ಹಾಸನ: ಮಾರುಕಟ್ಟೆಗಳಲ್ಲಿ ದಿನಸಿ, ತರಕಾರಿ ಸೇರಿದಂತೆ ಆಹಾರ ಪದಾರ್ಥಗಳನ್ನು ಹೆಚ್ಚಿನ ದರಕ್ಕೆ ಮಾರಾಟ ಮಾಡುವ ವರ್ತಕರ ವಿರುದ್ಧ ತಹಶೀಲ್ದಾರರು ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಆರ್.ಗಿರೀಶ್ ನಿರ್ದೇಶನ ನೀಡಿದರು.
ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ತಾಲೂಕು ಮಟ್ಟದ ಅಧಿಕಾರಿಗಳೊಂದಿಗೆ ವಿಡಿಯೋ ಸಂವಾದ ನಡೆಸಿದ ಅವರು, ಎಲ್ಲಾ ತಾಲೂಕುಗಳಲ್ಲೂ ಎಪಿಎಂಸಿಗಳ ಮೂಲಕ
ನಿಗದಿತ ದರಕ್ಕೆ ಆಹಾರ ಪದಾರ್ಥಗಳ ಪೂರೈಕೆ ಯಾಗುವಂತೆ ಹಾಗೂ ಚಿಲ್ಲರೆ ಅಂಗಡಿಗಳಲ್ಲಿಯೂ ಹೆಚ್ಚು ದರಕ್ಕೆ ಆಹಾರ ಪದಾರ್ಥ ಮಾರಾಟವಾಗದಂತೆ ಕಣ್ಗಾವಲಿಡ ಬೇಕು. ಅಂಗಡಿಗಳ ಮುಂದೆ ಕಡ್ಡಾಯವಾಗಿ ದರ ಪಟ್ಟಿ ಪ್ರಕಟಿಸಬೇಕು. ನಿಯಮ ಉಲ್ಲಂಘಿಸಿದವರ ವಿರುದ್ಧ ಕ್ರಮ ಕೈಗೊಳ್ಳಿ ಎಂದು ಸೂಚನೆ ನೀಡಿದರು.
ಕ್ವಾರಂಟೈನ್ ಮಾಹಿತಿ ನೀಡಿ: ಹೊರ ಜಿಲ್ಲೆಗಳಿಂದ ಬರುತ್ತಿರುವವರು ಮತ್ತು ಹೋಂ ಕ್ವಾರಂಟೈನ್‌ಗೆ ಒಳಪಡುತ್ತಿರುವವರ ಬಗ್ಗೆ ತಹಶೀಲ್ದಾರರು ಪ್ರತಿದಿನವೂ ಮಾಹಿತಿ ಕಲೆ ಹಾಕಿ ವರದಿ ನೀಡಬೇಕು. ಎಲ್ಲಾ ತಾಲೂಕು ಗಳಲ್ಲಿಯೂ ಕ್ಷಯ ರೋಗಿಗಳ ಸಮೀಕ್ಷೆ ಮಾಡಿ ಅವರನ್ನು ಸಂಪರ್ಕಿಸಿ ಆರೋಗ್ಯದಲ್ಲಿ ವ್ಯತ್ಯಾಸ ಇದ್ದವರನ್ನು ತಪಾಸಣೆ ಮಾಡಬೇಕು ಎಂದು ಜಿಲ್ಲಾ ಕ್ಷಯರೋಗ ವೈದ್ಯಾಧಿಕಾರಿ ಡಾ. ನಾಗೇಶ್ ಆರಾಧ್ಯ ಅವರಿಗೆ ಸೂಚಿಸಿದರು.
