Advertisement

ರೈತರನ್ನು ಸತಾಯಿಸದಿರಿ: ಸುರೇಶ್‌

04:47 PM Dec 01, 2020 | Suhan S |

ತರೀಕೆರೆ: ಬೇಸಿಗೆ ಆರಂಭವಾಗುತ್ತಿದೆ. ಈ ದಿನಗಳಲ್ಲಿ ಕುಡಿಯುವ ನೀರಿನ ಮತ್ತು ವಿದ್ಯುತ್‌ ಪರಿವರ್ತಕಗಳ ಸಮಸ್ಯೆ ಉಂಟಾಗುತ್ತದೆ. ರೈತರ ತೋಟಗಳಿಗೆ ನೀರಿನ ಅಗತ್ಯವಿರುವುದರಿಂದ ಅವರಿಗೆ ಸಮರ್ಪಕ ವಿದ್ಯುತ್‌ ನೀಡಬೇಕು. ವಿದ್ಯುತ್‌ ಪರಿವರ್ತಕಗಳ ಬೇಡಿಕೆ ಹೆಚ್ಚಾಗುತ್ತದೆ. ವಿನಾಕಾರಣ ರೈತರನ್ನು ಅಲೆದಾಡಿಸಬಾರದು. ರೈತರಿಂದ ನಮ್ಮ ಬಳಿ ಯಾವುದೇ ದೂರು ಬರದಂತೆ ನೋಡಿಕೊಳ್ಳಿ, ವಿದ್ಯುತ್‌ ಅನಗತ್ಯ ಅಡಚಣೆಯಾಗದಂತೆ ಕೆಲಸ ನಿರ್ವಹಿಸಿ ಎಂದು ಮೆಸ್ಕಾಂ ಅಧಿಕಾರಿಗಳಿಗೆ ಶಾಸಕ ಡಿ.ಎಸ್‌. ಸುರೇಶ್‌ ಸೂಚನೆ ನೀಡಿದರು.

Advertisement

ತಾಪಂ ಸಭಾಂಗಣದಲ್ಲಿ ನಡೆದ ತ್ತೈಮಾಸಿಕ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಇದಕ್ಕೆ ಉತ್ತರಿಸಿದ ಮೆಸ್ಕಾಂ ಎಇಇ ಅಜಯ್‌, ಲಕ್ಕವಳ್ಳಿ ಎಂಯುಎಸ್‌ಎಸ್‌ನಲ್ಲಿ ಮೇಲ್ದರ್ಜೆಗೆ ಏರಿಸುವ ಕೆಲಸ ನಿರ್ವಹಿಸುತ್ತಿದ್ದು ಇನ್ನೆರಡುದಿನಗಳಲ್ಲಿ ಅದು ಪೂರ್ಣಗೊಳ್ಳಲಿದೆ. ತಾಲೂಕಿನ 13 ಫೀಡರ್‌ಗಳಲ್ಲಿ ನಿರಂತರ ಜ್ಯೋತಿ ವಿದ್ಯುತ್‌ಕಾಮಗಾರಿ ಪೂರ್ಣಗೊಂಡಿದ್ದು 65 ಗ್ರಾಮಗಳಿಗೆ ನಿರಂತರ ವಿದ್ಯುತ್‌ ನೀಡಲಾಗುತ್ತಿದೆ. ಅಜ್ಜಂಪುರ 7 ಫೀಡರ್‌ಗಳಲ್ಲಿ ಕಾಮಗಾರಿ ಪೂರ್ಣಗೊಂಡಿದೆ. ಸರಕಾರಿ ಕಚೇರಿಗಳಿಗೆ ಇರುವ ವಿದ್ಯುತ್‌ ಸಂಪರ್ಕವನ್ನು ಕಡಿತ ಮಾಡುವ ಮುನ್ನ ಸಂಬಂಧಿಸಿದ ಅಧಿಕಾರಿಗಳ ಗಮನಕ್ಕೆ ತಂದು ನಂತರ ವಿದ್ಯುತ್‌ ಸಂಪರ್ಕವನ್ನು ಕಡಿತ ಮಾಡಿ ಎಂದು ಶಾಸಕರು ಸೂಚಿಸಿದರು.

