ಪಿರಿಯಾಪಟ್ಟಣ: ಪೋಷಕರು ವಿದ್ಯಾರ್ಥಿನಿಯರ ಮೇಲೆ ನಿಗಾ ವಹಿಸುವ ಮೂಲಕ ಅವರ ಶೈಕ್ಷಣಿಕ ಪ್ರಗತಿಯ ಜೊತೆಗೆ ಅವರ ದೈನಂದಿನ ಚಟುವಟಿಕೆಗಳ ಬಗ್ಗೆ ಮಾಹಿತಿ ಪಡೆಯುವ ಅಗತ್ಯವಿದೆ ಎಂದು ಪಟ್ಟಣದ ಎಸ್‌ಕೆಎಟಿ ಸರ್ಕಾರಿ ಬಾಲಕಿಯ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲೆ ನಾಗಮ್ಮ ಸಲಹೆ ನೀಡಿದರು.
ಪಟ್ಟಣದ ಎಸ್‌ಕೆಎಟಿ ಸರ್ಕಾರಿ ಬಾಲಕಿಯ ಪದವಿ ಪೂರ್ವ ಕಾಲೇಜಿನಲ್ಲಿ ಪೋಷಕರ ದಿನ ಮತ್ತು ದ್ವಿತೀಯ ಪಿಯುಸಿ ವಿದ್ಯಾರ್ಥಿನಿಯರಿಗೆ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವಿದ್ಯಾರ್ಥಿಗಳು ನಾಲ್ಕು ಗಂಟೆ ಮಾತ್ರ ಕಾಲೇಜಿನಲ್ಲಿ ನಮ್ಮೊಂದಿಗೆ ಇರುತ್ತಾರೆ.
ಇನ್ನುಳಿದ ಅವಧಿಯಲ್ಲಿ ಪೋಷಕರೊಂದಿಗೆ ಕಾಲ ಕಳೆಯುವುದರಿಂದ ಅವರೊಂದಿಗೆ ಭಾವನಾತ್ಮಕ ಸಂಬಂಧ ಹೊಂದಿದ್ದರೆ ಮಕ್ಕಳು ದಾರಿ ತಪ್ಪುವ ಸಂದರ್ಭಗಳು ಕಡಿಮೆಯಾಗಲಿವೆ ಎಂದು ಅಭಿಪ್ರಾಯಪಟ್ಟರು. ತಮ್ಮ ಮಗುವಿಗಾಗಿ ಕಷ್ಟ ಪಡುವ ಪೋಷಕರು ಅವರು ಪ್ರಾಯಕ್ಕೆ ಬಂದಾಗ ನಿರ್ಲಕ್ಷ್ಯ ತೋರಿದರೆ ಮುಂದೆ ಆಗುವ ಅನಾಹುತಳಿಗೆ ಜೀವನವಿಡಿ ಕೊರಗುವ ಸಂಭವಿದೆ.
ಅವಿಧೇಯತೆ ಮತ್ತು ಆಶಿಸ್ತು ವರ್ತನೆ ವಿದ್ಯಾರ್ಥಿನಿಯರಲ್ಲಿ ಕಂಡು ಬಂದರೆ ಶಿಕ್ಷಕರು ಸಂಸ್ಕೃತಿ ಮತ್ತು ಶಾಂತಿಯ ಗುಣವನ್ನು ಕಲಿಸುವಲ್ಲಿ ಎಡವಿದ್ದಾರೆ ಎಂಬ ಭಾವನೆ ಪೋಷಕರಲ್ಲಿ ಮೂಡುವುದು ಸಹಜ ಎಂದರು. ಈ ಸಂದರ್ಭದಲ್ಲಿ ವಿವಿಧ ಕ್ರೀಡೆ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.
ಸಮಾರಂಭದಲ್ಲಿ ವಿದ್ಯಾರ್ಥಿನಿಯರು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು. ಕಾರ್ಯಕ್ರಮದಲ್ಲಿ ಎನ್‌ಎಸ್‌ಎಸ್ ಅಧಿಕಾರಿ ಬೇಬಿ, ಉಪನ್ಯಾಸಕರಾದ ಕವಿತಾ, ಥಾಮಸ್, ನಾಗರಾಜು, ರೂಪಾ, ಯಶೋದಾ, ಶ್ರೀನಿವಾಸ್, ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯರಾದ ಸಿರಾಜುನ್ನಿಸಾ, ಸ್ವಪ್ನ ಸೇರಿದಂತೆ ಪೋಷಕರು ಮತ್ತು ವಿದ್ಯಾರ್ಥಿನಿಯರು ಹಾಜರಿದ್ದರು.