ಉತ್ತರಾಖಂಡ್: ಪ್ರಧಾನಿ ನರೇಂದ್ರ ಮೋದಿ ಅವರು ನವೆಂಬರ್ 5ರಂದು ಕೇದಾರನಾಥ್ ಕ್ಕೆ ಭೇಟಿ ನೀಡಲಿರುವ ಹಿನ್ನೆಲೆಯಲ್ಲಿ ಎಲ್ಲಾ ರೀತಿಯ ಸಿದ್ಧತೆ ನಡೆಯುತ್ತಿದೆ. ನ.5ರಂದು ಪ್ರಧಾನಿ ಮೋದಿ ಅವರು ಕೇದಾರನಾಥ ದೇವಾಲಯಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದ ನಂತರ ಆದಿ ಶಂಕರಾಚಾರ್ಯ ಅವರ ಸಮಾಧಿಯನ್ನು ಉದ್ಘಾಟಿಸಲಿದ್ದಾರೆ. ಅಲ್ಲದೇ ಆದಿ ಶಂಕರಾಚಾರ್ಯರ ಪ್ರತಿಮೆಯನ್ನು ಈ ಸಂದರ್ಭದಲ್ಲಿ
ಅನಾವರಣಗೊಳಿಸಲಿದ್ದಾರೆ.
ಇದನ್ನೂ ಓದಿ:ಬಡ್ತಿ: ಬಾಲಾಕೋಟ್ ವೈಮಾನಿಕ ದಾಳಿ ಹೀರೋ ಅಭಿನಂದನ್ ಈಗ ಗ್ರೂಪ್ ಕ್ಯಾಪ್ಟನ್
2013ರ ನಂತರ ಪ್ರಧಾನಿ ನರೇಂದ್ರ ಮೋದಿ ಅವರು ಈ ಸ್ಥಳದಲ್ಲಿ ತುಂಬಾ ಅಭಿವೃದ್ಧಿ ಕೆಲಸ ಮಾಡಿದ್ದಾರೆ ಎಂದು ಕೇದಾರನಾಥ ದೇವಾಲಯಕ್ಕೆ ಭೇಟಿ ನೀಡಿರುವ ಭಕ್ತರೊಬ್ಬರು ತಿಳಿಸಿದ್ದಾರೆ. 2011ರಿಂದ ನಾನು ಪ್ರತಿವರ್ಷ ಕೇದಾರನಾಥಕ್ಕೆ ಭೇಟಿ ನೀಡುತ್ತಿದ್ದೇನೆ. 2013ರ ನಂತರ ಇಲ್ಲಿ ತುಂಬಾ ಅಭಿವೃದ್ಧಿಯಾಗಿದೆ. ಜನರಿಗೂ ಕೆಲಸ ದೊರೆಯುತ್ತಿದೆ ಎಂದು ಮತ್ತೊಬ್ಬ ಭಕ್ತ ತಿಳಿಸಿರುವುದಾಗಿ ವರದಿ ವಿವರಿಸಿದೆ.
ಕೇದಾರನಾಥ ಭೇಟಿ ವೇಳೆ ಸಂಗಮ್ ಘಾಟ್ ಪುನರ್ ಅಭಿವೃದ್ಧಿ, ಪ್ರವಾಸೋದ್ಯಮ ಕೇಂದ್ರ, ಆಸ್ಪತ್ರೆ, ಎರಡು ಅತಿಥಿ ಗೃಹಗಳು, ಪೊಲೀಸ್ ಠಾಣೆ, ನಿಯಂತ್ರಣ ಕೊಠಡಿ ಸೇರಿದಂತೆ ಸುಮಾರು 180 ಕೋಟಿ ರೂಪಾಯಿ ಯೋಜನೆಗಳಿಗೆ ಪ್ರಧಾನಿ ಮೋದಿ ಅವರು ಶಂಕುಸ್ಥಾಪನೆ ನೆರವೇರಿಸಲಿದ್ದಾರೆ ಎಂದು ಪ್ರಧಾನಿ ಕಚೇರಿ ಪ್ರಕಟಣೆಯಲ್ಲಿ ತಿಳಿಸಿದೆ.
ಸರಸ್ವತಿ ಅಷ್ಟಪಥ ಸೇರಿದಂತೆ ಹಲವು ಯೋಜನೆಗಳ ಕೆಲಸಗಳ ಪರಿಶೀಲನೆ ನಡೆಸಲಿರುವ ಪ್ರಧಾನಿ ಮೋದಿ ಅವರು, ಪೂರ್ಣಗೊಂಡ ಯೋಜನೆಗಳನ್ನು ಉದ್ಘಾಟಿಸಲಿದ್ದಾರೆ ಎಂದು ವರದಿ ವಿವರಿಸಿದೆ.