ತಾಲೂಕು ವೈದ್ಯಾಧಿಕಾರಿ ಡಾ| ಚಂದ್ರಶೇಖರ್‌ ಮಾತನಾಡಿ ತಾಲೂಕಿನಲ್ಲಿ 2509 ಕೋವಿಡ್‌ ಪ್ರಕರಣಗಳು ಪತ್ತೆಯಾಗಿತ್ತು. ಇವುಗಳಲ್ಲಿ 39 ಪ್ರಕರಣಗಳು ಸಕ್ರಿಯವಾಗಿವೆ. 14 ಪ್ರಕರಣಗಳಲ್ಲಿ ಸಾವು ಉಂಟಾಗಿದೆ. 2025ರ ವೇಳೆಗೆ ದೇಶದಲ್ಲಿ ಸಂಪೂರ್ಣವಾಗಿ ಕ್ಷಯ ರೋಗ ನಿರ್ಮೂಲನೆಮಾಡುವ ಉದ್ದೇಶದಿಂದ ಡಿ.1 ರಿಂದ 1 ತಿಂಗಳ ಕಾಲ ಕ್ಷಯರೋಗ ಪತ್ತೆ ಮತ್ತು ಚಿಕಿತ್ಸಾ ಆಂದೋಲನ ಹಮ್ಮಿಕೊಳ್ಳಲಾಗಿದೆ ಎಂದರು.

ತಾಪಂ ಅದ್ಯಕ್ಷೆ ಪದ್ಮಾವತಿ ಮಾತನಾಡಿ, ಜಿಲ್ಲೆಯಲ್ಲಿಯೇ ತಾಲೂಕಿನಲ್ಲಿ ಪೌಷ್ಠಿಕಾಂಶ ಕೊರತೆ ಇರುವ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ  ಎಂಬ ವರದಿ ಬಂದಿದೆ. ಸರಕಾರ ಅನೇಕ ರೀತಿಯ ಸವಲತ್ತುಗಳನ್ನು ನೀಡುತ್ತಿದೆ. ಮಕ್ಕಳಲ್ಲಿ, ತಾಯಂದಿರಲ್ಲಿ ಪೌಷ್ಟಿಕಾಂಶ ಕೊರತೆ ಬಾರದಂತೆ ನೋಡಿಕೊಳ್ಳಬೇಕು ಎಂದು ಸಿಡಿಪಿಒ ಜ್ಯೋತಿ ಲಕ್ಷ್ಮೀಗೆ ಸೂಚನೆ ನೀಡಿದರು.

ಮದ್ಯ

Advertisement

ಪ್ರವೇಶಿಸಿ ಮಾತನಾಡಿದ ಡಾ| ಚಂದ್ರಶೇಖರ್‌ ತಾಲೂಕಿನಲ್ಲಿರುವ 7499 ಮಕ್ಕಳಲ್ಲಿ 16 ಮಕ್ಕಳು ವಿಪರೀತ ಕಡಿಮೆ ತೂಕದ ಮಕ್ಕಳು ಇದ್ದಾರೆ.ಪೌಷ್ಟಿಕಾಂಶ ಕೊರತೆ ಇರುವ ಮಕ್ಕಳನ್ನು ಗುರುತಿಸಿ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ ಮತ್ತು ಅರಿವು ಮೂಡಿಸುವ ಕೆಲಸವನ್ನು ನಿರ್ವಹಿಸಲಾಗುತ್ತಿದೆ ಎಂದು ಸಭೆಗೆ ಮಾಹಿತಿ ನೀಡಿದರು.

