ಬೆಳಗಾವಿ: ಕನ್ನಡವನ್ನು ಕನ್ನಡಕ ಮಾಡಿಕೊಳ್ಳದೇ ಕಣ್ಣಾಗಿ ಮಾಡಿಕೊಂಡು ಕನ್ನಡದ ಸೇವೆ ಮಾಡಬೇಕು. ಕನ್ನಡ ಕನ್ನಡಿಯೊಳಗಿನ ಗಂಟಾಗಬಾರದು. ಪ್ರತಿಯೊಬ್ಬ ಕನ್ನಡಿಗನು ಪೋಸ್ಟ್‌ಮನ್ ಆಗಿ ಮನೆ ಮನೆಗೆ ಕನ್ನಡ ತಲುಪಿಸುವ ಕೆಲಸ ಮಾಡಬೇಕು ಎಂದು ಹುಕ್ಕೇರಿ-ಬೆಳಗಾವಿ ಗುರುಶಾಂತೇಶ್ವರ ಹಿರೇಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ನಗರದ ಕನ್ನಡ ಸಾಹಿತ್ಯ ಭವನದಲ್ಲಿ ರವಿವಾರ ನಡೆದ ಕನ್ನಡ ಸಾಹಿತ್ಯ ಪರಿಷತ್ ಬೆಳಗಾವಿ ಜಿಲ್ಲೆಯ ಕಾರ್ಯಕಾರಿ ಸಮಿತಿಗೆ ಧ್ವಜ ಹಸ್ತಾಂತರ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ಪ್ರತಿಯೊಬ್ಬರು ಕನ್ನಡಕ್ಕಾಗಿ ಕೈ ಎತ್ತುವುದಷ್ಟೇ ಅಲ್ಲದೇ ಸಂದರ್ಭ ಬಂದರೆ ಕನ್ನಡಕ್ಕಾಗಿ ಜೀವವನ್ನು ಕೊಡಲು ಪಣ ತೊಡಬೇಕು. ಪುಣ್ಯದ ಬೀಡಾದ ನಮ್ಮ ಕನ್ನಡ ನಾಡು ನುಡಿ ಉಳಿಸಿ ಬೆಳೆಸುವುದಕ್ಕಾಗಿ ಎಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡಬೇಕಾಗಿದೆ. ನಾವುಗಳು ನಮ್ಮ ಬದುಕನ್ನು ಕನ್ನಡಕ್ಕಾಗಿ ಮೀಸಲಿಟ್ಟಾಗ ಮಾತ್ರ ನಮ್ಮ ನಾಡು-ನುಡಿ ರಕ್ಷಣೆ ಸಾಧ್ಯ ಎಂದರು.
ಕಸಾಪ ಜಿಲ್ಲಾಧ್ಯಕ್ಷೆ ಮಂಗಲಾ ಮೆಟಗುಡ್ಡ ಮಾತನಾಡಿ, ಕನ್ನಡದ ಕೆಲಸ ಸೇವೆ ಅಂತ ತಿಳಿದುಕೊಂಡು ಕನ್ನಡ ಕಟ್ಟುವ ಕೆಲಸಕ್ಕೆ ಬದ್ಧರಾಗಬೇಕು. ಗಡಿ ಜಿಲ್ಲೆಯಾಗಿರುವುದರಿಂದ ಪ್ರತಿಯೊಬ್ಬ ಕನ್ನಡಿಗನೂ ಕನ್ನಡ ಸಾಹಿತ್ಯ ಪರಿಷತ್ ಜೊತೆಗೆ ನಿಂತು ಸಹಕಾರ ನೀಡಿ ಕನ್ನಡದ ಚಟುವಟಿಕೆ, ಅಭಿವೃದ್ದಿ, ರಕ್ಷಣೆ ಕಾರ್ಯಕ್ಕೆ ಮುಂದಾಗಬೇಕೆಂದರು.
ಜಿಲ್ಲೆಯ ಎಲ್ಲಾ ತಾಲೂಕಗಳ ನೂತನ ಅಧ್ಯಕ್ಷರಿಗೆ ಮತ್ತು ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯರಿಗೆ ಕಸಾಪದ ಧ್ವಜ ಹಸ್ತಾಂತರ ಮಾಡಲಾಯಿತು. ನಾಡಿನ ಗಣ್ಯರಾದ ಚಂದ್ರಶೇಖರ ಪಾಟೀಲ್, ಬಸಲಿಂಗಯ್ಯ ಹಿರೇಮಠ, ಲತಾ ಮಂಗೇಶ್ಕರ, ಇಬ್ರಾಹಿಂ ಸುತಾರ, ಸುನಿತಾ ಮೊರಬದ, ಶ್ರೀನಿವಾಸ ಕುಲಕರ್ಣಿ ಅವರ ನಿಧನಕ್ಕೆ ಸಂತಾಪ ಸೂಚಿಸಲಾಯಿತು. ಪ್ರತಿಭಾ ಕಳ್ಳಿಮಠ ಅವರು ಏ ಮೇರೆ ವತನ್ ಕೇ ಲೋಗೋ ಮಹಾಡು ಹಾಡಿದರು.
ಸಾಹಿತಿ ವೀರಣ್ಣ ಗಿರಿಮಲ್ಲಣವರ ಅವರ ಸನ್ಮಾರ್ಗಿ ನೀನಾಗು ವಚನಾಂಜಲಿ ಕೃತಿ ಲೋಕಾರ್ಪಣೆಗೊಳಿಸಲಾಯಿತು. ಹಿರಿಯ ಸಾಹಿತಿ ನೀಲಗಂಗಾ ಚರಂತಿಮಠ ಅಧ್ಯಕ್ಷತೆ ವಹಿಸಿದ್ದರು. ಕಸಾಪ ಮಾಜಿ ಅಧ್ಯಕ್ಷ ಮೋಹನ ಪಾಟೀಲ, ಸಾಹಿತಿಗಳಾದ ಪ್ರೊ| ಚಂದ್ರಶೇಖರ ಅಕ್ಕಿ, ಡಾ| ಬಾಳಾಸಾಹೇಬ್ ಲೋಕಾಪುರೆ, ಬಿ.ವಿ. ನರಗುಂದ, ಡಾ| ಎಸ್.ಎಸ್. ಅಂಗಡಿ, ಪ್ರೊ| ಎಲ್.ವಿ. ಪಾಟೀಲ, ಡಾ| ಎಚ್.ಬಿ. ಕೋಲಕಾರ, ಡಾ| ಎಚ್.ಐ. ತಿಮ್ಮಾಪುರ, ಬಾಲಶೇಖರ ಬಂದಿ, ಡಾ| ಸ್ಮಿತಾ ಸುರೇಬಾನಕರ, ಶೈಲಜಾ ಬಿಂಗೆ ಇದ್ದರು. ಕಸಾಪ ಜಿಲ್ಲಾ ಗೌರವ ಕಾರ್ಯದರ್ಶಿ ಎಂ.ವೈ. ಮೆಣಶಿನಕಾಯಿ ಸ್ವಾಗತಿಸಿದರು. ವೀರಭದ್ರ ಅಂಗಡಿ ವಂದಸಿದರು. ಪ್ರತಿಭಾ ಕಳ್ಳಿಮಠ ನಿರೂಪಿಸಿದರು.