Advertisement
ತ್ರಿಕೋನಾಕಾರದಲ್ಲಿರುವ ಕೇದಾರನಾಥ ಮಂದಿರದ ಗರ್ಭಗೃಹದಲ್ಲಿ ಶಿವಲಿಂಗವಿದ್ದರೆ ಹೊರಾಂಗಣದ ಗೋಡೆಯಲ್ಲಿ ದ್ರೌಪದಿ ಸಹಿತ ಪಂಚಪಾಂಡವರ ವಿಗ್ರಹ ಪೂಜಿಸಲ್ಪಡುತ್ತದೆ. ಈಗಿನ ನಯನ ಮನೋಹರ ಶಿಲಾಮಯ ಮಂದಿರವನ್ನು ಆದಿಗುರು ಶಂಕರಾಚಾರ್ಯರು ಸ್ಥಾಪಿಸಿದರಂತೆ.
Related Articles
ಹಿಮಾಲಯದ ಪರಿಸರ ಸೂಕ್ಷ್ಮತೆ ಮತ್ತು ಭವಿಷ್ಯದಲ್ಲಿ ಸಂಭವಿಸಬಹುದಾದ ಪ್ರವಾಹ- ಭೂಕುಸಿತಗಳನ್ನು ಗಮನದಲ್ಲಿರಿಸಿ ಕೇದಾರನಾಥದ ಪುನರ್ನಿರ್ಮಾಣ ಮಾಡುವುದು ಅನಿವಾರ್ಯವಾಗಿತ್ತು. ಅದರಂತೆ ಪ್ರಧಾನಮಂತ್ರಿಗಳ ನೇತೃತ್ವದಲ್ಲಿ ಕೇದಾರನಾಥ ಪುನರ್ನಿರ್ಮಾಣದ ಮಾಸ್ಟರ್ ಪ್ಲ್ಯಾನ್ ಸಿದ್ಧವಾಗಿತ್ತು.ಆ ಮಹಾನ್ ಕಾರ್ಯವನ್ನು ನೆಹರು ಇನ್ಸ್‌ಟಿಟ್ಯೂಟ್ ಆಫ್ ಮೌಂಟೇನೇರಿಯಂಗೆ ವಹಿಸಲಾಗಿತ್ತು.
Advertisement
ಮೊದಲ ಹಂತವಾಗಿ,ಕೇದಾರನಾಥ ದೇವಸ್ಥಾನದ ಸುತ್ತ ಆವರಿಸಿಕೊಂಡಿದ್ದ ವಾಣಿಜ್ಯ ಮತ್ತು ವಸತಿ ಕಟ್ಟಡಗಳನ್ನು ತೆರವುಗೊಳಿಸಲಾಯಿತು. ಕೇದಾರನಾಥಕ್ಕಿಂತ ಎರಡು ಕಿ. ಮೀ. ಮೊದಲೇ ಬೇಸ್ ಕ್ಯಾಂಪ್ ನಿರ್ಮಿಸಿ ಭಕ್ತರಿಗೆ ವಸತಿ ವ್ಯವಸ್ಥೆ ಮತ್ತು ವಾಣಿಜ್ಯ ಕಟ್ಟಡಗಳನ್ನು ನಿರ್ಮಿಸಲಾಯಿತು. ಕೇದಾರನಾಥ ದೇವಳದ ಸುತ್ತ ಮೂರು ಸ್ತರದ ಕಾಂಕ್ರೀಟ್ ಗೋಡೆಗಳನ್ನು ನಿರ್ಮಿಸಲಾಗಿದ್ದು ಭವಿಷ್ಯದಲ್ಲಿ ಹಿಮಾಲಯದ ಪರ್ವತಗಳಿಂದ ಪ್ರವಾಹ ಬಂದಲ್ಲಿ ಸೂಕ್ತ ರೀತಿಯಲ್ಲಿ ನೀರು ದೇವಾಲಯದತ್ತ ಸಾಗದೆ ಕಣಿವೆಗೆ ಹರಿದು ಹೋಗಲು ಬೇಕಾದಂಥ ವ್ಯವಸ್ಥೆ ಮಾಡಲಾಗಿದೆ.
ದೇವಸ್ಥಾನದ ಹಿಂಬದಿಯಲ್ಲಿ ಯಾವುದೇ ಕಟ್ಟಡ ನಿರ್ಮಾಣ ನಿಷಿದ್ಧವಾಗಿದೆ. 2013ರ ಪ್ರವಾಹದಲ್ಲಿ ಮಡಿದವರ ನೆನಪಿಗಾಗಿ ಒಂದು ಸ್ಮತಿ ಉದ್ಯಾನವನಕ್ಕೆ ಮೀಸಲಿರಿಸಲಾಗಿದೆ. ಮಂದಾಕಿನಿ ನದಿಯ ಸುತ್ತ ಘಾಟ್‌ಗಳನ್ನು ನಿರ್ಮಾಣ ಮಾಡಲಾಗಿದ್ದು ಇಲ್ಲಿ ಭಕ್ತರಿಗೆ ಧಾರ್ಮಿಕ ವಿಧಿವಿಧಾನಕ್ಕೆ ಬೇಕಾದ ವ್ಯವಸ್ಥೆಗಳನ್ನು ಮಾಡಲಾಗಿದೆ. ಮಂದಾಕಿನಿ ಸಂಗಮದಲ್ಲಿ ಒಂದು ಬೃಹತ್ ವೃತ್ತವನ್ನು ನಿರ್ಮಿಸಲಾಗಿದೆ. ಇಲ್ಲಿಂದ ಸುಮಾರು 900 ಅಡಿ ದೂರದಲ್ಲಿ ಕಣ್ಣಿಗೆ ಕಾಣುವ ಭವ್ಯವಾದ ಮಂದಿರ, ಕಠಿಣ ಚಾರಣದ ಮೂಲಕ ಆಗಮಿಸುವ ಭಕ್ತಾದಿಗಳಲ್ಲಿ ನವ ಉತ್ಸಾಹವನ್ನು ಮೂಡಿಸುತ್ತದೆ. ಸಂಗಮದಿಂದ ಮಂದಿರದ ತನಕ ಅಗಲವಾದ ಮೆಟ್ಟಲುಗಳ ವ್ಯವಸ್ಥೆ ಮಾಡಲಾಗಿದೆ. ಎರಡೂ ಕಡೆ ಎಲ…ಇಡಿ ದೀಪ ಮತ್ತು ಆಸನಗಳ ವ್ಯವಸ್ಥೆ ಇದೆ. ಮೆಟ್ಟಲುಗಳ ಆಸುಪಾಸಿನಲ್ಲಿ ಧ್ಯಾನಕೇಂದ್ರ, ಯಾಗಶಾಲೆ, ಮ್ಯೂಸಿಯಮ್, ಪೂಜಾ ಸಾಮಾಗ್ರಿಗಳ ಮಳಿಗೆಗಳ ನಿರ್ಮಾಣ ಕಾರ್ಯ ಆರಂಭವಾಗಿದೆ.
