ಹುಣಸೂರು: ಹುಣಸೂರು ನಗರ ಯೋಜನಾ ಪ್ರಾಧಿಕಾರದ ಅಧಿಕಾರಿಗಳ ಅವ್ಯವಹಾತದಿಂದಾಗಿ ಹುಣಸೂರು ನಗರದ ಸುತ್ತಮುತ್ತಲಿನ ಗ್ರಾ.ಪಂಗಳಿಗೆ ಸಾಕಷ್ಟು ಅನ್ಯಾಯವಾಗಿದೆ. ನಷ್ಟವಾಗಿರುವ ಗ್ರಾ.ಪಂಗಳಿಗೆ ಹುಡಾದಿಂದ ನಷ್ಟ ಭರಿಸಬೇಕು ಜೊತೆಗೆ ತಪ್ಪಿತಸ್ಥ ಅಧಿಕಾರಿಗಳಿಗೆ ತಕ್ಕ ಶಿಕ್ಷೆ ವಿಧಿಸಲು ಕೆಡಿಪಿ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.
ನಗರಸಭೆ ಸಭಾಂಗಣದಲ್ಲಿ ಶಾಸಕ ಎಚ್.ಪಿ.ಮಂಜುನಾಥ್ ಅಧ್ಯಕ್ಷತೆಯಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ಹುಡ ಇಂಜಿನಿಯರ್ ಲಕ್ಷ್ಮಣನಾಯ್ಕ ರಿಂದ ಮಾಹಿತಿ ಪಡೆದ ನಂತರ ಮಾತನಾಡಿದ ಶಾಸಕರು ನಗರದ ಸೇರಿದಂತೆ ಸುತ್ತ ಮುತ್ತಲಿನಲ್ಲಿ ಲೇಔಟ್ ನಿರ್ಮಿಸಿದ್ದು. ಎಸ್ ಟಿ ಪಿ ಪ್ಲಾಂಟ್ ನಿರ್ಮಿಸಿ, ನೀರನ್ನು ಮಾತ್ರ ಒಳಚರಂಡಿಗೆ ಬಿಡಬೇಕು ಆದರೆ ಉಪ್ಕಾರ್ ಬಡಾವಣೆ ಒಂದರಲ್ಲಿ ಮಾತ್ರ ಎಸ್ ಟಿಪಿ ಪ್ಲಾಂಟ್ ನಿರ್ಮಿಸಿದ್ದಾರೆ ಎಂದರು.
ಉಳಿದೆಡೆ ರಸ್ತೆ, ಚರಂಡಿ ನಿರ್ಮಿಸಿಲ್ಲ. ಲೇಔಟ್ ನವರು ಡೆಡ್ ಎಂಡ್ ಬಿಡದೆ ಮನೆ ನಿರ್ಮಿಸಿದ್ದು, ಜನರು ಬಡಿದಾಡುವ, ನ್ಯಾಯಾಲಯಕ್ಕೆ ಹೋಗುವ ಹಂತಕ್ಕೆ ತಲುಪಿದ್ದಾರೆ. ನೀವು ಮಾಡುವ ತಪ್ಪಿಗೆ ಜನ ಹೊಡೆದಾಡುತ್ತಿದ್ದಾರೆ. ಗ್ರಾ.ಪಂ.ಗಳ ಜಮೀನನ್ನು ನಗರಸಭೆಗೆ ಸೇರಿಸಿ ಖಾತೆ ಮಾಡುತ್ತಿದ್ದು, ಡೆವಲಪರ್ಸ್ ಗಳ ಪರ ನಿಂತಿರುವ ಬಗ್ಗೆ ತನಿಖೆ ನಡೆಸಲು ಸರಕಾರಕ್ಕೆ ಪತ್ರ ಬರೆಯಲು ತೀರ್ಮಾನಿಸಲಾಯಿತು.
