Advertisement

ಇವಿಎಂ ಯಂತ್ರದ ಮೇಲೆ ಕಣ್ಣಿಡಿ

10:07 AM Jan 12, 2018 | |

ಕಲಬುರಗಿ: ಮತದಾನ ಸಂದರ್ಭದಲ್ಲಿ ಇವಿಎಂ ಮತಯಂತ್ರ ಹ್ಯಾಕ್‌ ಮಾಡಿ ಬಿಜೆಪಿಯವರು ಅಧಿಕಾರಕ್ಕೆ ಬರಬೇಕೆಂಬ ಯತ್ನದಲ್ಲಿದ್ದಾರೆ ಎನ್ನುವ ಶಂಕೆ ಮೂಡುತ್ತಿರುವುದರಿಂದ ಕಾಂಗ್ರೆಸ್‌ ಕಾರ್ಯಕರ್ತರು ಇದರತ್ತ ಒಂದು ಕಣ್ಣಿಡಬೇಕೆಂದು ಕೆಪಿಸಿಸಿ ಅಧ್ಯಕ್ಷ ಡಾ| ಜಿ. ಪರಮೇಶ್ವರ ಕರೆ ನೀಡಿದರು.

Advertisement

ನಗರದ ಸಾರ್ವಜನಿಕ ಉದ್ಯಾನವನದ ವೀರಶೈವ ಕಲ್ಯಾಣ ಮಂಟಪದ ಎದುರಿನ ವಿಶಾಲವಾದ ಜಾಗದಲ್ಲಿ ಗುರುವಾರ ಸಂಜೆ ನಡೆದ ಕಲಬುರಗಿ ದಕ್ಷಿಣ ಹಾಗೂ ಕಲಬುರಗಿ ಉತ್ತರ ಮತಕ್ಷೇತ್ರದ ಕಾಂಗ್ರೆಸ್‌ ಪಕ್ಷದ ಬೃಹತ್‌ ಸಮಾವೇಶ ಉದ್ದೇಶಿಸಿ ಮಾತನಾಡಿದ ಅವರು, ಈಗಾಗಲೇ ನಡೆದಿರುವ ವಿವಿಧ ರಾಜ್ಯಗಳ ಚುನಾವಣೆ ಫಲಿತಾಂಶ ನೋಡಿದರೆ ಇವಿಎಂ ಯಂತ್ರ ತಿರುಚಿರುವ ಬಗ್ಗೆ ಅನುಮಾನಗಳು ಮೂಡುತ್ತಿವೆ. ಹೀಗಾಗಿ 54 ಸಾವಿರ ಭೂತ್‌ ಮಟ್ಟದ ಕಾರ್ಯಕರ್ತರು ಚುನಾವಣೆ ದಿನ ತಮ್ಮ ಭೂತ್‌ದಲ್ಲಿ ಕಾಂಗ್ರೆಸ್‌ ಪಕ್ಷಕ್ಕೆ ಮತ ಹಾಕಿದ್ದರೂ ಬಿಜೆಪಿಗೆ ಹೋಗುತ್ತದೆಯೋ ಎನ್ನುವ ಅನುಮಾನ ದೂರ ಮಾಡಲು ಕಂಕಣಬದ್ಧರಾಗಬೇಕು ಎಂದರು.

ಬಿಜೆಪಿ ಅವರಿಗೆ ಯಾವುದೇ ಅಜೆಂಡಾ ಇಲ್ಲ. ಅವರೆಲ್ಲ ಹೇಳುವುದು ಡೋಂಗಿತನದಿಂದ ಕೂಡಿದೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮೀತಾ ಶಾ ಅವರಿಗೆ ರಾಜ್ಯದ ಜನತೆ ಮುಂದೆ ಬರಲು ಯಾವುದೇ ವಿಷಯವಿಲ್ಲ. ಹೀಗಾಗಿ ಅವರ ಪಕ್ಷದ ನಾಯಕರಿಗೆ ಪದೇ-ಪದೇ ನಾನು ಹೇಳಿದಂತೆ ಕೇಳಿ ಎನ್ನುತ್ತಿದ್ದಾರೆ. ರಾಜ್ಯದ ಆಡಳಿತ ದೇಶಕ್ಕೆ ಮಾದರಿಯಾಗಿದೆ.
ಇದನ್ನು ಸಹಿಸದ ಬಿಜೆಪಿಯವರು ರಾಜ್ಯ ಸರ್ಕಾರ ಹಾಗೂ ಸಿಎಂ ಸಿದ್ದರಾಮಯ್ಯ ಬಗ್ಗೆ ಇಲ್ಲ ಸಲ್ಲದ್ದನ್ನು ಹೇಳುತ್ತಿದ್ದಾರೆ ಎಂದರು.

ಸಂಸದ ಡಾ| ಮಲ್ಲಿಕಾರ್ಜುನ ಖರ್ಗೆ ಸಮಾವೇಶ ಉದ್ಘಾಟಿಸಿ, ನರೇಂದ್ರ ಮೋದಿ ಅವರು ಚುನಾವಣೆಯಲ್ಲಿ ಗೆದ್ದರೆ ಸರ್ಕಾರ ರಚನೆಯಾದ 100 ದಿನದೊಳಗೆ ಕಪ್ಪು ಹಣ ಭಾರತಕ್ಕೆ ತಂದು ಪ್ರತಿಯೊಬ್ಬರ ಖಾತೆಗೆ 15 ಲಕ್ಷ ರೂ. ಜಮಾ ಮಾಡುವುದಾಗಿ ಹೇಳಿದ್ದರು. ಆದರೆ ಸಾವಿರ ದಿನಗಳಾದರೂ ಯಾಕೆ ಹಣ ಬರುತ್ತಿಲ್ಲ. ರೈತರ ಸಾಲ ಮನ್ನಾ ಮಾಡುವುದು ಬಿಟ್ಟು ಉದ್ಯಮಿಪತಿಗಳ ಲಕ್ಷಾಂತರ ಕೋಟಿ ರೂ. ಮನ್ನಾ ಮಾಡ್ತಾರೆ. ಜನರೊಂದಿಗೆ ಪ್ರೀತಿ, ಮತ್ತೂಬ್ಬರೊಂದಿಗೆ ಮದುವೆ ಎನ್ನುವಂತಿದೆ ಮೋದಿ ಅವರ ಆಡಳಿತ ಕಾರ್ಯವೈಖರಿ ಎಂದು ವಾಗ್ಧಾಳಿ ನಡೆಸಿದರು.

