Advertisement

ಕುಡಿಯುವ ನೀರಿನ ಬಗ್ಗೆ ನಿಗಾ ವಹಿಸಿ

04:41 PM May 23, 2019 | Suhan S |

ಮುಧೋಳ: ತಾಲೂಕಿನಲ್ಲಿ ಕುಡಿಯುವ ನೀರಿನ ತೊಂದರೆಯಾಗದಂತೆ ನಿಗಾ ವಹಿಸಬೇಕು ಎಂದು ಶಾಸಕ ಗೋವಿಂದ ಕಾರಜೋಳ ಅಧಿಕಾರಿಗಳಿಗೆ ತಾಕೀತು ಮಾಡಿದರು.

Advertisement

ಬುಧವಾರ ಸ್ಥಳೀಯ ತಾಲೂಕಾ ಪಂಚಾಯತ್‌ ಸಭಾಭವನದಲ್ಲಿ ಬರ ನಿರ್ವಹಣೆ ಕುರಿತು ವಿವಿಧ ಇಲಾಖೆಗಳ ಅಧಿಕಾರಿಗಳ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ತಾಲೂಕಿನ ಕುಳಲಿ, ಶಿರೋಳ, ನಾಗರಾಳ ,ರಂಜಣಗಿ,

ಉತ್ತೂರ, ಲೋಕಾಪುರ, ಅಕ್ಕಿಮರಡಿ, ಮಂಟೂರ, ಕಿಶೋರಿ, ದಾದನಟ್ಟಿ, ಬುದ್ನಿ ಕೆ.ಡಿ., ನಾಗರಾಳ, ಲಕ್ಷಾನಟ್ಟಿ ಗ್ರಾಮದ ಜನವಸತಿ ಪ್ರದೇಶದಲ್ಲಿ ಕುಡಿಯುವ ನೀರಿನ ಸಮಸ್ಯೆ ಉಲ್ಬಣಗೊಂಡಿದೆ ಎಂದು ಗ್ರಾಮಸ್ಥರಿಂದ ದೂರುಗಳು ಬಂದಿವೆ.ಕೂಡಲೇ ಗ್ರಾಮಕ್ಕೆ ಭೇಟಿ ನೀಡಿ ಕುಡಿಯುವ ನೀರಿನ ಸಮಸ್ಯೆಗೆ ಪರಿಹಾರ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಬಗ್ಗೆ ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳು ಯಾವ ಪ್ರದೇಶದಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ ಎಂಬುದನ್ನು ಖುದ್ದಾಗಿ ಪರಿಶೀಲಿಸಿ, ಅವಶ್ಯಕತೆ ಇದ್ದಲ್ಲಿ ಕೊಳವೆ ಬಾವಿ ಕೊರೆಯಿಸಿ. ಇಲ್ಲವೇ ಟ್ಯಾಂಕರ್‌ ಮೂಲಕವಾದರೂ ನೀರಿನ ವ್ಯವಸ್ಥೆ ಮಾಡಬೇಕೆಂದು ಹೇಳಿದರು. ಪ್ರಸಕ್ತ ವರ್ಷದಲ್ಲಿ ಕುಡಿಯುವ ನೀರಿನ ಸಮಸ್ಯೆ ಅಷ್ಟೊಂದು ಕಂಡು ಬಂದಿಲ್ಲವಾದರೂ ಕೆಲವು ಭಾಗಗಳಲ್ಲಿ ಸ್ಪಲ್ಪಮಟ್ಟಿಗೆ ಸಮಸ್ಯೆ ಉಂಟಾಗಿರುವುದು ಕಂಡುಬಂದಿದೆ. ಅಂತಹ ಸ್ಥಳಗಳಲ್ಲಿ ಕುಡಿಯುವ ನೀರಿನ ಸಮಸ್ಯೆಯಾಗದಂತೆ ನೋಡಿಕೊಳ್ಳಬೇಕು. ಕುಡಿಯುವ ನೀರಿನ ಸಮಸ್ಯೆ ಇದೆ ಎಂದು ನನ್ನ ಬಳಿ ಗ್ರಾಮಸ್ಥರೂ ಬರದಂತೆ ನೋಡಿಕೊಳ್ಳಿ ಎಂದು ತಿಳಿಸಿದರು.

