Advertisement

ಕೆಡಿಪಿ ಸಭೆಯಲ್ಲಿ ಅಧಿಕಾರಿಗಳಿಗೆ ಬಿಸಿ ಮುಟ್ಟಿಸಿದ ಸದಸ್ಯರು

04:42 PM Jun 17, 2020 | Suhan S |

ಗುಳೇದಗುಡ್ಡ: ಸಭೆ ನಡೆಸುವ ಬಗ್ಗೆ ಸರಿಯಾಗಿ ಮಾಹಿತಿ ನೀಡಿಲ್ಲ. ಯಾರಿಗೆ ನೋಟಿಸ್‌ ಕೊಟ್ಟಿದ್ದೀರಿ. ಪೂರ್ವ ತಯಾರಿ ಇಲ್ಲದೇ ಸಭೆ ಆಯೋಜಿಸಿದ್ದೀರಿ ಎಂದು ತಾಪಂ ಅಧಿಕಾರಿಗಳನ್ನು ಜಿಪಂ-ತಾಪಂ ಸದಸ್ಯರು ತರಾಟೆಗೆ ತೆಗೆದುಕೊಂಡ ಘಟನೆ ಮಂಗಳವಾರ ನಡೆಯಿತು.

Advertisement

ಗುಳೇದಗುಡ್ಡ ಪಟ್ಟಣ ತಾಲೂಕಾಗಿ ರಚನೆಯಾದ ನಂತರ ಜಿಪಂ ಉಪಕಾರ್ಯದರ್ಶಿ ಎ.ಜಿ. ತೋಟದ ಅಧ್ಯಕ್ಷತೆಯಲ್ಲಿ ಮೊದಲ ಕೆಡಿಪಿ ಸಭೆಯಲ್ಲಿ ಸದಸ್ಯರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಸದಸ್ಯರ ಕೊರತೆಯಿಂದ ಬೆಳಗ್ಗೆ 10:30ಕ್ಕೆ ಆರಂಭವಾಗಬೇಕಿದ್ದ ಸಭೆ ಮಧ್ಯಾಹ್ನ 1 ಗಂಟೆಗೆ ಆರಂಭವಾಯಿತು. ಈ ಹಿಂದಿನ ಸಭೆಯ ವಿಷಯಗಳ ಬಗ್ಗೆ ತಿಳಿಸಿ ಎಂದು ಜಿಪಂ ಸದಸ್ಯ ನಕ್ಕರಗುಂದಿ ಅವರು ಕೇಳಿದಾಗ ಆ ವಿಷಯಗಳ ಠರಾವು ಈ ಸಭೆಗೆ ತಂದಿಲ್ಲ ಎಂದು ಅಧಿಕಾರಿಗಳು ಉತ್ತರಿಸಿದರು.

ಇದಕ್ಕೆ ಹಿಂದಿನ ಸಭೆಯಲ್ಲಿನ ವಿಷಯಗಳು ಏನು ಆಗಿದೆ? ಎಂಬುದನ್ನು ತಿಳಿದುಕೊಳ್ಳದೇ ಎಲ್ಲವನ್ನು ಹಾಗೇ ಬಿಡೋಣವೇ. ಹಾಗಿದ್ದರೇ ಸಭೆ ಏಕೆ ನಡೆಸಬೇಕು ಎಂದು ಪ್ರಶ್ನಿಸಿದರು. ಕೃಷಿ ಇಲಾಖೆ ಅಧಿಕಾರಿ ಮಾತನಾಡಿ, ಗೊಬ್ಬರ-ಬೀಜದ ಸಮಸ್ಯೆಯಿಲ್ಲ. 2 ವಿತರಣಾ ಕೇಂದ್ರ ತೆರೆದಿದ್ದೇವೆ ಎಂದು ಮಾಹಿತಿ ನೀಡಿದಾಗ, ಎಸ್‌.ಸಿ.,ಎಸ್‌.ಟಿ. ಹಾಗೂ ರೈತರಿಗೆ ನೀಡಬೇಕಾದ ಅಗತ್ಯ ಸೌಲಭ್ಯ ಒದಗಿಸುತ್ತಿಲ್ಲ. ಜನಪ್ರತಿನಿಧಿಗಳಿಗೆ ಅಧಿಕಾರಿಗಳು ಸಮರ್ಪಕ ಮಾಹಿತಿ ನೀಡುತ್ತಿಲ್ಲ ಎಂದು ಜಿಪಂ-ತಾಪಂ ಸದಸ್ಯರು ಅಧಿಕಾರಿಗಳ ವಿರುದ್ಧ ಹರಿಹಾಯ್ದರು. ಅಂಗನವಾಡಿಗಳಲ್ಲಿ ಸಾಕಷ್ಟು ಪ್ರಮಾಣದಲ್ಲಿ ಮಕ್ಕಳಿಗೆ ನೀಡುವ ದಿನಸಿ ಸೋರಿಕೆಯಾಗುತ್ತಿರುವ ಬಗ್ಗೆ ದೂರುಗಳಿದ್ದು, ಈ ಬಗ್ಗೆ ಪರಿಶೀಲಿಸಿ ಕ್ರಮ ಜರುಗಿಸಬೇಕೆಂದು ಶಿಶು ಅಭಿವೃದ್ಧಿ ಇಲಾಖೆ ಅಧಿಕಾರಿ ಅನ್ನಪೂರ್ಣ ಕುಬಕಡ್ಡಿ ಅವರಿಗೆ ಸೂಚಿಸಿದರು.