ಕೆಪಿಸಿಸಿ ಕಾರ್ಯಾಧ್ಯಕ್ಷ ಎಸ್‌.ಆರ್‌. ಪಾಟೀಲ, ಸಂಸದ ಕೆ.ಎಚ್‌. ಮುನಿಯಪ್ಪ, ಶಾಸಕ ಇಕ್ಬಾಲ್‌ ಅಹ್ಮದ ಸರಡಗಿ ಮಾತನಾಡಿದರು. ಸಚಿವರಾದ ಡಾ| ಶರಣಪ್ರಕಾಶ ಪಾಟೀಲ, ಪ್ರಿಯಾಂಕ್‌ ಖರ್ಗೆ, ಮಹಾಪೌರ ಶರಣು ಮೋದಿ, ಪಕ್ಷದ ಮುಖಂಡರಾದ ಸಾಕೆ ಶೈಲೇಜನಾಥ, ವಸಂತಕುಮಾರ, ಶಾಸಕರಾದ ಡಾ| ಅಜಯಸಿಂಗ್‌, ಡಾ| ಉಮೇಶ ಜಾಧವ್‌, ಶರಣಪ್ಪ ಮಟ್ಟೂರ, ಕಾಂಗ್ರೆಸ್‌ ಪಕ್ಷದ ಜಿಲ್ಲಾಧ್ಯಕ್ಷ ಜಗದೇವ ಗುತ್ತೇದಾರ, ಎನ್‌ಇಕೆಎಸ್‌ಆರ್‌ಟಿಸಿ ಅಧ್ಯಕ್ಷ ಇಲಿಯಾಸ್‌ ಭಾಗವಾನ್‌, ಪ್ರಮುಖರಾದ ಹಿಂಡಸಗೇರಿ, ಸಿ.ಬಿ.ಪಾಟೀಲ ಓಕಳಿ, ನೀಲಕಂಠರಾವ್‌ ಮೂಲಗೆ, ದಿಲೀಪ ಪಾಟೀಲ, ಫರ್ಹಾಜ್‌ ಖಮರುಲ್‌, ಸಂತೋಷ ಭೀಮಾಶಂಕರ ಬಿಲಗುಂದಿ, ಅಲ್ಲಾಂಖಾನ್‌, ಸಂತೋಷ ಪಾಟೀಲ, ಚಂದ್ರಿಕಾ
ಪರಮೇಶ್ವರ ಹಾಜರಿದ್ದರು. ಶಾಸಕರಾದ ಮಾಲೀಕಯ್ಯ ಗುತ್ತೇದಾರ, ಬಿ.ಆರ್‌. ಪಾಟೀಲ ಗೈರು ಹಾಜರಿ ಎದ್ದು ಕಾಣುತ್ತಿತ್ತು. ಮಾಜಿ ಶಾಸಕ ಅಲ್ಲಮಪ್ರಭು ಪಾಟೀಲ ನಿರೂಪಿಸಿದರು. 

Advertisement

ಧರ್ಮಸಿಂಗ್‌-ಖಮರುಲ್‌ ಸ್ಮರಣೆ: ಮಾಜಿ ಮುಖ್ಯಮಂತ್ರಿ ಧರ್ಮಸಿಂಗ್‌ ಹಾಗೂ ಅಲ್ಪಸಂಖ್ಯಾತರ ವರ್ಗದ ನಾಯಕರಾಗಿದ್ದ ಖಮರುಲ್‌ ಇಸ್ಲಾಂ ನಮ್ಮನ್ನಗಲಿರುವುದು ಪಕ್ಷಕ್ಕೆ ದೊಡ್ಡ ಹಾನಿಯಾಗಿದೆಯಲ್ಲದೇ ಅವರಿಲ್ಲದ ಪಕ್ಷದ ಮೊದಲ ಮಹಾಸಮಾವೇಶ ಇದಾಗಿದೆ ಎಂದು ಸಂಸದ ಡಾ| ಮಲ್ಲಿಕಾರ್ಜುನ ಖರ್ಗೆ, ಕೆಪಿಸಿಸಿ ಅಧ್ಯಕ್ಷ ಡಾ| ಜಿ.ಪರಮೇಶ್ವರ ಸ್ಮರಿಸಿದರು.

ಎಂಎಲ್‌ಸಿ ಅಭ್ಯರ್ಥಿ ಪರಿಚಯ ಮುಂಬರುವ ಈಶಾನ್ಯ ಪದವೀಧರ ಮತಕ್ಷೇತ್ರದ ಅಭ್ಯರ್ಥಿಯನ್ನಾಗಿ ಚಂದ್ರಶೇಖರ ಪಾಟೀಲ ಹುಮನಾಬಾದ ಅವರನ್ನು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ರಾಹುಲ್‌ಗಾಂಧಿ ನಿಯೋಜಿಸಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಾ| ಜಿ. ಪರಮೇಶ್ವರ ಸಭಾ ವೇದಿಕೆಯಲ್ಲಿ ಪರಿಚಯಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next