Advertisement

ತೋಟಗಾರಿಕಾ ಸಚಿವರಿಂದ ಕೊಳೆರೋಗ ಪರಿಹಾರದ ಭರವಸೆ: ಶಾಸಕ

01:05 AM Nov 29, 2018 | Team Udayavani |

ಕುಂದಾಪುರ: ತಾಲೂಕಿಗೆ ಕೊಳೆರೋಗ ಪರಿಹಾರ ಬಾಬ್ತು 3 ಕೋ.ರೂ. ಬಾಕಿ ಇದೆ. ತೋಟಗಾರಿಕಾ ಸಚಿವರ ಜತೆ ಮಾತನಾಡಲಾಗಿದ್ದು ಪರಿಹಾರ ನೀಡುವ ಭರವಸೆ ನೀಡಿದ್ದಾರೆ ಎಂದು ಬೈಂದೂರು ಶಾಸಕ ಬಿ.ಎಂ. ಸುಕುಮಾರ ಶೆಟ್ಟಿ ಹೇಳಿದ್ದಾರೆ. ಅವರು ಬುಧವಾರ ಇಲ್ಲಿನ ತಾಲೂಕು ಪಂಚಾಯತ್‌ನಲ್ಲಿ ನಡೆದ ತ್ತೈಮಾಸಿಕ ಕೆಡಿಪಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

Advertisement

ಪೊಲೀಸರಿಗೆ ತರಾಟೆ
ಜಿ.ಪಂ. ಸದಸ್ಯ ಸುರೇಶ್‌ ಬಟ್ವಾಡಿ ಅವರಿಗೆ ಬೈಂದೂರು ಎಸ್‌ಐ ಅವಮಾನಿಸಿದ್ದಾರೆ ಎನ್ನುವ ವಿಚಾರ ತೀವ್ರ ಚರ್ಚೆಗೆ ಒಳಗಾಯಿತು. ಕುಂದಾಪುರ ಎಎಸ್‌ಐ ಅವರು ಸಭೆಗೆ ಪೊಲೀಸ್‌ ಇಲಾಖೆ ಪರವಾಗಿ ಆಗಮಿಸಿದ್ದು ಶಾಸಕರನ್ನು ಕೆರಳಿಸಿತು. ಅನಂತರ ಡಿವೈಎಸ್‌ಪಿ ದಿನೇಶ್‌ ಕುಮಾರ್‌ ಬಿ.ಪಿ. ಅವರನ್ನು ಸಭೆಗೆ ಕರೆಸಲಾಯಿತು. ಪೊಲೀಸ್‌ ದೌರ್ಜನ್ಯ ಕುರಿತು ಲಿಖೀತ ದೂರು ಬಂದಿಲ್ಲ. ಬಂದಲ್ಲಿ ಪ್ರಕರಣ ದಾಖಲಿಸಲಾಗುವುದು ಎಂದು ಡಿವೈಎಸ್‌ಪಿ ಸ್ಪಷ್ಟನೆ ನೀಡಿದರು.

ತಾಲೂಕು ಸಮುದಾಯ ಆರೋಗ್ಯ ಕೇಂದ್ರ ಸೇರಿದಂತೆ ವಿವಿಧ ಸರಕಾರಿ ಆಸ್ಪತ್ರೆಗಳಲ್ಲಿ  ಸಿಬಂದಿ ಕೊರತೆ, ಆಯುರ್ವೇದ ಆಸ್ಪತ್ರೆಗಳಲ್ಲಿ ಔಷಧ ಕೊರತೆ ಬಗ್ಗೆ ಆಸ್ಪತ್ರೆಗಳ ವೈದ್ಯಾಧಿಕಾರಿಗಳು ಸಭೆಯ ಗಮನಕ್ಕೆ ತಂದರು. ಬೈಂದೂರು ಆಸ್ಪತ್ರೆಯನ್ನು ತಾಲೂಕು ಆಸ್ಪತ್ರೆ ದರ್ಜೆಗೆ ಏರಿಸಲು ಮನವಿ ಮಾಡಲಾಗಿದೆ. ಸಿದ್ದಾಪುರ, ಗಂಗೊಳ್ಳಿಗೆ 108 ಅಂಬುಲೆನ್ಸ್‌ ಬಂದಿದ್ದು ಕಂಡ್ಲೂರು, ವಂಡ್ಸೆಗೆ ಬರಲಿದೆ ಎಂದು ಶಾಸಕರು ಹೇಳಿದರು. ಕೋಡಿಗೆ ನಗರ ಆರೋಗ್ಯ ಕೇಂದ್ರ ಮಂಜೂರಿಗೆ ಬರೆದಿದ್ದರೂ, 50 ಸಾವಿರ ಜನರಿರಬೇಕೆಂಬ ಷರತ್ತಿನಿಂದ ಮಂಜೂರು ಅಸಾಧ್ಯ ಎಂದು ಡಾ| ನಾಗಭೂಷಣ್‌ ಉಡುಪ ಹೇಳಿದರು. ತಾ. ಆಸ್ಪತ್ರೆಯಲ್ಲಿ ಜಿ.ಶಂಕರ್‌ ಟ್ರಸ್ಟ್‌ನಿಂದ 100 ಹಾಸಿಗೆಗಳ ಹೆರಿಗೆ ಆಸ್ಪತ್ರೆಯಾಗುತ್ತಿದೆ. ಇದಕ್ಕೆ ವೈದ್ಯರ ನೇಮಕವಾಗಬೇಕಿದೆ. 5 ಡಯಾಲಿಸಿಸ್‌ ಯಂತ್ರಗಳಿದ್ದು 26 ಜನ ಡಯಾಲಿಸಿಸ್‌ಗೆ ಒಳಗಾಗುತ್ತಿದ್ದು 16 ಜನ ಕಾಯುತ್ತಿದ್ದಾರೆ. ವೈದ್ಯರು, ಸಿಬಂದಿ ಕೊರತೆ ಇದೆ ಎಂದು ತಾಲೂಕು ಆಸ್ಪತ್ರೆಯ ಡಾ| ರಾಬರ್ಟ್‌ ರೆಬೆಲ್ಲೋ ಹೇಳಿದರು.

