Advertisement

ನೀತಿ ಸಂಹಿತೆ ಉಲ್ಲಂಘನೆ ಮೇಲೆ ಹದ್ದಿನ ಕಣ್ಣಿಡಿ

05:04 PM Oct 08, 2018 | |

ಶಿವಮೊಗ್ಗ; ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣಗಳ ಮೇಲೆ ಹದ್ದಿನ ಕಣ್ಣಿರಿಸುವಂತೆ ಜಿಲ್ಲಾಧಿಕಾರಿ ಕೆ.ಎ. ದಯಾನಂದ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

Advertisement

 ಅವರು ಭಾನುವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಶಿವಮೊಗ್ಗ ಉಪ ಚುನಾವಣಾ ಪೂರ್ವ ಸಿದ್ಧತೆಗಳ ಪರಿಶೀಲನೆ ನಡೆಸಿ ಮಾತನಾಡಿದರು. ಮಾದರಿ ನೀತಿ ಸಂಹಿತೆ ಜಾರಿ ಸೇರಿದಂತೆ ಸಂಪೂರ್ಣ ಚುನಾವಣಾ ಪ್ರಕ್ರಿಯೆಗಳ ಮೇಲೆ ನಿಗಾ ಇರಿಸಲು ವಿವಿಧ ತಂಡಗಳನ್ನು ಈಗಾಗಲೇ ರಚಿಸಲಾಗಿದ್ದು, ಎಲ್ಲಾ ತಂಡಗಳು ಕಾರ್ಯಾರಂಭ ಮಾಡಿವೆ. ಅಂತರ್‌ ಜಿಲ್ಲೆಗಳನ್ನು ಸಂಪರ್ಕಿಸುವ ಪ್ರಮುಖ 17 ಸ್ಥಳಗಳಲ್ಲಿ ಚೆಕ್‌ಪೋಸ್ಟ್‌ಗಳನ್ನು ತಕ್ಷಣ ಕಾರ್ಯಾರಂಭಗೊಳಿಸಬೇಕು.

ಚೆಕ್‌ಪೋಸ್ಟ್‌ಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಸಲಾಗುವುದು. ಚೆಕ್‌ಪೋಸ್ಟ್‌ಗಳಲ್ಲಿರುವ ಅಧಿಕಾರಿ, ಸಿಬ್ಬಂದಿಗಳು ಕಡ್ಡಾಯವಾಗಿ ತಮ್ಮ ಗುರುತಿನ ಚೀಟಿಯನ್ನು ಧರಿಸಿರಬೇಕು ಎಂದು ಅವರು ಸೂಚನೆ ನೀಡಿದರು.
 
ಕೇಂದ್ರಸ್ಥಾನ ಬಿಡಬಾರದು: ಚುನಾವಣಾ ಪ್ರಕ್ರಿಯೆ ಮುಗಿಯುವ ತನಕ ಅನಿವಾರ್ಯ ಸಂದರ್ಭಗಳನ್ನು ಹೊರತುಪಡಿಸಿ ಅಧಿಕಾರಿ, ಸಿಬ್ಬಂದಿಗೆ ರಜೆ ನೀಡಬಾರದು. ಲಿಖೀತ ಅನುಮತಿ ಇಲ್ಲದೆ ಯಾರೂ ಕೇಂದ್ರಸ್ಥಾನವನ್ನು ಬಿಡಬಾರದು. ಕರ್ತವ್ಯ ನಿರ್ಲಕ್ಷé ವಹಿಸುವವರ ವಿರುದ್ಧ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಅವರು ಎಚ್ಚರಿಕೆ ನೀಡಿದರು.

 ಈಗಾಗಲೇ ಆಡಳಿತಾತ್ಮಕ ಮಂಜೂರಾತಿ ಪಡೆದು ಟೆಂಡರ್‌ ಪ್ರಕ್ರಿಯೆ ಪೂರ್ಣಗೊಳಿಸಿ, ಈಗಾಗಲೇ ಆರಂಭಗೊಂಡಿರುವ ಕಾಮಗಾರಿಗಳನ್ನು ಮಾತ್ರ ಮುಂದುವರಿಸಬಹುದು. ಹೊಸದಾಗಿ ಯಾವುದೇ ಕಾಮಗಾರಿಗಳನ್ನು ಪ್ರಾರಂಭಿಸುವಂತಿಲ್ಲ. ಈಗಾಗಲೇ ವರ್ಗಾವಣೆ ಆದೇಶ ದೊರೆತಿದ್ದರೂ, ಇನ್ನೂ ರಿಲೀವ್‌ ಮಾಡದ ಪ್ರಕರಣಗಳಲ್ಲಿ ವರ್ಗಾವಣೆಯನ್ನು ತಡೆ ಹಿಡಿಯಬೇಕು. ಮತದಾರರ ಮೇಲೆ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಪ್ರಭಾವ ಬೀರುವಂತಹ ಯಾವುದೇ ಕೆಲಸವನ್ನು ಮಾಡಬಾರದು ಎಂದು ಅವರು ತಿಳಿಸಿದರು.

