Advertisement

ನಮ್ಮ ಉಳಿವಿಗಾದರೂ ಭೂಮಿತಾಯಿ ಕಾಪಾಡಿ

11:51 AM Apr 23, 2019 | Team Udayavani |

ದೇವನಹಳ್ಳಿ: ಮನುಷ್ಯ ಭೂಮಿಯಿಲ್ಲದೆ ಬದುಕಿಲ್ಲ ಎಂಬುವುದನ್ನು ಒಪ್ಪುವುದಾದರೆ ಕನಿಷ್ಠ ಪಕ್ಷ ನಮ್ಮ ಉಳಿವಿಗಾದರೂ ನಾವು ಭೂಮಿಯನ್ನು ಉಳಿಸಬೇಕಾಗಿದೆ ಎಂದು ಸರಸ್ವತಿ ಸಂಗೀತ ವಿದ್ಯಾಲಯದ ಕಾರ್ಯದರ್ಶಿ ಬಿ.ಕೆ.ಗೋಪಾಲ್‌ ಮಾಸ್ಟರ್‌ ಅಭಿಪ್ರಾಯಪಟ್ಟರು.

Advertisement

ನಗರದ ಕೋಟೆ ಬಡಾವಣೆಯ ಖುಷಿ ಇನ್ಸ್ಟಿಟ್ಯೂಟ್‌ ಆಫ್ ಮ್ಯೂಸಿಕ್‌ ಅಂಡ್‌ ಡಾನ್ಸ್‌ ಬೇಸಿಗೆ ಶಿಬಿರ ತರಬೇತಿ ಕೇಂದ್ರದಲ್ಲಿ ವಿಶ್ವ ಭೂಮಿ ದಿನದ ಅಂಗವಾಗಿ ಸರಸ್ವತಿ ಸಂಗೀತ ವಿದ್ಯಾಲಯ ಆಯೋಜಿಸಿದ್ದ ಚಿತ್ರಕಲಾ ಸ್ಪರ್ಧೆಯಲ್ಲಿ ವಿಜೇತರಿಗೆ ಬಹುಮಾನ ವಿತರಿಸಿ ಮಾತನಾಡಿದರು.

ಭೂಮಿಯು ಸೌರಮಂಡಲದ 5ನೇ ಅತೀ ದೊಡ್ಡ ಗ್ರಹ. ಇಡೀ ಬ್ರಹ್ಮಾಂಡದಲ್ಲಿ ಜೀವ ಸಂಕುಲವನ್ನು ಹೊಂದಿರುವ ಏಕೈಕ ಕಾಯ. ಆದರೆ, ಭೂಮಿಯಲ್ಲಿ ಇಂದು ಆಗುತ್ತಿರುವ ಜಾಗತಿಕ ತಾಪಮಾನದಿಂದ ನಮ್ಮೊಂದಿಗಿರುವ ಜೀವ ವೈವಿಧ್ಯಗಳು ಕಳೆದ 48 ವರ್ಷಗಳಲ್ಲಿ ಶೇ.60ರಷ್ಟು ನಾಶವಾಗಿವೆ.

ಭೂಮಿಯ ಮೇಲಿನ ಜೀವಿಗಳ ಕುರಿತು ನಡೆಸಿದ ಅಧ್ಯಯನ ವರದಿಯೊಂದರ ಪ್ರಕಾರ 1970 ರ ಈಚೆಗೆ ಶೇ.60ರಷ್ಟು ಸಸ್ತನಿಗಳು, ಪಕ್ಷಿಗಳು, ಮೀನು ಮತ್ತು ಜಲಚರ ಜೀವಗಳು ನಾಶವಾಗಿವೆ. ಇವೆಲ್ಲವೂ ಮಾನವ ಸ್ವಾರ್ಥಕ್ಕಾಗಿ ಪ್ರಕೃತಿಯ ಮೇಲೆ ನಿರಂತರವಾಗಿ ನಡೆಸುತ್ತಿರುವ ಚಟುವಟಿಕೆಗಳೇ ಕಾರಣ.

ಆದ್ದರಿಂದ, ಪರಿಸರದ ರಕ್ಷಣೆಯೇ ಭೂಮಿಯ ರಕ್ಷಣಾ ಕಾರ್ಯವಾಗಿದೆ. ಮಕ್ಕಳಿಗೆ ಚಿಕ್ಕಂದಿನಲ್ಲೇ ಸಸಿ ನೆಡುವುದು, ಗಿಡ, ಮರಗಳ ರಕ್ಷಣೆಯಲ್ಲಿ ಒಲವು ಮೂಡಿಸಬೇಕಿದೆ. ಶೈಕ್ಷಣಿಕವಾಗಿಯೂ ಪರಿಸರ ಪಾಠ ಅಗತ್ಯ ಎಂದು ಹೇಳಿದರು.

