ಚಿಕ್ಕಬಳ್ಳಾಪುರ : ಜಿಲ್ಲೆಯನ್ನು ಶೈಕ್ಷಣಿಕ ಕೇಂದ್ರ ಮಾಡುವ ನಿಟ್ಟಿನಲ್ಲಿ ಅಧಿಕಾರಿಗಳು ಕಾರ್ಯನಿರ್ವಹಿಸಿ ಕಳೆದ ಸಾಲಿನ ಮಾದರಿಯಂತೆ ಈ ಬಾರಿಯೂ ಸಹ ಜಿಲ್ಲೆ ರಾಜ್ಯದಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಪ್ರಥಮ ಸ್ಥಾನ ಗಳಿಸುವಂತಾಗಲು ಶ್ರಮಿಸಬೇಕು ಎಂದು ಜಿಲ್ಲಾ ಪಂಚಾಯತ್ ಅಧ್ಯಕ್ಷ ಎಂ.ಬಿ. ಚಿಕ್ಕನರಸಿಂಹಯ(ಚಿನ್ನಿ) ಶಿಕ್ಷಣಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದಕೆಡಿಪಿ ಮಾಸಿಕ ಸಭೆಯಲ್ಲಿ ಮಾತನಾಡಿದ ಅವರು, ಹಿಂದೆ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶದಲ್ಲಿ ತೋರಿದ ಸಾಧನೆಯನ್ನು ಹಾಗೆಯೇ ಮುಂದು ವರಿಸಿಕೊಂಡು ಹೋದಾಗ ಮಾತ್ರ ಗೌರವ ಉಳಿಯುತ್ತದೆ. ಶತಾಯ ಗತಾಯ ಮತ್ತೆ ಜಿಲ್ಲೆ ಪ್ರಥಮ ಸ್ಥಾನ ಪಡೆಯಬೇಕು. ಇದಕ್ಕ ಪ್ರತಿಯೊಬ್ಬರು ಪರಸ್ಪರ ಸಹಕಾರ ಮನೋಭಾವನೆಯಿಂದ ಕಾರ್ಯನಿರ್ವಹಿಸಬೇಕು. ಹಳೇ ಯೋಜನೆಗಳ ಜತೆಗೆ ಹೊಸ ತಂತ್ರಗಳೊಂದಿಗೆ ಗುರಿ ಸಾಧಿಸಬೇಕು ಎಂದು ತಿಳಿಸಿದರು.
ಹೆಚ್ಚಿನ ಪರಿಶ್ರಮ ವಹಿಸಿ: ಸಾರ್ಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಎಸ್.ಜಿ.ನಾಗೇಶ್‌ಮಾತನಾಡಿ, ಡಿಸೆಂಬರ್15 ರಿಂದ ಎಸ್‌ಎಸ್‌ಎಲ್‌ಸಿ, ದ್ವಿತೀಯ ಪಿಯುಸಿ ಶಾಲೆ ಪ್ರಾರಂಭವಾಗಿ, ನಿರಂತರ ತರಗತಿಗಳು ನಡೆಯಲಿದ್ದು, ಮೇ ನಲ್ಲಿ ಪರೀಕ್ಷೆ ನಡೆಯಲಿದೆ. ಜೂನ್ ಮೊದಲ ವಾರದಲ್ಲಿ ಫಲಿತಾಂಶ ಬರುವ ಸಾಧ್ಯತೆ ಇದೆ. ಬಾಕಿ ಉಳಿದಿರುವ 120 ದಿನಗಳಲ್ಲಿ ಹೆಚ್ಚಿನ ಪರಿಶ್ರಮ ವಹಿಸಿ ಕಾರ್ಯ ನಿರ್ವಹಿಸಲಾಗುವುದು ಎಂದು ತಿಳಿಸಿದರು.