ಚೆಕ್ ಪೊಸ್ಟ್ ಗಳಲ್ಲಿ ಕಟ್ಟುನಿಟ್ಟಾಗಿ ಕಾರ್ಯಾಚರಣೆ ನಡೆಸಿದರೂ ಒಳದಾರಿ ಮೂಲಕ ಜಿಲ್ಲೆಯೊಳಗೆ ಜನರು ಬರುತ್ತಿರುವ ದೂರುಗಳಿದ್ದು ಹೆಚ್ಚಿನ ಜಾಗ್ರತೆ ವಹಿಸಬೇಕು. ಕಂದಾಯ ಇಲಾಖೆ, ಶಿಕ್ಷಣ ಇಲಾಖೆ ಸಿಬ್ಬಂದಿಯನ್ನು ಚೆಕ್ ಪೋಸ್ಟ್ ಗಳಲ್ಲಿ ಕಾರ್ಯ ನಿರ್ವಹಿಸಲು ಬಳಸಿಕೊಳ್ಳುವ ಅವಕಾಶವಿದೆ. ಜಿಲ್ಲಾದ್ಯಂತ ಇನ್ನೂ ಎರಡು ವಾರಗಳ ಕಾಲ ಕಟ್ಟುನಿಟ್ಟಾಗಿ ಕಾರ್ಯನಿರ್ವಹಿಸಬೇಕು ಎಂದು ಡೀಸಿ ಅಧಿಕಾರಿಗಳಿಗೆ ಸೂಚಿಸಿದರು.
ಪಡಿತರಕ್ಕೆ ಒಟಿಪಿ ಕಡ್ಡಾಯ: ಜಿಲ್ಲಾ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಉಪ ನಿರ್ದೇಶಕಿ ಸರಿತಾ ಮಾತನಾಡಿ, ಏ.24 ರ ನಂತರ ಆನ್ ಲೈನ್ ಪೋರ್ಟಲ್ ಮಾಡಿ ಗ್ರಾಹಕರಿಗೆ ಅಗತ್ಯ ಸಾಮಗ್ರಿ ಒದಗಿಸಲಾಗುತ್ತದೆ. ಜಿಲ್ಲೆಯ ಎಲ್ಲಾ ನ್ಯಾಯಬೆಲೆ ಅಂಗಡಿಗಳಲ್ಲಿ ಉಚಿತವಾಗಿ ಪಡಿತರ ವಿತರಿಸಲಾಗುತ್ತದೆ. ಈ ಬಾರಿ ಒಟಿಪಿ ಕಡ್ಡಾಯವಾಗಿದ್ದು, ಪ್ರತಿ ಯೂನಿಟ್‌ಗೆ 10 ಕೇಜಿ ಅಕ್ಕಿ ಮತ್ತು 1 ಕೇಜಿ ತೊಗರಿ ಬೆಳೆಯನ್ನು ಉಚಿತವಾಗಿ ನೀಡಲಾಗುವುದು ಎಂದು ತಿಳಿಸಿದರು.
ಪಡಿತರ ಚೀಟಿಯಿಲ್ಲದ ಹೊರ ರಾಜ್ಯದ ಕುಟುಂಬದವರಿಗೂ ಯೂನಿಟ್ ಗೆ 5ಕೇಜಿ ಅಕ್ಕಿ ನೀಡಲಾಗುತ್ತದೆ. ಕೇಜಿಗೆ 3 ರೂ.ನಂತೆ ಹಣ ಪಡೆದು ಪಡಿತರ ವಿತರಿಸಲಾಗುತ್ತದೆ
ಎಂದು ಹೇಳಿದರು. ಡಿಎಚ್‌ಒ ಡಾ.ಸತೀಶ್, ಎಡೀಸಿ ಕವಿತಾ ರಾಜರಾಂ, ಉಪಭಾಗಾಧಿಕಾರಿ ಡಾ.ನವೀನ್ ಭಟ್, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಬಿ.ಎ. ಜಗದೀಶ್ ಸಭೆಯಲ್ಲಿ ಹಾಜರಿದ್ದರು.
ಪ್ರಾರ್ಥನೆಗೆ ಅವಕಾಶವಿಲ್ಲ
ಏ.24ರಿಂದ ರಂಜಾನ್ ಆರಂಭವಾಗ ಲಿದ್ದು, ಬೇಕರಿ ಸೇರಿದಂತೆ ಯಾವುದೇ ಬಗೆಯ ಸ್ಯಾಕ್ಸ್ ಅಂಗಡಿಗಳನ್ನು ತೆರೆಯ ಬಾರದು. ಮಸೀದಿಗಳಿಗೆ ಹೋಗಿ ಪ್ರಾರ್ಥನೆ ಸಲ್ಲಿಸುವುದಕ್ಕೆ ಅವಕಾಶವಿಲ್ಲ. ಮುಸಲ್ಮಾನರು ಮನೆಯಲ್ಲಿಯೇ ಪ್ರಾರ್ಥನೆ ಸಲ್ಲಿಸಬೇಕು ಎಂದರು.