ಜಗಳೂರು: ಅಧಿಕಾರಿಗಳು ಕೋವಿಡ್ ನೆಪ ಹೇಳದೆ ಕಚೇರಿಯಲ್ಲಿದ್ದು ಸಾರ್ವಜನಿಕರ ಕೆಲಸ ಕಾರ್ಯಗಳನ್ನು ಸಮರ್ಪಕವಾಗಿ ಮಾಡಿಕೊಡಬೇಕು ಎಂದು ಮಹರ್ಷಿ ವಾಲ್ಮೀಕಿ ಪರಿಶಿಷ್ಟ ವರ್ಗಗಳ ಅಭಿವೃದ್ಧಿ ನಿಗಮದ ಅಧ್ಯಕ್ಷ ಹಾಗೂ ಶಾಸಕ ಎಸ್.ವಿ. ರಾಮಚಂದ್ರ ಸೂಚಿಸಿದರು.
ಸೋಮವಾರ ಪಟ್ಟಣದ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ನಡೆದ ತ್ತೈಮಾಸಿಕ ಕೆಡಿಪಿ ಸಭೆಯಲ್ಲಿ ಅವರು ಮಾತನಾಡಿದರು. ಕೋವಿಡ್ ಪಾಡಿಗೆ ತಾನಿರುತ್ತದೆ. ಕಚೇರಿಗಳಿಗೆ ಬರುವ ರೈತರನ್ನು ಮತ್ತು ಸಾರ್ವಜನಿಕರನ್ನು ಅಲೆದಾಡಿಸಬಾರದು. ತಾಲೂಕಿಗೆ ಎಷ್ಟು ಗೊಬ್ಬರದ ಬೇಡಿಕೆ ಇದೆ ಎಂಬುದರ ಬಗ್ಗೆ ಮಾಹಿತಿ ನೀಡಿ. ಗೊಬ್ಬರ ಸರಬರಾಜು ವ್ಯವಸ್ಥೆ ಮಾಡಲಾಗವುದು ಎಂದು ಕೃಷಿ ಇಲಾಖೆ ಅಧಿಕಾರಿಗಳಿಗೆ ತಿಳಿಸಿದರು.
ಸಹಾಯಕ ಕೃಷಿ ನಿರ್ದೇಶಕ ಶ್ರೀನಿವಾಸಲು ಮಾತನಾಡಿ, ತಾಲೂಕಿನಲ್ಲಿ 54 ಸಾವಿರ ಹೆಕ್ಟೇರ್ ಬಿತ್ತನೆ ಪ್ರದೇಶವಿದ್ದು, 51 ಸಾವಿರ ಹೆಕ್ಟೇರ್‌ನಲ್ಲಿ ಬಿತ್ತನೆ ಪೂರ್ಣಗೊಂಡಿದೆ. ಈ ಬಾರಿ ವಾಡಿಕೆಗಿಂತ ಹೆಚ್ಚು ಮಳೆಯಾಗಿದ್ದು, ಬೆಳೆಗಳು ನಳ ನಳಿಸುತ್ತಿವೆ. ಕಳೆದ ಕೆಲವು ದಿನಗಳಿಂದ ಮೋಡ ಕವಿದ ವಾತಾವರಣವಿದ್ದು, ಯೂರಿಯಾ ಗೊಬ್ಬರ ಬಳಕೆ ಕಡಿಮೆ ಮಾಡಿ ಎಂದು ರೈತರಲ್ಲಿ ಜಾಗೃತಿ ಮೂಡಿಸುತ್ತಿದ್ದೇವೆ. ತಾಲೂಕಿನಲ್ಲಿ 1020 ಮೆಟ್ರಿಕ್ ಟನ್ ಗೊಬ್ಬರ ವಿತರಿಸಲಾಗಿದ್ದು, ಮತ್ತಷ್ಟು ಗೊಬ್ಬರ ಬರಲಿದೆ ಎಂದರು. ತಾಪಂ ಇಒ ಮಲ್ಲಾ ನಾಯ್ಕ, ತಾಲೂಕು ಆರೋಗ್ಯಾಧಿಕಾರಿ ಪರವಾಗಿ ವರದಿ ಮಂಡಿಸಿದರು.
ತಾಲೂಕಿನಲ್ಲಿ ಇದುವರೆಗೆ 222 ಕೋವಿಡ್ ಪಾಸಿಟಿವ್ ಪ್ರಕರಣಗಳು ವರದಿಯಾಗಿದ್ದು, ಅದರಲ್ಲಿ 194 ಜನರು ಗುಣಮುಖರಾಗಿದ್ದಾರೆ. 71 ಸಕ್ರಿಯ ಪ್ರಕರಣಗಳಿವೆ. ಮುಗ್ಗಿದ ರಾಗಿಹಳ್ಳಿ ಗ್ರಾಮದ ಕೊವಿಡ್ ಸೆಂಟರ್‌ನಲ್ಲಿ 44, ತಾಲೂಕು ಆಸ್ಪತ್ರೆಯಲ್ಲಿ 16, ಜಿಲ್ಲಾಸ್ಪತ್ರೆಯಲ್ಲಿ 14, ಹೋಂ ಕ್ವಾರಂಟೈನ್‌ನಲ್ಲಿ 20 ಜನರು ಇದ್ದಾರೆ. 65 ಕಂಟೈನ್ಮೆಂಟ್ ಝೋನ್‌ಗಳಿದ್ದು, 35 ಡಿ ನೋಟಿಫಿಕೆಷನ್ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.
ಈ ಸಂಧರ್ಭದಲ್ಲಿ ಜಿ.ಪಂ ಸದಸ್ಯರಾದ ಸವಿತಾ, ಎಸ್.ಕೆ. ಮಂಜುನಾಥ್, ಉಮಾ, ಶಾಂತಕುಮಾರಿ, ತಾ.ಪಂ ಸದಸ್ಯರಾದ ಬಸವರಾಜು, ಶಂಕರ್ ನಾಯ್ಕ, ತಹಶಿಲ್ದಾರ್ ನಾಗವೇಣಿ , ಇ .ಓ. ಮಲ್ಲಾನಾಯ್ಕ, ಸಿಪಿಐ ದುರುಗಪ್ಪ ,ಲೋಕೋಪಯೋಗಿ ಇಲಾಖೆಯ ಎಇಇ ರುದ್ರಪ್ಪ ಸೇರಿದಂತೆ ತಾಲೂಕು ಮಟ್ಟದ ಅಧಿಕಾರಿಗಳು ಹಾಜರಿದ್ದರು