೋಗ ದೃಢಪಟ್ಟರೆ ಅವರ ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಯಲ್ಲಿ ಪ್ರತ್ಯೇಕ ಕೊಠಡಿಯನ್ನು ತರೆಯಲಾಗಿದೆ ಎಂದು ಸಭೆಗೆ ಮಾಹಿತಿ ಕೊಟ್ಟರು. ವೈಯಕ್ತಿಕ ಸ್ವತ್ಛತೆ ಕಾಪಾಡಿಕೊಂಡರೆ, ವೈರಸ್‌ ಹಾವಳಿಯಿಂದ ದೂರ ಇರಬಹುದು. ಸೋಂಕಿನ ಲಕ್ಷಣಗಳು ಕಂಡುಬಂದಲ್ಲಿ ಹತ್ತಿರದ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ಪರೀಕ್ಷಿಸಿಕೊಳ್ಳಿ ಎಂದು ಅವರು ನಾಗರಿಕರಲ್ಲಿ ಮನವಿ ಮಾಡಿದರು.

ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ಪ್ರಸನ್ನ ಕುಮಾರ್‌, ಜಿಲ್ಲಾ ಆರ್‌ಸಿಹೆಚ್‌ ಅಧಿಕಾರಿ ಡಾ.ಪದ್ಮಾ, ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ. ವಿಜಯ ನರಸಿಂಹ, ರಾಮನಗರ ತಾ.ವೈದ್ಯಾಧಿಕಾರಿ ಡಾ. ಶಶಿಕಲಾ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಗಂಗಾಧರ್‌ ಬಿ.ಎಸ್‌., ಪ್ರವಾ ಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕರಾದ ವಿನಯ್‌ ಕುಮಾರ್‌, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಸಿ.ವಿ. ರಾಮನ್‌, ಅರಣ್ಯ ಸಂರಕ್ಷಣಾಧಿಕಾರಿ ನಾರಾಯಣ ಸ್ವಾಮಿ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next