 ಎಲ್ಲಾ ಮತಗಟ್ಟೆಗಳಲ್ಲಿ ಭೇಟಿ ನೀಡಿ ಅಗತ್ಯ ಮೂಲ ಸೌಲಭ್ಯ ಇರುವುದನ್ನು ಖಾತ್ರಿಪಡಿಸಿ ವರದಿ ಸಲ್ಲಿಸಬೇಕು. ಎಲ್ಲಾ ಪ್ರವಾಸಿ ಮಂದಿರಗಳನ್ನು ಜಿಲ್ಲಾಡಳಿತದ ಸುಪರ್ದಿಗೆ ಪಡೆದುಕೊಳ್ಳಬೇಕು. ಯಾವುದೇ ರಾಜಕೀಯ ಪಕ್ಷದ ವ್ಯಕ್ತಿಗಳಿಗೆ ಪ್ರವಾಸಿ ಮಂದಿರಗಳಲ್ಲಿ ಪ್ರವೇಶಕ್ಕೆ ಅವಕಾಶ ನೀಡಬಾರದು. 

Advertisement

ಈ ಬಾರಿ ಅಂಗವಿಕಲ ಮತದಾರರನ್ನು ಮತಗಟ್ಟೆಗಳಿಗೆ ಕರೆ ತರಲು ವಾಹನ ವ್ಯವಸ್ಥೆ ಕಲ್ಪಿಸಲು ಚುನಾವಣಾ ಆಯೋಗ ಅನುಮತಿ ನೀಡಿದ್ದು, ಅಂತಹ ಅರ್ಹ ಮತದಾರರನ್ನು ಗುರುತಿಸಿ ಮಾಹಿತಿಯನ್ನು ಸಲ್ಲಿಸಬೇಕು. ಬಳಿಕ ಈ ಕುರಿತು ಸೂಕ್ತ ಕ್ರಮ ಕೈಗೊಳ್ಳಬಹುದಾಗಿದೆ. ಎಲ್ಲಾ ಮತಗಟ್ಟೆಗಳಲ್ಲಿ ಗಾಲಿಕುರ್ಚಿ ವ್ಯವಸ್ಥೆ ಮಾಡಿರಬೇಕು ಎಂದರು. 

ದಸರಾ ಆಚರಣೆ ಕುರಿತಾಗಿ ಈಗಾಗಲೇ ಆಯೋಗದಿಂದ ಮಾರ್ಗದರ್ಶನ ಕೋರಲಾಗಿದೆ. ಇದೇ ರೀತಿ ಇತರ ತಾಲೂಕುಗಳಲ್ಲಿ ದಸರಾ ಕಾರ್ಯಕ್ರಮ ಆಯೋಜಸುವ ಪೂರ್ವದಲ್ಲಿ ಜಿಲ್ಲಾಡಳಿತದಿಂದ ಅನುಮತಿ ಪಡೆದುಕೊಳ್ಳಬೇಕು. ಮದ್ಯ ವಹಿವಾಟಿನ ಮೇಲೆ ನಿಗಾ ಇರಿಸಬೇಕು. ಮದ್ಯ ದಾಸ್ತಾನು, ಮಾರಾಟದ ಬಗ್ಗೆ ಪ್ರತಿ ದಿನ ಮಾಹಿತಿಯನ್ನು ಒದಗಿಸಬೇಕು ಎಂದರು.

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಅಭಿನವ ಖರೆ, ಮಹಾನಗರ ಪಾಲಿಕೆ ಆಯುಕ್ತೆ ಚಾರುಲತಾ ಸೋಮಲ್‌, ಅಪರ ಜಿಲ್ಲಾಧಿಕಾರಿ ಅನುರಾಧ, ಉಪವಿಭಾಗಾಧಿಕಾರಿಗಳಾದ ಪ್ರಕಾಶ್‌, ನಾಗರಾಜ ಸಿಂಗ್ರೇರ್‌, ಶಿಮ್ಸ್‌ ಆಡಳಿತಾಧಿಕಾರಿ ನಾಗೇಂದ್ರ ಹೊನ್ನಾಳ್ಳಿ ಮತ್ತಿತರ ಅಧಿಕಾರಿಗಳು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next