ಆಲೂರು: ಗ್ರಾಮೀಣಾಭಿವೃದ್ಧಿಗೆ ಪೂರಕವಾಗಿ ಗ್ರಾಮ ಪಂಚಾಯಿತಿ ಮಟ್ಟದಲ್ಲೂ ಕೆಡಿಪಿ ಸಭೆಗಳನ್ನು ನಡೆಸಲು ಸರ್ಕಾರ ಹೊರಡಿಸಿರುವ ಹೊಸ ಆದೇಶ ಮಹತ್ವಪೂರ್ಣವಾಗಿದೆ ಎಂದು ಕುಂದೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಪ್ರಕಾಶ್ ಹೇಳಿದರು.
ತಾಲೂಕಿನ ಕುಂದೂರು ಹೋಬಳಿ ಕುಂದೂರು ಗ್ರಾಮ ಪಂಚಾಯಿತಿ ಏರ್ಪಡಿಸಿದ್ದ ತ್ತೈಮಾಸಿಕ ಕೆಡಿಪಿ ಸಭೆ ಯಲ್ಲಿ ಮಾತನಾಡಿದ ಅವರು. ಇಂತಹ ಸಭೆಯು ಗ್ರಾಮ ಪಂಚಾಯತಿ ಮಟ್ಟದಲ್ಲಿ ನಡೆಯುವುದರಿಂದ ಗ್ರಾಮ ಸಮಸ್ಯೆಗಳನ್ನು ಅರಿತು ಅವುಗಳನ್ನು ಬಗೆಹರಿಸಲು ಅಧಿಕಾರಿಗಳಿಗೆ ಅನುಕೂಲವಾಗಲಿದೆ.
ಪ್ರತಿ ಮೂರು ತಿಂಗಳಿಗೊಮ್ಮೆ ನಡೆಯುವ ಈ ಸಭೆಗೆ ಹೋಬಳಿ ಮಟ್ಟದ ಎಲ್ಲಾ ಇಲಾಖೆಯ ಅಧಿಕಾರಿಗಳು ಹಾಜರಾಗಿ ಇಲಾಖಾವಾರು ಹೊಸ ಯೋಜನೆಗಳ ಬಗ್ಗೆ ಮಾಹಿತಿ ನೀಡಬೇಕು. ಆಗ ಮಾತ್ರ ಇಂತಹ ಸಭೆಗಳು ಗ್ರಾಮದ ಪ್ರಗತಿಗೆ ಪೂರಕವಾಗುತ್ತವೆ ಎಂದು ತಿಳಿಸಿದರು.
ಸಭೆಯಲ್ಲಿ ಮಕ್ಕಳ ಹಾಗೂ ಗರ್ಭಿಣಿಯರ ಆರೋಗ್ಯಕ್ಕಾಗಿ ಪೌಷ್ಟಿಕಾಂಶ ಒದಗಿಸುವ ಕಾರ್ಯಕ್ರಮಗಳ ಅನುಷ್ಠಾನದ ಬಗ್ಗೆ, ಮಕ್ಕಳ ಹಾಗೂ ಮಹಿಳೆಯರ ಆರೋಗ್ಯದ ಬಗ್ಗೆ, ಶೈಕ್ಷಣಿಕ ಕಾರ್ಯಕ್ರಮಗಳ ಅನುಷ್ಠಾನ ಮತ್ತು ಪಡಿತರ ಧಾನ್ಯಗಳ ಸಮರ್ಪಕ ವಿತರಣೆ ಕುರಿತಂತೆ, ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಿವಿಧ ಶಾಲೆಗಳಲ್ಲಿ ವಿದ್ಯಾರ್ಥಿಗಳ ಹಾಜ ರಾತಿ ಮತ್ತು ತರಗತಿಗಳ ನಿರ್ವಹಣೆ ಹಾಗೂ ಕೃಷಿ, ತೋಟಗಾರಿಕೆ ಇಲಾಖೆಗಳಿಗೆ ಸಂಬಂಧಪಟ್ಟ ಇಲಾಖೆಯ ಕಾರ್ಯ ಚಟುವಟಿಕೆಗಳ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು.
ಸಭೆಯಲ್ಲಿ ಕುಂದೂರು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಕೆ.ಆರ್.ರಮ್ಯಶ್ರೀ, ಉಪಾಧ್ಯಕ್ಷೆ ಮಂಜುಳಾ, ಸದಸ್ಯರಾದ ನಾಗಮ್ಮ, ರೂಪೇಶ್ ಕುಮಾರ್, ಹಾಗೂ ಇಲಾಖೆಯ ಅಧಿಕಾರಿಗಳು ಹಾಗೂ ಗ್ರಾಮಸ್ಥರುಗಳು ಹಾಜರಿದ್ದರು.