ಫಲಿತಾಂಶ ಸುಧಾರಣೆ ಮೇಲೆ ನಿಗಾ: ಜಿಲ್ಲೆಯಲ್ಲಿ 10ನೇ ತರಗತಿ ಓದುತ್ತಿರುವ ವಿದ್ಯಾರ್ಥಿಗಳನ್ನೊಳ ಗೊಂಡ 283 ಶಾಲೆಗಳ ಪೈಕಿ 110 ಸರ್ಕಾರಿ ಮತ್ತು 45 ಅನುದಾನಿತ ಶಾಲೆ, 128 ಅನುದಾನ ರಹಿñ ಶಾಲೆಗಳಿದ್ದು 15,500 ಮಂದಿ ಎಸ್‌ಎಸ್‌ಎಲ್‌ಸಿಪರೀಕ್ಷೆ ಎದುರಿಸಲಿದ್ದಾರೆ. ಹಿಂದೆ ಜಿಲ್ಲಾ ಮಟ್ಟದ 42 ಅಧಿಕಾರಿಗಳನ್ನೊಳಗೊಂಡ ಕಾರ್ಯಪಡೆಯು ತಲಾ 3 ಶಾಲೆಗಳನ್ನು ದತ್ತು ತೆಗೆದುಕೊಂಡಿದ್ದು, ಫಲಿತಾಂಶದ ಸುಧಾರಣೆ ಮೇಲೆ ನಿಗಾ ವಹಿಸಿದ್ದರು. ಇದರಿಂದ ಉತ್ತಮ ಫಲಿತಾಂಶ ಪಡೆಯಲುಸಾಧ್ಯವಾಯಿತು. ಇದನ್ನು ಗಮನದಲ್ಲಿಟ್ಟುಕೊಂಡು ಆದಷ್ಟು ಬೇಗ ಪ್ರೌಢ ಶಾಲಾ ಮುಖ್ಯ ಶಿಕ್ಷಕರ ಸಭೆ ಕರೆದು ಚರ್ಚಿಸಲಾಗುವುದು ಎಂದರು.
ರೈತರಿಗೆ ನಷ್ಟ: ಜಂಟಿ ಕೃಷಿ ನಿರ್ದೇಶಕಿ ರೂಪಾ ಮಾತನಾಡಿ, ಹಿಂಗಾರು ಅವಧಿಯ ನವೆಂಬರ್ ನಲ್ಲಿ 37 ಮಿ.ಮೀ ವಾಡಿಕೆ ಮಳೆಗೆ ಇಲ್ಲಿಯವರೆಗೂ 24ಮಿ.ಮೀ ಮಳೆಯಾಗಿದ್ದು ರಾಗಿ, ಮುಸುಕಿನ ಜೋಳ, ತೊಗರಿ ಸೇರಿ ಇತರೆ ಬೆಳೆಗಳು ಚೆನ್ನಾಗಿ ಬೆಳೆದಿದ್ದು, ಹೆಚ್ಚಿನ ಮಳೆಗೆ ನೆಲಗಡಲೆ ಬೆಳೆಯಲ್ಲಿ ಕಂಡು ಬಂದ ಜೊಳ್ಳು ಕಾಯಿಗಳಿಂದ ರೈತರಿಗೆ ನಷ್ಟವಾಗಿದೆ ಎಂದು ತಿಳಿಸಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ಪಿ ಶಿವ ಶಂಕರ್, ಮುಖ್ಯ ಯೋಜನಾಧಿಕಾರಿಗಳಾದ ವಿ ಧನುರೇಣುಕಾ, ಸ್ಥಾಯಿ ಸಮಿತಿ ಅಧ್ಯಕ್ಷರುಗಳಾದ ಬಂಕ್ ಮುನಿಯಪ್ಪ ಕೆ.ಸಿ.ರಾಜಾಕಾಂತ್ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
88 ನೀರಿನ ಸಮಸ್ಯಾತ್ಮಕ ಗ್ರಾಮ : ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದಕಾರ್ಯಪಾಲಕ ಅಭಿಯಂತರ ಶಿವಕುಮಾರ್ ಮಾತನಾಡಿ, ಜಿಲ್ಲೆಯಲ್ಲಿಕುಡಿಯುವ ನೀರಿನ ಸಮಸ್ಯಾತ್ಮಕ88 ಗ್ರಾಮಗಳನ್ನು ಗುರುತಿಸಿದ್ದು,12 ಗ್ರಾಮಗಳಿಗೆ ಟ್ಯಾಂಕರ್ ಮತ್ತು76 ಗ್ರಾಮಗಳಿಗೆ ಖಾಸಗಿ ಕೊಳವೆ ಬಾವಿಗಳಿಂದ ನೀರು ಪೂರೈಸಲಾಗುತ್ತಿದೆ. ಕುಡಿಯುವ ನೀರಿನ ಶುದ್ಧೀಕರಣ ಘಟಕಗಳ ಉತ್ತಮ ನಿರ್ವಹಣೆಗೆಕ್ರಮಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ಮಾತೃ ವಂದನಾ ಯೋಜನೆಯಡಿ ಫಲಾನುಭವಿಗಳಿಗೆ ಸವಲತ್ತುಗಳನ್ನು ಸಮರ್ಪಕವಾಗಿ ಒದಗಿಸಲಾಗುತ್ತಿದೆ. ಅಂಗನವಾಡಿ ಕೇಂದ್ರಗಳ ದುರಸ್ತಿ, ಅಪೌಷ್ಠಿಕ ಮಕ್ಕಳ ಸಮಸ್ಯೆ ಪರಿಹಾರಕ್ಕೆ ಆದ್ಯತೆ ನೀಡಲಾಗಿದೆ.
–ನಾರಾಯಣಸ್ವಾಮಿ, ಉಪ ನಿರ್ದೇಶಕ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