ಕ್ವಾರಂಟೈನ್‌ನಲ್ಲಿರುವವರಿಗೆ ಸರಿಯಾದ ಊಟದ ವ್ಯವಸ್ಥೆ ಮಾಡಬೇಕು. ಹುಚ್ಚು ನಾಯಿ, ನರಿ ಮನುಷ್ಯರಿಗೆ ಕಚ್ಚಿದರೆ ಅದಕ್ಕೆ ಅಗತ್ಯ ಔಷಧ ಇಲ್ಲ. ಜೀವಕ್ಕೆ ತೊಂದರೆಯಾದರೆ ಯಾರು ಜವಾಬ್ದಾರರು ಎಂದು ಟಿಎಚ್‌ಒ ಎಂ.ಬಿ. ಪಾಟೀಲ ಅವರನ್ನು ಪ್ರಶ್ನಿಸಿದ ಸದಸ್ಯರು, ಹಳ್ಳಿಗಳಲ್ಲಿ ಜನರಿಗೆ ಪ್ರಾಣಿಗಳು ಕಚ್ಚಿದರೆ ಅದಕ್ಕೆ ಅಧಿಕಾರಿಗಳೇ ಖುದ್ದಾಗಿ ಭೇಟಿ ನೀಡಬೇಕೆಂದು ತಾಕೀತು ಮಾಡಿದರು.

ಅರಣ್ಯ, ಸಾರಿಗೆ ಇಲಾಖೆ, ಶಿಶು ಅಭಿವೃದ್ಧಿ ಇಲಾಖೆ, ಪಶು ಸಂಗೋಪಣಾ ಇಲಾಖೆ, ಲೋಕೋಪಯೋಗಿ ಇಲಾಖೆ ಸೇರಿದಂತೆ ತಾಲೂಕಿನ ವಿವಿಧ ಇಲಾಖೆಗಳ ಮಾಹಿತಿ ಪಡೆದರು. ಜಿಪಂ ಉಪಕಾರ್ಯದರ್ಶಿ ಹಾಗೂ ಗುಳೇದಗುಡ್ಡ ತಾಪಂ ಆಡಳಿತಾಧಿಕಾರಿ ತೋಟದ ಅಧ್ಯಕ್ಷತೆ ವಹಿಸಿ, ನೂತನ ತಾಪಂ ಕಟ್ಟಡ ನಿರ್ಮಾಣಕ್ಕೆ ಸೂಕ್ತ ಜಾಗ ಹುಡಕಿ ವರದಿಯನ್ನು ಜಿಪಂಗೆ ಸಲ್ಲಿಸುವಂತೆ ತಾಪಂ ಅಧಿಕಾರಿಗಳಿಗೆ ಸೂಚಿಸಿದರು.

Advertisement

ಜಿಪಂ ಸದಸ್ಯೆ ಸರಸ್ವತಿ ಮೇಟಿ, ಆಸಂಗೆಪ್ಪ ನಕ್ಕರಗುಂದಿ, ತಾಪಂ ಸದಸ್ಯರಾದ ಕನಕಪ್ಪ ಬಂದಕೇರಿ, ಕೈಲಾಸ ಕುಂಬಾರ, ದೇವಿಕಾ ಪಾದನಕಟ್ಟಿ, ರೇಣುಕಾ ಗಾಜಿ, ತಾಪಂ ಇಒ ಡಾ.ಪುನಿತ್‌ ಆರ್‌., ತಹಶೀಲ್ದಾರ್‌ ಜಿ.ಎಂ. ಕುಲಕರ್ಣಿ, ಲೋಕೋಪಯೋಗಿ ಇಲಾಖೆಯ ಶಿವಾನಂದ ಜಾಡರ, ಸಹಕಾರಿ ಇಲಾಖೆಯ ರಮೇಶ ಬೂದಿ, ಕೆ.ಡಿ. ಕರಮಳ್ಳಿ, ಸಂಜಯ ಮಬ್ರುಮಕರ, ಆರ್‌.ಎಂ. ಅರಳಿಮಟ್ಟಿ, ಆರ್‌. ಎಸ್‌. ಮುದಿಗೌಡರ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next