Advertisement

ಮಲೇರಿಯಾ ನಿರ್ಮೂಲನೆಗೆ ಪರಿಸರ ಸ್ವಚ್ಛವಾಗಿಡಿ

09:54 AM May 03, 2022 | Team Udayavani |

ಹಾವೇರಿ: ಮಲೇರಿಯಾ ರೋಗ ನಿರ್ಮೂಲನೆಗೆ ಮನೆ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು ಹಾಗೂ ಸೊಳ್ಳೆ ಪರದೆ ಬಳಸಬೇಕೆಂದು ರಾಜ್ಯ ಅನುಸೂಚಿತ ಜಾತಿ ಮತ್ತು ಅನುಸೂಚಿತ ಬುಡಕಟ್ಟುಗಳ ಆಯೋಗದ ಅಧ್ಯಕ್ಷ ಹಾಗೂ ಶಾಸಕ ನೆಹರು ಓಲೇಕಾರ ಹೇಳಿದರು.

Advertisement

ನಗರದ ಜಿಲ್ಲಾಸ್ಪತ್ರೆ ಆವರಣದಲ್ಲಿ ಜಿಲ್ಲಾ ಪಂಚಾಯತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ರೋಗ ವಾಹಕ ಆಶ್ರಿತ ರೋಗಗಳ ನಿಯಂತ್ರಣ ಕಚೇರಿ ಸಹಯೋಗದಲ್ಲಿ ವಿಶ್ವ ಮಲೇರಿಯಾ ದಿನದ ಅಂಗವಾಗಿ ಆಯೋಜಿಸಲಾಗಿದ್ದ ಜಾಗೃತಿ ಜಾಥಾಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ನಗರದ ಕೊಳಚೆ ಪ್ರದೇಶಗಳು ಸೇರಿ ವಿವಿಧ ಬೀದಿಗಳ ಚರಂಡಿಗಳನ್ನು ಸ್ವತ್ಛಗೊಳಿಸಿ, ಸೊಳ್ಳೆ ನಿವಾರಕ ಔಷಧಿ ಸಿಂಪಡಣೆ ಮಾಡಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು. ಸಾರ್ವಜನಿಕರು ಜಾಗೃತರಾಗಿ, ಸ್ವಚ್ಛತೆಗೆ ಆದ್ಯತೆ ನೀಡಬೇಕು. ತ್ಯಾಜ್ಯವನ್ನು ನೇರವಾಗಿ ಚರಂಡಿಗೆ ಹಾಕದೆ ನಗರಸಭೆ ಕಸದ ವಾಹನಗಳಿಗೆ ಹಾಕಬೇಕು. ರೋಗ ನಿರ್ಮೂಲನೆಗೆ ಸಾರ್ವಜನಿಕರ ಸಹಕಾರ ಅಗತ್ಯವಾಗಿದೆ. ಹಾಗಾಗಿ, ಎಲ್ಲರೂ ಸ್ವಚ್ಛತೆಗೆ ಕೈಜೋಡಿಸಬೇಕೆಂದು ಹೇಳಿದರು.

ಜಿಲ್ಲಾ ಮಲೇರಿಯಾ ರೋಗ ನಿಯಂತ್ರಣಾಧಿಕಾರಿ ಡಾ| ಪ್ರಭಾಕರ ಕುಂದೂರ ಮಾತನಾಡಿ, ಸಾಮಾನ್ಯ ಜ್ವರಕ್ಕೂ ರಕ್ತ ಪರೀಕ್ಷೆ ಮಾಡಿಸಿ, ತ್ವರಿತವಾಗಿ ಚಿಕಿತ್ಸೆ ಪಡೆಯಬೇಕು. ಮಲೇರಿಯಾ ರೋಗ ಅನಾಫಿಲಿಸ್‌ ಸೊಳ್ಳೆ ಕಚ್ಚುವುದರಿಂದ ಬಾಧಿಸುತ್ತದೆ. ರೋಗ ನಿಯಂತ್ರಿಸಲು ಸೊಳ್ಳೆ ಪರದೆ ಮತ್ತು ಸೊಳ್ಳೆ ನಿವಾರಕಗಳನ್ನು ಬಳಕೆ ಮಾಡಬೇಕೆಂದು ಸಲಹೆ ನೀಡಿದರು.