ಕ್ಷೇತ್ರ ಶಿಕ್ಷಣಾಧಿಕಾರಿ ಹೊನ್ನೇಶ್‌ಕುಮಾರ್‌ ಮಾತನಾಡಿ, ಪ್ರಸ್ತುತ ಸಾಲಿನಲ್ಲಿ 1 ರಿಂದ 9ನೇ  ತರಗತಿಯ ಮಕ್ಕಳಿಗೆ ಶಾಲೆ ಆರಂಭಿಸುವುದಿಲ್ಲ. ಎಸ್‌ಎಸ್‌ಎಲ್‌ಸಿ ಮಕ್ಕಳಿಗೆ ಹೊಸ ವರ್ಷದಿಂದ ಶಾಲೆ ಪ್ರಾರಂಭಿಸಲು ಚರ್ಚೆ ನಡೆಯುತ್ತಿದೆ, ತದನಂತರ ತರಗತಿಗಳನ್ನು ನಡೆಸಿ ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಸಲಾಗುವುದು ಎಂದರು.

ಬಾವಿಕೆರೆ ಗ್ರಾಮದ ಕೋರೆ ಬಳಿ ಇರುವ ಅರಣ್ಯ ಇಲಾಖೆ ಮತ್ತು ಸಾಮಾಜಿಕ ಅರಣ್ಯ ಇಲಾಖೆಯವರು ನರ್ಸರಿ ಮಾಡುತ್ತಿದ್ದಾರೆ. ಅದು ಕಂದಾಯ ಭೂಮಿಯಾಗಿದ್ದು ಅಲ್ಲಿ ಈಗಾಗಲೇ ಮಂಜೂರಾಗಿರುವ ಪಾಲಿಟೆಕ್ನಿಕ್‌ ಕಾಲೇಜಿಗೆ 5 ಎಕರೆ ಭೂಮಿ ಅಗತ್ಯವಿದೆ. ಕೂಡಲೇ ಎರಡೂ ಇಲಾಖೆಯವರು ಜಾಗವನ್ನು ಖಾಲಿ ಮಾಡುವಂತೆ ಅಧಿಕಾರಿಗಳಿಗೆ ಶಾಸಕರು ಆದೇಶಿಸಿದರು.

ಸಭೆಯಲ್ಲಿದ್ದ ತಹಸಿಲ್ದಾರ್‌ ಸಿ.ಜಿ.ಗೀತಾ ಅವರಿಗೆ ಸ್ಥಳ ಪರಿಶೀಲನೆ ನಡೆಸಿ ವರದಿ ನೀಡುವಂತೆ ಸೂಚನೆ ನೀಡಿದರು. 284 ಗ್ರಾಮಗಳಲ್ಲಿ ಕೇವಲ 83 ಗ್ರಾಮಗಳ ಪೋಡಿಯಾಗಿದೆ. ಗ್ರಾಮದ ಪೋಡಿಯಾಗದಿರುವುದರಿಂದ ರೈತರು ದಿನನಿತ್ಯ ಭೂ ಮಾಪನ ಇಲಾಖೆ ಮತ್ತು ಕಂದಾಯ ಇಲಾಖೆಗೆ ಅಲೆದಾಡುವಂತಾಗಿದೆ. ಎರಡು ತಾಲೂಕುಗಳಲ್ಲಿ 5000 ಕ್ಕೂ ಹೆಚ್ಚು ಅರ್ಜಿಗಳು ಇವೆ. ಸರ್ವೆಯರ್‌ಗಳ ಕೊರತೆಯ ಕಾರಣ ಅದರ ವಿಲೇವಾರಿ ನಿಧಾನಗತಿಯಲ್ಲಿ ಸಾಗುತ್ತಿದೆ. ಪೋಡಿ ಅಭಿಯಾನವನ್ನು ಹೊಸವರ್ಷದಿಂದ ಆರಂಭಿಸಲಾಗುವುದು ಎಂದು ಎಡಿಎಲ್‌ಆರ್‌ ಸಂಜಯ್‌ ಸಭೆಗೆ ಮಾಹಿತಿ ನೀಡಿದರು.

ಸಭೆಯಲ್ಲಿ ಜಿಪಂ ಸದಸ್ಯ ಕೆ.ಆರ್‌. ಆನಂದಪ್ಪ, ಉಪಾದ್ಯಕ್ಷೆ ಶಿವಮ್ಮ, ಸ್ಥಾಯಿ ಸಮಿತಿ ಅದ್ಯಕ್ಷ ಹಾಲನಾಯ್ಕ, ಇಒ ಗಣೇಶ್‌ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next