ಜನರಿಗೆ ಸಮರ್ಪಕ ಬಸ್ ವ್ಯವಸ್ಥೆ ಕಲ್ಪಿಸದ ಡಿಪೋ ವ್ಯವಸ್ಥಾಪಕ ಸುರೇಶ್ ರವರು ಯಾವುದೇ ಸಭೆಗೂ ಹಾಜರಾಗುತ್ತಿಲ್ಲ. ಬಸ್ ಪಾಸ್ ಬಗ್ಗೆ ಮಾಹಿತಿ ನೀಡುತ್ತಿಲ್ಲ. ಜೊತೆಗೆ ಮೀಸಲಾತಿ ಅನುಸರಿಸುತ್ತಿಲ್ಲ. ಹೇಳಿದರೂ ಕೇಳುವ ಸ್ಥಿತಿಯಲ್ಲಿಲ್ಲ. ಹೀಗಾಗಿ ಹಿರಿಯ ಅಧಿಕಾರಿಗಳಿಗೆ ಪತ್ರ ಬರೆಯಲು ಶಾಸಕರು ಇ.ಓ. ಗಿರೀಶ್ ರಿಗೆ ಸೂಚಿಸಿದರು.
ಆರೋಗ್ಯ ಇಲಾಖೆ ಮತ್ತು ತಹಸೀಲ್ದಾರ್ ರವರು ಕೊರೊನಾ ಬಗ್ಗೆ ಹೆಚ್ಚಿನ ನಿಗಾ ವಹಿಸಬೇಕು. ಜನರಲ್ಲಿ ಮತ್ತಷ್ಟು ಜಾಗೃತಿ ಮೂಡಿಸುವ ಕೆಲಸ ಮಾಡಬೇಕೆಂದು ತಹಸೀಲ್ದಾರ್ ಡಾ.ಅಶೋಕ್ ರಿಗೆ ಸೂಚಿಸಿದರು.
ನಗೆಗಡಲಲ್ಲಿ ತೇಲಿದ ಸಭೆ
ಸಬ್ ರಿಜಿಸ್ಟಾರ್ ಗಿರೀಶ್ ರನ್ನು ಕಂಡ ಶಾಸಕರು, ಏನಪ್ಪ.. ಮೊನ್ನೆ ಬೇರೆ ಮಹಿಳೆ ಸಬ್ ರಿಜಿಸ್ಟಾರ್ ಇದ್ದರಲ್ಲ. ಇವತ್ತು ಮತ್ತೆ ನೀನೇ ಕಾಣಿಸುತ್ತಿದ್ದೀಯಲ್ಲಪ್ಪ ಎಂದು ಕೇಳಿದಾಗ ಅವರಿಗೆ ಕೆ.ಆರ್.ನಗರಕ್ಕೆ ವರ್ಗಾವಣೆಯಾಗಿದೆ ಎಂದು ಸಬ್ ರಿಜಿಸ್ಟಾರ್ ಗಿರೀಶ್ ಹೇಳಿದರು. ಆಯ್ತಪ್ಪ ಕೊಟ್ಟು ಬಂದಿದ್ದಿಯಾ ಇಷ್ಟು ಹೊತ್ತು ಕೂತಿದ್ದೆ ಬೇಗ ಕಚೇರಿಗೆ ಹೋಗು, ಸಿಕ್ಕಷ್ಟು ವಸೂಲಿ ಮಾಡಿಕೊಳ್ಳಪ್ಪ ಬೇಗ ಹೋಗು ಎಂದು ಶಾಸಕರು ಹೇಳುತ್ತಿದ್ದಂತೆ ಸಭೆ ನಗೆಗಡಲಲ್ಲಿ ತೇಲಿತು.
ಸಭೆಯಲ್ಲಿ ನಗರಸಭೆ ಅಧ್ಯಕ್ಷೆ ಸೌರಭ ಸಿದ್ದರಾಜು. ತಾ.ಪಂ.ಆಡಳಿತಾಧಿಕಾರಿ ನಂದ. ತಹಸೀಲ್ದಾರ್ ಡಾ.ಅಶೋಕ್ ಇದ್ದರು.