ಈ ವರ್ಷದ ವಿಶ್ವ ಮಲೇರಿಯಾ ದಿನವನ್ನು ನವೀನ ವಿಧಾನ ಬಳಸಿ, ಮಲೇರಿಯಾ ಕಡಿಮೆ ಮಾಡಿ ಜೀವ ಉಳಿಸೋಣ ಎಂಬ ಧ್ಯೇಯವಾಕ್ಯದ ಮೂಲಕ ಆಚರಿಸಲಾಗುತ್ತಿದೆ. ಜಿಲ್ಲೆಯಲ್ಲಿ ಕಳೆದ ಐದು ವರ್ಷಗಳಿಂದ ಯಾವುದೇ ಮಲೇರಿಯಾ ಪ್ರಕರಣ ಕಂಡು ಬಂದಿಲ್ಲ. ಹೊರ ಜಿಲ್ಲೆ ಮತ್ತು ರಾಜ್ಯಗಳಿಗೆ ದುಡಿಯಲು ಹೋದ ಕಾರ್ಮಿಕರಲ್ಲಿ ರೋಗ ಕಂಡು ಬರುತ್ತಿದ್ದು, ಅವರಿಗೆ ಸೂಕ್ತ ಚಿಕಿತ್ಸೆ ನೀಡಿ ಗುಣಪಡಿಸಲಾಗುತ್ತಿದೆ. ಜಿಲ್ಲೆಯಲ್ಲಿ ಮಲೇರಿಯಾ ರೋಗದಿಂದ ಯಾವುದೇ ಸಾವು-ನೋವು ಉಂಟಾಗಿಲ್ಲ ಎಂದು ಹೇಳಿದರು.

Advertisement

ನಗರದ ಪ್ರಮುಖ ಬೀದಿಗಳಲ್ಲಿ ಜಾಥಾ ಮೂಲಕ ಮಲೇರಿಯಾ ರೋಗದ ಬಗ್ಗೆ ಜನ ಜಾಗೃತಿ ಮೂಡಿಸಲಾಯಿತು.

ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷ ಸಂಜೀವಕುಮಾರ ನೀರಲಗಿ, ಜಿಲ್ಲಾ ಆರೋಗ್ಯಾಧಿಕಾರಿ ಡಾ|ಎಚ್‌.ಎಸ್‌.ರಾಘವೇಂದ್ರಸ್ವಾಮಿ, ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ|ಪಿ.ಆರ್‌.ಹಾವನೂರ, ನಗರಸಭೆ ಸದಸ್ಯರಾದ ಬಾಬುಸಾಬ್‌ ಮೊಮಿನಗಾರ್‌, ಶಿವರಾಜ ಮತ್ತಿಹಳ್ಳಿ, ಪ್ರಶಾಂತ ಹಾಗೂ ಇತರರು ಇದ್ದರು.

ಮಲೇರಿಯಾ ರೋಗದ ಬಗ್ಗೆ ಸಾರ್ವಜನಿಕರು ಜಾಗೃತರಾಗಬೇಕು. ಸ್ವತ್ಛತೆಗೆ ಆದ್ಯತೆ ನೀಡಬೇಕು. ತ್ಯಾಜ್ಯವನ್ನು ನೇರವಾಗಿ ಚರಂಡಿಗೆ ಹಾಕದೆ ನಗರಸಭೆ ಕಸದ ವಾಹನಗಳಿಗೆ ಹಾಕಬೇಕು. ರೋಗ ನಿರ್ಮೂಲನೆಗೆ ಸಾರ್ವಜನಿಕರ ಸಹಕಾರ ಅಗತ್ಯವಾಗಿದೆ. ಹಾಗಾಗಿ, ಎಲ್ಲರೂ ಸ್ವಚ್ಛಗೆ ಕೈ ಜೋಡಿಸಬೇಕು. ನೆಹರು ಓಲೇಕಾರ, ಶಾಸಕರು, ಹಾವೇರಿ

Advertisement

Udayavani is now on Telegram. Click here to join our channel and stay updated with the latest news.

Next