ರಾಯಚೂರು: ಜಿಲ್ಲೆಯ ಹಲವೆಡೆ ಕುಡಿವ ನೀರಿನ ಟ್ಯಾಂಕ್‌ಗಳ ನಿರ್ಮಾಣ ಕಾಮಗಾರಿ ಬಾಕಿ ಉಳಿದಿದ್ದು, ನಿಗದಿತ ಕಾಲಮಿತಿ ಒಳಗೆ ಮುಗಿಸಿ ಸಂಬಂಧಿಸಿದ ಗ್ರಾಪಂಗಳಿಗೆ ಹಸ್ತಾಂತರಿಸುವಂತೆ ಜಿಪಂ ಅಧ್ಯಕ್ಷೆ ಆದಿಮನಿ ವೀರಲಕ್ಷ್ಮೀ ಸೂಚಿಸಿದರು.
ನಗರದ ಜಿಪಂ ಸಭಾಂಗಣದಲ್ಲಿ ನಡೆದ ಮಾಸಿಕ ಕೆಡಿಪಿ ಸಭೆಯಲ್ಲಿ ಅವರು ಮಾತನಾಡಿದರು. ಸಭೆಗೆ ಸಾಕಷ್ಟು ಅಧಿಕಾರಿಗಳು ಗೈರಾಗಿರುವುದನ್ನುಗಮನಿಸಿದ ಅಧ್ಯಕ್ಷರು, ಸಿಡಿಮಿಡಿಗೊಂಡ ಪ್ರಸಂಗನಡೆಯಿತು. ಗೈರಾದ ಅಧಿಕಾರಿಗಳಿಗೆ ಕಾರಣ ಕೇಳಿ ನೋಟಿಸ್ ಜಾರಿಗೊಳಿಸಿ. ಪ್ರತಿ ಸಭೆಗೆ ಗೈರಾಗುತ್ತಿರುವ ಕೆಆರ್‌ಡಿಐಎಲ್ ಅಧಿ ಕಾರಿಗೆ ಯಾವುದೇ ಕಾಮಗಾರಿನಿರ್ವಹಿಸುವ ಹೊಣೆ ನೀಡಬಾರದು ಮತ್ತು ಅವರ ವೇತನ ಕಡಿತಗೊಳಿಸಿ ಅವರ ವಿರುದ್ಧ ಕ್ರಮಕೈಗೊಳ್ಳಲು ಸರ್ಕಾರಕ್ಕೆ ಪತ್ರ ಬರೆಯಿರಿ. ಈಚೆಗೆ
ನಡೆದ ಜಿಪಂ ಸಾಮಾನ್ಯ ಸಭೆ ಹಾಗೂ ಕೆಡಿಪಿ ಸಭೆಗೆ ಯಾವುದೇ ಅನುಮತಿ ಪಡೆಯದೇ ಗೈರಾಗುತ್ತಿರುವ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಲು ಸರ್ಕಾರಕ್ಕೆ ಪತ್ರ ಬರೆಯುವಂತೆ ಸಿಇಒಗೆ ಸೂಚಿಸಿದರು. ಗ್ರಾಮೀಣ ಭಾಗದ ಜನ ಕುಡಿವ ನೀರಿಲ್ಲದೇ ಪರದಾಡುವ ಸ್ಥಿತಿ ಇದೆ. ಈ ಹಿಂದೆ ಕೈಗೊಂಡ ಸಾಕಷ್ಟು ಕಾಮಗಾರಿಗಳು ಅನಗತ್ಯವಾಗಿ ವಿಳಂಬವಾಗುತ್ತಿವೆ. ಶೀಘ್ರದಲ್ಲೇ ಕಾಮಗಾರಿ ಮುಗಿಸಲು ಗುತ್ತಿಗೆದಾರರಿಗೆ ಪೈಪ್‌ಲೈನ್ ಅಳವಡಿಸಿ ಗ್ರಾಪಂಗೆ ಹಸ್ತಾಂತರಿಸಬೇಕು. ಕಳಪೆ ಕಾಮಗಾರಿ ಮಾಡಿದವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಜರುಗಿಸಬೇಕು ಎಂದರು.
ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಎನ್. ಕೇಶವರೆಡ್ಡಿ ಮಾತನಾಡಿ, ಆತ್ಕೂರು ಗ್ರಾಮದಲ್ಲಿ ಟ್ಯಾಂಕ್ ಕುಸಿದು ಬೀಳುವ ಹಂತಕ್ಕೆ ಬಂದಿದ್ದು, ನೆಲಸಮಗೊಳಿಸಿ ಹೊಸ ಟ್ಯಾಂಕ್ ನಿರ್ಮಿಸಬೇಕು.ಕಳಪೆ ಕಾಮಗಾರಿ ನಿರ್ವಹಿಸಿದ ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸಲಾಗಿದೆ. ಆದರೂ ಮತ್ತೆ ಅವರಿಗೆ ಕಾಮಗಾರಿ ನಿರ್ವಹಿಸಲು ಟೆಂಡರ್ ನೀಡಲಾಗಿದೆ ಎಂದು ದೂರಿದರು.
ಅದಕ್ಕೆ ಪ್ರತಿಕ್ರಿಯಸಿದ ಅಧ್ಯಕ್ಷೆ, ಜಿಲ್ಲೆಯಲ್ಲಿ ಅನೇಕವರ್ಷಗಳ ಹಿಂದೆ ನಿರ್ಮಿಸಿದ ಟ್ಯಾಂಕ್‌ಗಳು ಕುಸಿದುಬೀಳುವ ಹಂತಕ್ಕೆ ತಲುಪಿದ್ದು, ಅಂಥ ಟ್ಯಾಂಕ್‌ಗಳ ಮಾಹಿತಿ ಪಡೆದು ನೆಲಸಮಗೊಳಿಸಿ. ನೂತನ ಟ್ಯಾಂಕ್ ನಿರ್ಮಾಣಕ್ಕೆ ಆಯಾ ಕ್ಷೇತ್ರದ ಸದಸ್ಯರೊಂದಿಗೆ ಚರ್ಚಿಸಿ ಸ್ಥಳ ಗುರುತಿಸಿ ಕಾಮಗಾರಿ ಕೈಗೊಳ್ಳುವಂತೆ ತಿಳಿಸಿದರು.
ಜಲಜೀವನ ಯೋಜನೆಯಡಿ ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿ ಪ್ರತಿಯೊಬ್ಬರ ಮನೆಗೆ ನಳ ಸಂಪರ್ಕ ಕಲ್ಪಿಸಲು ಸರ್ವೆ ಮಾಡಿ ವರದಿ ನೀಡಬೇಕು. ಅರಣ್ಯ ಇಲಾಖೆಯಿಂದ ಜಿಲ್ಲೆಯಲ್ಲಿ ಸರ್ಕಾರಿ ವಸತಿ ನಿಲಯ, ಶಾಲೆ, ತಾಲೂಕು ಆರೋಗ್ಯ ಅಧಿಕಾರಿಗಳ
ಕಚೇರಿ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಕಂಪೌಂಡ್ ಇರುವ ಕಡೆ ಗಿಡಗಳನ್ನು ನೆಡುವಂತೆ ಸೂಚಿಸಿದರು. ಜಿಪಂ ಸ್ಥಾಯಿ ಸಮಿತಿ ಅಧ್ಯಕ್ಷೆ ಶಿವಜ್ಯೋತಿ ಶ್ರೀನಿವಾಸರೆಡ್ಡಿ ಮಾತನಾಡಿ, ಶಾಖವಾದಿ ಗ್ರಾಮದಲ್ಲಿ ಶುದ್ಧ ಕುಡಿವ ನೀರಿನ ಘಟಕವು ದುರಸ್ತಿಯಲ್ಲಿದ್ದು, ಕೂಡಲೇ ದುರಸ್ತಿಗೊಳಿಸಬೇಕು ಎಂದರು. ಜಿಪಂ ಸಿಇಒ ಜಿ.ಲಕ್ಷ್ಮೀಕಾಂತ ರೆಡ್ಡಿ ಜಿ., ಸ್ಥಾಯಿ ಸಮಿತಿ ಅಧ್ಯಕ್ಷ ದುರಗಪ್ಪ ದುರಗಮ್ಮ ಸೇರಿ ಇತರರಿದ್ದರು.