Advertisement

KEA; CET ಇನ್ನು ಕಂಪ್ಯೂಟರ್‌ ಆಧಾರಿತ: ಸಚಿವ ಡಾ. ಎಂ.ಸಿ.ಸುಧಾಕರ್‌

10:52 PM Jul 13, 2024 | Team Udayavani |

ಬೆಂಗಳೂರು: ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (ಕೆಇಎ) ನಡೆಸುವ ವೃತ್ತಿಪರ ಕೋರ್ಸ್‌ಗಳ ಪ್ರವೇಶಕ್ಕೆ ನಡೆಸುವ ಸಾಮಾನ್ಯ ಪ್ರವೇಶ ಪರೀಕ್ಷೆಯನ್ನು (ಸಿಇಟಿ) ಕಂಪ್ಯೂಟರ್‌ ಆಧಾರಿತ ಪರೀಕ್ಷೆಯಾಗಿಸುವ ಬಗ್ಗೆ ಗಂಭೀರ ಚಿಂತನೆ ನಡೆಸಲಾಗುತ್ತಿದೆ ಎಂದು ಕೆಇಎ ಅಧ್ಯಕ್ಷರೂ ಆದ ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ. ಸುಧಾಕರ್‌ ಹೇಳಿದರು.

Advertisement

ಮಲ್ಲೇಶ್ವರದಲ್ಲಿರುವ ಕೆಇಎ ಕಚೇರಿಯಲ್ಲಿ ಶನಿವಾರ ನಡೆದ ಕಾರ್ಯಕ್ರಮದಲ್ಲಿ ಕೆ-ಸೆಟ್‌ 23ರಲ್ಲಿ ಅರ್ಹತೆ ಪಡೆದ ಅಭ್ಯರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಿ ಮಾತನಾಡಿ, ಮಹಾರಾಷ್ಟ್ರ ಮತ್ತಿತರ ಒಂದೆರಡು ರಾಜ್ಯಗಳಲ್ಲಿ ಅಲ್ಲಿನ ಸಾಮಾನ್ಯ ಪ್ರವೇಶ ಪರೀಕ್ಷೆಯನ್ನು ಸಿಬಿಟಿ ಮಾದರಿಯಲ್ಲಿ ನಡೆಸಿರುವುದನ್ನು ಅಧ್ಯಯನ ಮಾಡಲಾಗಿದೆ. ಸಿಇಟಿಯನ್ನು ಕಂಪ್ಯೂಟರ್‌ ಆಧರಿಸಿ ನಡೆಸಲು ಹೆಚ್ಚಿನ ಮೂಲಸೌಕರ್ಯವೂ ಅಗತ್ಯವಿರುತ್ತದೆ. ಜತೆಗೆ ಕಂಪ್ಯೂಟರ್‌ನಲ್ಲಿ ಪರೀಕ್ಷೆ ಬರೆಯಲು ಮಕ್ಕಳಿಗೆ ತಯಾರಿಯ ಅವಶ್ಯಕತೆ ಇರುತ್ತದೆ. ಇದೆಲ್ಲದರ ಸಾಧಕ-ಬಾಧಕಗಳನ್ನು ಗಣನೆಗೆ ತೆಗೆದುಕೊಂಡು ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ ಎಂದರು.

ಸಿಇಟಿ ಪ್ರಶ್ನೆ ಪತ್ರಿಕೆಯಲ್ಲಿ ಬದಲಾವಣೆ
ಈ ಬಾರಿ ಆದಷ್ಟು ಶೀಘ್ರ ಎನ್‌ಸಿಇಆರ್‌ಟಿ ಪಠ್ಯವನ್ನು ನಾವು ನಮ್ಮ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್‌ ಮಾಡುವ ಮೂಲಕ ಸಿಇಟಿ ಪಠ್ಯದ ಬಗ್ಗೆ ಸ್ಪಷ್ಟತೆ ನೀಡುತ್ತೇವೆ. ಕಳೆದ ಬಾರಿ ಸಿಇಟಿ ಪ್ರಶ್ನೆ ಪತ್ರಿಕೆಯಲ್ಲಿ ಪಠ್ಯೇತರ ಪ್ರಶ್ನೆಗಳನ್ನು ಕೇಳಿರುವ ಬಗ್ಗೆ ನಿವೃತ್ತ ಐಎಎಸ್‌ ಅಧಿಕಾರಿಯ ನೇತೃತ್ವದ ಸಮಿತಿ ಪರಿಶೀಲನೆ ಮಾಡುತ್ತಿದೆ. ನೀಟ್‌ ಅಕ್ರಮಗಳಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ ವಿಚಾರಣೆ ನಡೆಸುತ್ತಿದ್ದು, ಅಂತಿಮ ಆದೇಶ ನೋಡಿಕೊಂಡು ಸಿಇಟಿ ಕೌನ್ಸೆಲಿಂಗ್‌ ವೇಳಾಪಟ್ಟಿ ಪ್ರಕಟಿಸಲಾಗುವುದು ಎಂದರು.

ನ. 24: ಕೆಸೆಟ್‌ ಪರೀಕ್ಷೆ
2023ನೇ ಸಾಲಿನ ರಾಜ್ಯ ಸಹಾಯಕ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆ (ಕೆಸೆಟ್‌) ಮುಗಿಸಿ ಪ್ರಮಾಣ ಪತ್ರ ನೀಡಿದ ದಿನವೇ 2024ನೇ ಸಾಲಿನ ಅಧಿಸೂಚನೆಯನ್ನೂ ಸಚಿವ ಡಾ.ಸುಧಾಕರ್‌ ಬಿಡುಗಡೆ ಮಾಡಿದರು. ಜುಲೈ 22ರಿಂದ ಆಗಸ್ಟ್‌ 22ರ ವರೆಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ. ಆಗಸ್ಟ್‌ 26 ಅರ್ಜಿ ಶುಲ್ಕ ಪಾವತಿಸಲು ಕೊನೆಯ ದಿನವಾಗಿದೆ. ನವೆಂಬರ್‌ 24ರಂದು ಪರೀಕ್ಷೆ ನಡೆಸುವುದಾಗಿ ಘೋಷಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next