ಸರ್ಕಾರಿ ಜಾಗಗಳಲ್ಲಿಯೇ ಬೋರವೆಲ್ಗಳನ್ನು ಹಾಕಬೇಕು. ಯಾವುದೇ ವ್ಯಕ್ತಿಗೆ ಮಾತ್ರ ಸೀಮಿತವಾಗಬಾರದು. ಎಲ್ಲರಿಗೂ ನೀರು ಸಮರ್ಪಕವಾಗಿ ದೊರೆಯುವಂತೆ ನೋಡಿಕೊಳ್ಳಬೇಕೆಂದರು. ಅರಣ್ಯ ಇಲಾಖೆಗೆ ಸೇರಿರುವ ಜಾಗೆಯಲ್ಲಿ ಇಲಾಖೆಯವರು ಕೊಳವೆ ಬಾವಿ ಕೊರೆಯಿಸುವ ಸಂದರ್ಭದಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಅಡ್ಡಿಪಡಿಸುತ್ತಿರುವುದಾಗಿ ಸಭೆಯಲ್ಲಿ ಚರ್ಚಿಸಿದಾಗ ಕುಡಿಯುವ ನೀರಿಗೆ ಯಾರೂ ಅಡ್ಡಿಪಡಿಸಬಾರದು. ಭೂಮಿಯ ಯಾವ ಭಾಗದಲ್ಲಿ ನೀರು ಇರುತ್ತದೆಯೋ ಅಲ್ಲಿ ಕೊಳಬೆ ಬಾವಿ ಕೊರೆಯಿಸಬೇಕಾಗುತ್ತದೆ. ಅದಕ್ಕಾಗಿ ಅರಣ್ಯ ಇಲಾಖೆಯವರು ಯಾವುದೇ ತಕರಾರು ಮಾಡಬಾರದೆಂದು ತಿಳಿಸಿದರು.

Advertisement

ಮುಧೋಳ ನಗರದ ಹೌಸಿಂಗ್‌ ಕಾಲೋನಿ, ಟೀಚರ್ಸ್‌ ಕಾಲೋನಿ, ಆನಂದ ನಗರ, ಜಯನಗರ, ಸುಡಗಾಡಸಿದ್ಧರ ಕಾಲೋನಿ ಸೇರಿದಂತೆ ಕೆಲವು ಪ್ರದೇಶಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಕಂಡುಬಂದಿದ್ದು, ಅಂತಹ ಪ್ರದೇಶದಲ್ಲಿ ಹೆಚ್ಚುವರಿ ಕೊಳವೆ ಬಾವಿ ಕೊರೆಯಿಸಿ, ಇಲ್ಲವೇ ಟ್ಯಾಂಕರ್‌ ಮೂಲಕ ನೀರು ಸರಬರಾಜು ಮಾಡಬೇಕೆಂದು ನಗರಸಭೆ ಪೌರಾಯುಕ್ತರಿಗೆ ಸೂಚಿಸಿದರು.

ಜಾನುವಾರುಗಳಿಗೆ ಮೇವಿನ ತೊಂದರೆಯಾಗದಂತೆ ಮುಧೋಳ, ಮೆಟಗುಡ್ಡ, ಬೆಳಗಲಿ ಹೊರಭಾಗದಲ್ಲಿ ಮೇವು ಬ್ಯಾಂಕ್‌ ಆರಂಭಿಸಬೇಕು. ಪ್ರತಿ ಕೆಜಿಗೆ ರೂ.2ದಂತೆ ಮಾರಾಟ ಮಾಡಬೇಕು. ಖಾಸಗಿ ಬೋರವೆಲ್ ಮಾಲೀಕರು ಸಾರ್ವಜನಿಕರಿಗೆ ಉಚಿತವಾಗಿ ನೀರು ಸರಬರಾಜು ಮಾಡಿದರೆ, ಅವರ ವಿದ್ಯುತ್‌ ಬಿಲ್ ನೀಡಿ, ಹಾಗೂ ರೂ.18 ಸಾವಿರ ಮಾಸಿಕ ಹಣ ನೀಡಲಾಗುವುದು.ಈಗಾಗಲೇ ಸಾರ್ವಜನಿಕರಿಗೆ ಉಚಿತ ನೀರು ಸರಬರಾಜು ಮಾಡಿದವರಿಗೆ ಕಂದಾಯ ಇಲಾಖೆಯ ವತಿಯಿಂದ ಅವರಿಗೆ ಅಭಿನಂದಿಸಿ, ಸನ್ಮಾನಿಸಲಾಗುವುದೆಂದು ಕಾರಜೋಳ ತಿಳಿಸಿದರು.

ತಹಶೀಲ್ದಾರ್‌ ಡಿ.ಜೆ. ಮಹಾತ್‌, ತಾಪಂ ಇಒ ಬಿ.ವಿ.ಅಡವಿಮಠ, ಜಿಪಂ ಸದಸ್ಯ ಭೀಮನಗೌಡ ಪಾಟೀಲ ಉಪಸ್ಥಿತರಿದ್ದರು.ನಗರಸಭೆ, ಸಣ್ಣ ನೀರಾವರಿ, ಹೆಸ್ಕಾಂ, ಕೃಷಿ, ತೋಟಗಾರಿಕೆ, ಜಿಪಂ ಇಂಜನೀಯರಿಂಗ್‌ ವಿಭಾಗ, ಆರೋಗ್ಯ, ಗ್ರಾಮೀಣ ಕುಡಿಯುವ ನೀರು ಸರಬರಾಜು, ಕಂದಾಯ ಇಲಾಖೆಗಳ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next