ಚಾರ್‌ಧಾಮ್ ಯಾತ್ರೆಗೆ ಹೊಸದಿಕ್ಕು ನೀಡಲಿರುವ ಚಾರ್‌ಧಾಮ್ ಎಕ್ಸ್‌ಪ್ರೆಸ್ ವೇ ಕೇದಾರನಾಥ ಸೇರಿದಂತೆ ಗಂಗೋತ್ರಿ, ಯಮುನೋತ್ರಿ, ಬದರೀನಾಥದ ರಸ್ತೆಗಳು ಆರು ತಿಂಗಳು ಹಿಮಪಾತದಿಂದ ಮುಚ್ಚಿದ್ದರೆ, ಮಳೆಗಾಲದಲ್ಲಿ ಭೂಕುಸಿತದಿಂದ ಪ್ರಯಾಣದಲ್ಲಿ ಅಡಚಣೆಯಾಗುತ್ತದೆ. ಪ್ರಸ್ತುತ ಇರುವ ರಸ್ತೆಗಳು ಕಡಿದಾಗಿದ್ದು ಪ್ರಯಾಣಕ್ಕೆ ತಗಲುವ ಸಮಯ ಸಾಮಾನ್ಯಕ್ಕಿಂತ ದುಪ್ಪಟಾಗಿರುತ್ತದೆ. ಇದನ್ನು ಮನಗಂಡ ಕೇಂದ್ರ ಸರ್ಕಾರ ಸುಮಾರು 12 ಸಾವಿರ ಕೋಟಿ ವೆಚ್ಚದಲ್ಲಿ ಚಾರ್‌ಧಾಮ್ ಮಹಾಮಾರ್ಗ್ ವಿಕಾಸ್ ಪರಿಯೋಜನ ಎಂಬ ಯೋಜನೆಯಡಿ ನಾಲ್ಕೂ ಧಾಮಗಳನ್ನು ಸಂಪರ್ಕಿಸುವ ಸರ್ವಋತು ದ್ವಿಪಥ ರಸ್ತೆ ನಿರ್ಮಾಣಕ್ಕೆ ಚಾಲನೆ ನೀಡಿದೆ. ಈಗಾಗಲೇ ಕಾಮಗಾರಿ ಆರಂಭವಾಗಿದ್ದು ಭವಿಷ್ಯದಲ್ಲಿ ಈ ರಸ್ತೆಯ ಮೂಲಕ ವರ್ಷವಿಡೀ ಯಾತ್ರೆ ಕೈಗೊಳ್ಳಬಹುದು ಮಾತ್ರವಲ್ಲ , ಅತೀ ಕಡಿಮೆ ಸಮಯದಲ್ಲಿ ಭಾರತೀಯ ಸೇನೆಯು ಗಡಿಭಾಗವನ್ನು ತಲುಪಲು ಸಹಾಯವಾಗಬಲ್ಲುದು. ಈ ರಸ್ತೆ ಉತ್ತರಖಂಡದ ಪ್ರವಾಸೋದ್ಯಮ ಮತ್ತು ಆರ್ಥಿಕತೆಗೆ ಹೊಸ ದಿಕ್ಕು ನೀಡಲಿದೆ.
ಪರಿಸರ ಪ್ರಜ್ಞೆಯ ಜೊತೆ ನಿಯಂತ್ರಿತ ಅಭಿವೃದ್ಧಿಯಾಗಲಿ ನೂರಾರು ಜೀವನದಿಗಳಿಗೆ ತವರುಮನೆಯಾಗಿರುವ ಹಿಮಾಲಯದ ಪ್ರದೇಶಗಳಲ್ಲಿ ಮೂಲ ಸೌಕರ್ಯ ಮತ್ತು ಪ್ರವಾಸೋದ್ಯಮದ ಅಭಿವೃದ್ಧಿ ಅಲ್ಲಿನ ಧಾರಣಾ ಸಾಮರ್ಥ್ಯದ ಅಧ್ಯಯನದ ಮೇಲೆ ನಡೆಯಬೇಕಾಗಿರುವುದು ಅತ್ಯಂತ ಆವಶ್ಯಕ.
-ವಿಕ್ರಮ್ ನಾಯಕ್