ವರದಿ ಪಾಲನೆಯಿಲ್ಲ
ಜಿ.ಪಂ. ಸದಸ್ಯೆ ಶ್ರೀಲತಾ ಅವರು ಪಾಲನಾ ವರದಿ ಪಾಲನೆಯೇ ಆಗುತ್ತಿಲ್ಲ. ಅನುಪಾಲನೆಯಲ್ಲಿ ಹೇಳಿದರೂ ಕಾರ್ಯಗತವಾಗುತ್ತಿಲ್ಲ. ಕಾಟಾಚಾರಕ್ಕೆ ಸಭೆ ಮಾಡಲಾಗುತ್ತಿದೆ ಎಂದರು. ಸಣ್ಣ ನೀರಾವರಿ, ನಿರ್ಮಿತಿ ಕೇಂದ್ರ, ಪೊಲೀಸ್‌ ಇಲಾಖೆಯವರು ಕಳೆದ 3 ತಿಂಗಳ ಹಿಂದೆ ನಡೆದ ಸಭೆಯ ನಡವಳಿಗೆ ಇನ್ನೂ ಉತ್ತರ ನೀಡಿಲ್ಲ ಎಂದರು. ಇದಕ್ಕೆ ಜಿ.ಪಂ. ಸ್ಥಾಯಿ ಸಮಿತಿ ಅಧ್ಯಕ್ಷ ಬಾಬು ಶೆಟ್ಟಿ ಪ್ರತಿಕ್ರಿಯಿಸಿ ಅಧಿಕಾರಿಗಳು ಇಂತಹ ನಿರ್ಲಕ್ಷ್ಯ ಮಾಡಬಾರದು ಎಂದರು.

ಅರ್ಹರಿಗೆ ಸಿಗುತ್ತಿಲ್ಲ
ಅರ್ಹ ಫ‌ಲಾನುಭವಿಗಳಿಗೆ ಸರಕಾರಿ ಸೌಲತ್ತು ದೊರೆಯದೇ ದೊರೆತವರಿಗೇ ಮರಳಿ ದೊರೆಯುತ್ತಿದೆ. ಇದಕ್ಕಾಗಿ ಪೋರ್ಟಲ್‌ ವ್ಯವಸ್ಥೆ ಮಾಡಲಾಗಿದ್ದು ಸೀನಿಯಾರಿಟಿ ಆಧಾರದಲ್ಲಿ ಮಂಜೂರಾಗುತ್ತದೆ. ಒಮ್ಮೆ ಸೌಕರ್ಯ ದೊರೆತರೆ ಅವರಿಗೆ 7 ವರ್ಷ ಅದೇ ಸೌಕರ್ಯ ದೊರೆಯದಂತೆ ಮಾಡಲಾಗಿದೆ ಎಂದು ಕೃಷಿ ಇಲಾಖೆ ಸಹಾಯಕ ನಿರ್ದೇಶಕಿ ಹೇಳಿದರು. 

