ಬಾದಾಮಿ: ಪ್ರಜಾಪ್ರಭುತ್ವದಲ್ಲಿ ಜನರ ಸೇವೆ ಮಾಡಲು ಬಂದಿದ್ದೇವೆ. ನಿಗದಿತ ಸಮಯದಲ್ಲಿ ಬಂದಿರುವ ಅನುದಾನ ಸದ್ಬಳಕೆ ಮಾಡಿ ಜವಾಬ್ದಾರಿಯಿಂದ ಕಾರ್ಯ ನಿರ್ವಹಿಸಬೇಕು. ಅನುಷ್ಟಾನ ಅಧಿಕಾರಿಗಳ ಸಮನ್ವಯತೆ ಬೇಕು ಎಂದು ಮಾಜಿ ಸಿಎಂ, ಶಾಸಕ ಸಿದ್ದರಾಮಯ್ಯ ಹೇಳಿದರು.
ಶನಿವಾರ ಪಟ್ಟಣದ ಹೇಮರಡ್ಡಿ ಮಲ್ಲಮ್ಮ ಸಮುದಾಯ ಭವನದಲ್ಲಿ ಆಯೋಜಿಸಿದ್ದ ತ್ತೈಮಾಸಿಕ ಕೆಡಿಪಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಅಧಿಕಾರಿಗಳು ಸರಕಾರದಿಂದ ಮಂಜೂರಾದ ಅನುದಾನವನ್ನು ಸರಿಯಾಗಿ ಅನುಷ್ಟಾನಗೊಳಿಸಿಲ್ಲ ಎಂಬುದು ಕೆಡಿಪಿ ವರದಿ ಓದಿದಾಗ ತಿಳಿಯಿತು. 2017-18 ಹಾಗೂ 2019ರಿಂದ ಇಲ್ಲಿಯವರೆಗೆ ಸಾಕಷ್ಟು ಕೆಲಸಗಳು ಆಗದೇ ಇರುವ ಸಂಗತಿ ಗಮನಿಸಿ ನನಗೆ ನೋವಾಗಿದೆ. ಅಧಿಕಾರಿಗಳು ಕನಿಷ್ಟ ಜವಾಬ್ದಾರಿ ನಿರ್ವಹಣೆ ಮಾಡಿಲ್ಲ ಎಂದು ಬಿಇಒ ಹಾಗೂ ಜಿಪ ಅಭಿಯಂತರ ಮೇಲೆ ಗರಂ ಆದರು. ಜನರ ತೆರಿಗೆ ಹಣದಲ್ಲಿ ವೇತನ ಪಡೆಯುವ ನೀವು ಪ್ರಾಮಾಣಿಕತೆ ಅಳವಡಿಸಿಕೊಳ್ಳಬೇಕು ಎಂದು ಸೂಚನೆ ನೀಡಿದರು.
ಲಾಯದಗುಂದಿ ಗ್ರಾಮದ ಸರಕಾರಿ ಶಾಲಾ ಒಂದು ಕೊಠಡಿ 5 ವರ್ಷ ಕಳೆದರೂ ಮಾಡಿಲ್ಲ ಎಂದು ಬಿಇಒ ಆರೀಫ್ ಬಿರಾದಾರ ಅವರನ್ನು ತರಾಟೆಗೆ ತೆಗೆದುಕೊಂಡರು. ಜಿಲ್ಲಾಧಿಕಾರಿ ಸುನೀಲಕುಮಾರ ಅವರಿಗೆ ರೈತರಿಗೆ ಬೀಜ ರಸಗೊಬ್ಬರ ವಿತರಣೆ ಸರಿಯಾಗಿ ನಡೆಯಬೇಕು ಎಂದರು.
ಪುರಸಭೆ ಅಧ್ಯಕ್ಷ ಆರ್.ಎಫ್.ಬಾಗವಾನ, ಉಪ ಕಾರ್ಯದರ್ಶಿ ವೈ.ಎನ್.ಬಸರಿಗಿಡದ ಸೇರಿದಂತೆ ತಾಲೂಕುಮಟ್ಟದ ಎಲ್ಲ ಇಲಾಖೆ ಅಧಿಕಾರಿಗಳು ಪಾಲ್ಗೊಂಡಿದ್ದರು.