ಯಡ್ರಾಮಿ: ಪಟ್ಟಣದ ಪ್ರವಾಸಿ ಮಂದಿರ ದಲ್ಲಿ ತಾಲೂಕು ದಂಡಾಧಿಕಾರಿ ಹಾಗೂ ಜೇವರ್ಗಿ ಕೃಷಿ ಸಹಾಯಕ ನಿರ್ದೇಶಕ ಶರಣಗೌಡ ಬಿರಾದಾರ ನೇತೃತ್ವದಲ್ಲಿ ತಾಲೂಕಿನ ಬೀಜ ಮತ್ತು ರಸಗೊಬ್ಬರ ವ್ಯಾಪಾರಿಗಳ ಸಭೆ ನಡೆಯಿತು.
ತಾಲೂಕು ಕರ್ನಾಟಕ ರೈತ ಸಂಘ, ಹಸಿರು ಸೇನೆ ಹಾಗೂ ವಿವಿಧ ಸಂಘಟನೆಗಳ ಮನವಿ ಮೇರೆಗೆ ಶನಿವಾರ ನಡೆದ ಸಭೆಯಲ್ಲಿ ರೈತ ಸಂಘ ಹಾಗೂ ಹಸಿರು ಸೇನೆ ತಾಲೂಕು ಘಟಕದ ಅಧ್ಯಕ್ಷ ಈರಣ್ಣ ಭಜಂತ್ರಿ ಮಾತನಾಡಿ, ತಾಲೂಕಿನಲ್ಲಿ ನಕಲಿ ಬೀಜ, ರಸಗೊಬ್ಬರ ಹಾಗೂ ಅಧಿಕ ದರದಲ್ಲಿ ಮಾರಾಟ ಮಾಡುವ ಮಾರಾಟಗಾರರ ಮೆಲೆ ಸಂಬಂಧಪಟ್ಟ ಅಧಿಕಾರಿಗಳು ನಿಗಾ ಇಡಬೇಕು ಎಂದು ಆಗ್ರಹಿಸಿದರು.
ಒಂದು ವೇಳೆ ರೈತರಿಗೆ ಮೋಸ ಮಾಡುವಂತ ಸನ್ನಿವೇಶಗಳು ಕಂಡು ಬಂದರೆ ಇಲಾಖೆ ಅಧಿಕಾರಿಗಳೇ ನೇರ ಹೊಣೆಗಾರರು ಎಂದರು. ಕರವೇ ಮುಖಂಡ ದೇವೀಂದ್ರಪ್ಪಗೌಡ ಮಾತನಾಡಿ, ಒಂದು ಲೈಸನ್ಸ್ ಅಡಿ ನಾಲ್ಕಾರು ಬೀಜ, ರಸಗೊಬ್ಬರ ಕೇಂದ್ರಗಳು ತಾಲೂಕಿನಲ್ಲಿ ತೆರೆಯುತ್ತಿವೆ. ಇಂತಹ ಅಕ್ರಮಗಳನ್ನು ಕಂಡೂ ಕಾಣದಂತೆ ಕುಳಿತಿರುವ ಅಧಿಕಾರಿಗಳ ನಡೆ ರೈತನನ್ನು ವಂಚಿಸುವುದಾಗಿದೆ ಎಂದರು.
ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಅಮರನಾಥ ಸಾಹು ಮಾತನಾಡಿದರು. ರೈತಪರ ಸಂಘಟನೆಗಳ ಮನವಿಗೆ ಸ್ಪಂದಿಸಿದ ಸಹಾಯಕ ಕೃಷಿ ನಿರ್ದೇಶಕ ಶರಣಗೌಡ ಮಾತನಾಡಿ, ತಾಲೂಕಿನಲ್ಲಿ ಆಗ್ರೋ ಮಾಲೀಕರಿಂದ ರೈತರನ್ನು ವಂಚಿಸುವ ಪ್ರಕರಣಗಳು ಕಂಡು ಬಂದರೆ ಯಾರೇ ಮಾಹಿತಿ ನೀಡಿದರೂ ನಿರ್ದಾಕ್ಷಿಣ್ಯವಾಗಿ ಕ್ರಮ ಜರುಗಿಸುತ್ತೇವೆ ಎಂದರು.
ರೈತ ಸಂಘದ ಅಧ್ಯಕ್ಷ ಈರಣ್ಣ ಭಜಂತ್ರಿ, ಕರವೇ ಮುಖಂಡ ವಿಶ್ವನಾಥ ಪಾಟೀಲ, ಸಾಹೇಬಗೌಡ ದೇಸಾಯಿ, ತಾಲೂಕು ದಲಿತ ಸೇನೆ ಅಧ್ಯಕ್ಷ ಸಂಗಮೇಶ ಗಂಗಾಕರ್, ಅಮರನಾಥ ಸಾಹು ಕುಳಗೇರಿ, ಮಹೇಶ ಪಾಟೀಲ, ದೇವೀದ್ರಪ್ಪಗೌಡ ಪಾಟೀಲ, ಶಫೀವುಲ್ಲಾ ದಖನಿ, ಲಾಳೇಸಾಬ ಮನಿಯಾರ, ತಾಲೂಕು ಅಹಿಂದ ಬಳಗದ ಅಧ್ಯಕ್ಷ ನದೀಮ್ ಮಳ್ಳಿàಕರ, ಮಾಳಪ್ಪ, ತಾಲೂಕಿನ ಬೀಜ ಮತ್ತು ರಸಗೊಬ್ಬರ ಕೇಂದ್ರಗಳ ಮಾಲೀಕರು, ರೈತ ಸಂಪರ್ಕ ಸಿಬ್ಬಂದಿ ಭಾಗವಹಿಸಿದ್ದರು.