Advertisement

ಪ್ರಾಣಿ, ಪಕ್ಷಿ ಹತ್ಯೆಯಿಂದ ಪರಿಸರ ನಾಶ: ಭಾರತ್‌ ಸ್ಕೌಟ್ಸ್‌ ಆ್ಯಂಡ್‌ ಗೈಡ್ಸ್‌ನ ಜಿಲ್ಲಾ ಆಯುಕ್ತ ಬಿ.ಕೆ.ಶಿವಪ್ಪ ಮಾತನಾಡಿ, 1970 ರಿಂದ ವಿಶ್ವಭೂಮಿ ದಿನವನ್ನು ಆಚರಿಸಿಕೊಂಡು ಬರಲಾಗುತ್ತಿದೆ. ಸುಮಾರು 192 ದೇಶಗಳಲ್ಲಿ ಆಚರಣೆಯಲ್ಲಿದೆ. ಆಹಾರಕ್ಕಾಗಿ ಪ್ರಾಣಿ, ಪಕ್ಷಿಗಳ ಕೊಲೆ ಕೂಡ ಪರಿಸರ ನಾಶದ ಭಾಗವಾಗಿದೆ ಎಂದರು.

ವನ್ಯಜೀವಿ ಕಾಪಾಡಿ: ಮುನ್ನೂರಕ್ಕೂ ಹೆಚ್ಚು ಬಗೆಯ ಪ್ರಾಣಿ, ಪಕ್ಷಿ ಪ್ರಭೇದಗಳು ಮಾನವನ ಹೊಟ್ಟೆಬಾಕತನಕ್ಕೆ ಕಾರಣವಾಗಿವೆ. ಕಾಡು ಕಡಿದು ನಾಡನ್ನು ವಿಸ್ತರಿಸುತ್ತಿದ್ದಂತೆಯೇ ಭೂಮಿ ಮೇಲಿನ ಜೀವ ವೈವಿಧ್ಯಗಳು ನಶಿಸುತ್ತಿವೆ. ವನ್ಯಜೀವ ಸಂಕುಲವನ್ನು ನಮ್ಮ ಮುಂದಿನ ಪೀಳಿಗೆಗೆ ಉಳಿಸಿಕೊಳ್ಳಬೇಕೆಂದರೆ ವನ್ಯಜೀವಿಗಳು ಮತ್ತು ಅವುಗಳ ಆವಾಸ ಸ್ಥಾನದ ರಕ್ಷಣೆ ನಮ್ಮೆಲ್ಲರ ಬಹುದೊಡ್ಡ ಜವಾಬ್ದಾರಿಯಾಗಿದೆ ಎಂದು ಕಿವಿಮಾತು ಹೇಳಿದರು.

ಚಿತ್ರಕಲಾ ಸ್ಪರ್ಧೆ ವಿಜೇತರು: ಪ್ರಕೃತಿ, ಭೂರಕ್ಷಣೆ ಕುರಿತು ಮಕ್ಕಳಿಗೆ ಚಿತ್ರಕಲಾಸ್ಪರ್ಧೆ ಏರ್ಪಡಿಸಲಾಗಿತ್ತು. ಚಿಣ್ಣರ ವಿಭಾಗದಲ್ಲಿ ಕವನ. ಎಂ-ಪ್ರಥಮ, ರಾಹಿತ್ಯ-ದ್ವಿತೀಯ, ವಿನೀತ್‌ ಕುಮಾರ್‌ ವಿ.ಎಸ್‌-ತೃತೀಯ, ಕಿರಿಯರ ವಿಭಾಗದಲ್ಲಿ ಗುರುಪ್ರಸಾದ್‌-ಪ್ರಥಮ, ಗುರುದೀಪ್‌ ಎಲ್‌-ದ್ವಿತೀಯ, ಅನನ್ಯಶ್ರೀ-ತೃತೀಯ ಮತ್ತು ಹಿರಿಯರ ವಿಭಾಗದಲ್ಲಿ ಮನೋಜ್ಞ-ಪ್ರಥಮ, ಅಮೂಲ್ಯ ವೈ.ಎನ್‌-ದ್ವಿತೀಯ, ಮಧುಶ್ರೀ ಎನ್‌-ತೃತೀಯ ಸ್ಥಾನ ಪಡೆದರು.

ಖುಷಿ ಇನ್ಸ್ಟಿಟ್ಯೂಟ್‌ ಆಫ್ ಮ್ಯೂಸಿಕ್‌ ಅಂಡ್‌ ಡಾನ್ಸ್‌ನ ವ್ಯವಸ್ಥಾಪಕ ಎಸ್‌.ಅಕ್ಷಯ್‌ ಶರ್ಮ ಮಾತನಾಡಿದರು. ಶಾರದಾಂಬ ಕಲಾವಿದರ ಸಂಘದ ನಿರ್ದೇಶಕ ಎಸ್‌.ಎನ್‌.ಸುಬ್ರಹ್ಮಣ್ಯ, ಯುವ ಮುಖಂಡ ಮಾರೇಗೌಡ, ಖುಷಿ ಇನ್ಸ್ಟಿಟ್ಯೂಟ್‌ ಆಫ್ ಮ್ಯೂಸಿಕ್‌ ಆ್ಯಂಡ್‌ ಡಾನ್ಸ್‌ ಸಂಸ್ಥೆ ನಿರ್ದೇಶಕ ವಿಶ್ವ, ಸರಸ್ವತಿ ಸಂಗೀತ ವಿದ್ಯಾಲಯದ ಪದಾಧಿಕಾರಿಗಳು ಮತ್ತಿತರರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next