Advertisement

ಇಲಾಖೆಯಲ್ಲಿ ಸಿಬಂದಿ ಕೊರತೆಯಿದ್ದು 20 ಸಹಾಯಕ ಕೃಷಿ ಅಧಿಕಾರಿಗಳಿರಬೇಕಿದ್ದು 3 ಮಂದಿಯಷ್ಟೇ ಇದ್ದಾರೆ ಎಂದರು. ಬೆಳ್ಳಾಲದಲ್ಲಿ ತೆಂಗಿನಮರದಿಂದ ಬಿದ್ದು ಗೋಪಾಲಶೆಟ್ಟಿ ಅವರು ಮೃತಪಟ್ಟು 5 ತಿಂಗಳಾದರೂ ಪರಿಹಾರ ಸಿಗಲಿಲ್ಲ ಎಂದು ಕೆಡಿಪಿ ಸದಸ್ಯ ಪ್ರಸನ್ನ ಕುಮಾರ್‌ ಹೇಳಿದರು. ಇಂತಹ 4 ಪ್ರಕರಣ ಗಳಿದ್ದು ಸಹಾಯಕ ಕಮಿಷನರ್‌ ಅವರ ಜತೆ ಸಭೆ ಮಾಡಿ ಪರಿಹಾರ ನೀಡಲಾಗುವುದು ಎಂದರು. ತಾ.ಪಂ. ಅಧ್ಯಕ್ಷೆ ಜಯಶ್ರೀ ಎಸ್‌. ಮೊಗವೀರ, ಸ್ಥಾಯಿ ಸಮಿತಿ ಅಧ್ಯಕ್ಷ ನಾರಾಯಣ, ಕಾರ್ಯ ನಿರ್ವಹಣಾಧಿಕಾರಿ ಕಿರಣ್‌ ಪೆಡೆ°àಕರ್‌, ಡಿವೈಎಸ್‌ಪಿ ದಿನೇಶ್‌ ಕುಮಾರ್‌ ಬಿ.ಪಿ., ಕುಂದಾಪುರ ತಹಶೀಲ್ದಾರ್‌ ತಿಪ್ಪೆಸ್ವಾಮಿ, ಬೈಂದೂರು ತಹಶೀಲ್ದಾರ್‌ ಕಿರಣ್‌ ಗೋರಯ್ಯ ಉಪಸ್ಥಿತರಿದ್ದರು. 

ಕಳಪೆ ಶಾಲಾ ಕಟ್ಟಡ
ಆರ್‌ಎಂಎಸ್‌ ಯೋಜನೆಯಡಿ ಮಾಡಿದ ಶಾಲಾ ಕಾಮಗಾರಿಗಳು ಕಳಪೆಯಾಗಿದೆ ಎಂಬ ಆರೋಪ ಕೇಳಿ ಬಂತು. ಕಾಮಗಾರಿ ಪೂರ್ಣವಾಗದಿದ್ದರೂ ಇಲಾಖೆ ಅವುಗಳನ್ನು ಹಸ್ತಾಂತರಿಸಿಕೊಂಡದ್ದಕ್ಕೆ ಬಾಬು ಶೆಟ್ಟಿ ಅವರಿಂದ ಆಕ್ಷೇಪ ವ್ಯಕ್ತವಾಯಿತು. ಶಿಕ್ಷಣ ಇಲಾಖೆಯೇ ಹೀಗಾದರೆ ಇತರ ಇಲಾಖೆಗಳ ಗತಿಯೇನು ಎಂದು ಶಾಸಕರು ಪ್ರಶ್ನಿಸಿದರು.

ಜೀಪು ಬಳಕೆ
ಕೊರಗ ಸಮುದಾಯಕ್ಕೆ ನೀಡಿದ ಜೀಪನ್ನು ತಾಲೂಕು ವೈದ್ಯಾಧಿಕಾರಿ ಬಳಸುತ್ತಾರೆ ಎಂದು ಜಿ.ಪಂ. ಸದಸ್ಯೆ ಗೌರಿ ದೇವಾಡಿಗ ಅವರು ಆಕ್ಷೇಪಿಸಿದಾಗ 18 ವರ್ಷ ಹಳೆಯ ಜೀಪು ನೀಡಲಾಗಿದ್ದು ಕೆಟ್ಟುಹೋಗಿದೆ. ಅನಿವಾರ್ಯ ಕಾರಣದಿಂದ ಜೀಪು ಬಳಸಿದ್ದೇನೆ. ಹೊಸ ಜೀಪು ಕೊಡಿಸಿ ಎಂದು ತಾಲೂಕು ವೈದ್ಯಾಧಿಕಾರಿ ಡಾ| ನಾಗಭೂಷಣ್‌ ಉಡುಪ ಪ್ರತಿಕ್ರಿಯಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next