ಬೆಳಗಾವಿ: ಮುಂದಿನ ತಿಂಗಳು ಮಹಾರಾಷ್ಟ್ರದ ವಿಧಾನಸಭೆ ಹಾಗೂ ಕರ್ನಾಟಕದ 15 ಕ್ಷೇತ್ರಗಳ ಉಪ ಚುನಾವಣೆಗಳ ಹಿನ್ನೆಲೆಯಲ್ಲಿ ಮಹಾರಾಷ್ಟ್ರದ ಕೊಲ್ಲಾಪುರದ ಪೊಲೀಸ್ ಅಧೀಕ್ಷಕರ ಕಚೇರಿಯಲ್ಲಿ ಕರ್ನಾಟಕ, ಮಹಾರಾಷ್ಟ್ರ ಹಾಗೂ ಗೋವಾ ರಾಜ್ಯದ ಹಿರಿಯ ಪೊಲೀಸ್ ಅಧಿಕಾರಿಗಳ ಸಭೆ ನಡೆಯಿತು.
ಕರ್ನಾಟಕ ಉತ್ತರ ವಲಯದ ಆರಕ್ಷಕ ಮಹಾನಿರೀಕ್ಷಕ ರಾಘವೇಂದ್ರ ಸುಹಾಸ ಮಾತನಾಡಿ, ಗಡಿ ಭಾಗಗಳಿಂದಅಕ್ರಮ ಮದ್ಯ, ಶಸ್ತಾಸ್ತ್ರ, ಹವಾಲಾ ಹಣ ಸಾಗಾಟವಾಗದಂತೆ, ಯಾವುದೇ ಗ್ಯಾಂಗ್‌ಗಳು ಸಕ್ರಿಯವಾಗದಂತೆ ಮತ್ತು ನಕಲಿ ಮತದಾರರ ಬಗ್ಗೆ ತೀವ್ರನಿಗಾವಹಿಸಿ ಕ್ರಮ ಕೈಗೊಳ್ಳಬೇಕು ಎಂದು ಸೂಚನೆ ನೀಡಿದರು.
ಸಾಂಗಲಿ, ಕೊಲ್ಹಾಪುರ ಮತ್ತು ಕರ್ನಾಟಕದಲ್ಲಿ ಈಗ ಪ್ರವಾಹ ಕಡಿಮೆಯಾಗಿದೆ. ಪ್ರವಾಹದ ವೇಳೆ ಎರಡು ರಾಜ್ಯದ ಪೊಲೀಸರು ಸೌಹಾರ್ದಯುತವಾಗಿ ಕೆಲಸ ಮಾಡಿದ್ದಾರೆ. ಗಣೇಶೋತ್ಸವದಲ್ಲಿಯೂ ಯಾವುದೇ ರೀತಿಯ ಅವಘಡ ಸಂಭವಿಸದಂತೆ ದಕ್ಷತೆಯಿಂದ ಕಾರ್ಯ ಕೈಗೊಳ್ಳಲಾಗಿದೆ. ಬೆಳಗಾವಿ, ವಿಜಯಪುರ ಮತ್ತು ಚಿಕ್ಕೋಡಿ ಭಾಗದಲ್ಲಿ ಚುನಾವಣೆಯ ವೇಳೆ ರೌಡಿಶೀಟರ್ ಗಳ ಮೇಲೆ ನಿಗಾವಹಿಸಬೇಕು. ಇದರಿಂದ ಅಕ್ರಮ ದಂಧೆಗಳನ್ನ ಮಟ್ಟ ಹಾಕಬಹುದು ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಮಹಾರಾಷ್ಟ್ರದ ವಿಶೇಷ ಪೊಲೀಸ್ ಮಹಾ ನಿರೀಕ್ಷಕ ಡಾ.ಸುಹಾಸ್ ವಾರಕೆ ಮಾತನಾಡಿ, ಚುನಾವಣೆಯ ವೇಳೆ ಸಾರಾಯಿ ಸಾಗಾಟ ಹೆಚ್ಚಾಗುವ ಸಾಧ್ಯತೆಯಿದೆ. ಆದ್ದರಿಂದ ಸಾರಾಯಿ ಉತ್ಪಾದಿಸುವ ಕಾರ್ಖಾನೆಗಳಿಂದ ಮಾಹಿತಿ ಪಡೆದುಕೊಳ್ಳಬೇಕು. ಅಕ್ರಮ ಸಾರಾಯಿ ಸಾಗಾಟದ ವಿರುದ್ಧ ಕ್ರಮ ಕೈಗೊಳ್ಳಬೇಕು. ಗಡಿ ಭಾಗದಲ್ಲಿ ಸಂಶಯಾಸ್ಪದವಾಗಿ ಕಂಡು ಬರುವ ವ್ಯಕ್ತಿಯ ವಿಚಾರಣೆ ನಡೆಸಬೇಕು ಎಂದು ಸೂಚನೆ ನೀಡಿದರು.
ಸಭೆಯಲ್ಲಿ ಬೆಳಗಾವಿ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ, ವಿಜಯಪುರ ಜಿಲ್ಲಾ ಎಸ್‌ಪಿ ಪ್ರಕಾಶ ನಿಕ್ಕಂ, ಚಿಕ್ಕೋಡಿ ಎಎಸ್‌ಪಿ ಮಿಥುನಕುಮಾರ ಕೊಲ್ಲಾಪುರದ ಡಿಸಿ ದೌಲತ್ ದೇಸಾಯಿ, ಸಾಂಗಲಿಯ ಜಿಲ್ಲಾಧಿಕಾರಿ ಡಾ.ಅಭಿಜೀತ್ ಚೌಧರಿ, ಸೋಲ್ಲಾಪುರದ ಪೊಲೀಸ್ ಅಧೀಕ್ಷಕ ಮನೋಜ್ ಪಾಟೀಲ ಮತ್ತು ದಕ್ಷಿಣ ಗೋವಾದ ಪೊಲೀಸ್ ಅಧೀಕ್ಷಕ ಉತ್ಕೃಷ್ಟ ಪ್ರಸನ್ನ ಇದ್ದರು.