Advertisement

ಇನ್ನು ಗ್ರಾ.ಪಂ. ಮಟ್ಟದಲ್ಲೂ ಕೆಡಿಪಿ ಸಮಿತಿ, ಸಭೆ

09:21 AM Jun 14, 2019 | keerthan |

ಮಂಗಳೂರು: ಗ್ರಾಮ ಪಂಚಾಯತ್‌ ಮಟ್ಟದಲ್ಲಿಯೂ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮ ಪರಿಶೀಲನ ಸಮಿತಿ (ಕೆಡಿಪಿ) ರಚಿಸಿ ಸಭೆ ನಡೆಸಬೇಕು ಎಂಬ ಮಹತ್ವದ ಆದೇಶವನ್ನು ರಾಜ್ಯ ಸರಕಾರ ಹೊರಡಿಸಿದ್ದು, ಗ್ರಾಮಾಭಿವೃದ್ಧಿಯ ವೇಗೋತ್ಕರ್ಷ- ಉತ್ತರದಾಯಿತ್ವದ ನಿಟ್ಟಿನಲ್ಲಿ ಸ್ವಾಗತಾರ್ಹ ನಿರ್ಧಾರ ತಳೆದಿದೆ.

Advertisement

ಪ್ರಸ್ತುತ ಜಿಲ್ಲಾ ಮಟ್ಟದಲ್ಲಿ ಉಸ್ತುವಾರಿ ಸಚಿವರ ಅಧ್ಯಕ್ಷತೆ ಮತ್ತು ತಾಲೂಕು ಮಟ್ಟದಲ್ಲಿ ಶಾಸಕರ ಅಧ್ಯಕ್ಷತೆಯಲ್ಲಿ ಕೆಡಿಪಿ (20 ಅಂಶ ಕಾರ್ಯಕ್ರಮ ಸೇರಿ) ತ್ತೈಮಾಸಿಕ ಪ್ರಗತಿ ಪರಿಶೀಲನ ಸಮಿತಿ ಇದ್ದು, ಮೂರು ತಿಂಗಳಿ ಗೊಮ್ಮೆ ಸಭೆ ನಡೆಸುತ್ತದೆ.

ಇನ್ನು ಮುಂದೆ ಗ್ರಾ.ಪಂ. ಮಟ್ಟಕ್ಕೂ ವಿಸ್ತರಿಸಲಿದೆ. ಸಮಿತಿಯು ಗ್ರಾ.ಪಂ. ಅಧ್ಯಕ್ಷರ ಅಧ್ಯಕ್ಷತೆಯಲ್ಲಿ 3 ತಿಂಗಳಿಗೊಮ್ಮೆ ಆಯಾ ತಿಂಗಳ ಮೊದಲನೇ ವಾರದಲ್ಲಿ ಸಭೆ ಸೇರಲಿದೆ. ಗ್ರಾಮೀಣಾಭಿವೃದ್ಧಿ ಮತ್ತು ಪಂ.ರಾಜ್‌ ಇಲಾಖೆಯಡಿ ಗ್ರಾ.ಪಂ.ಗಳು ಅನುಷ್ಠಾನಗೊಳಿಸುತ್ತಿರುವ ಯೋಜನೆಗಳ ಬಗ್ಗೆ ಪರಿಶೀಲನೆ ನಡೆಯಲಿದೆ.

ಗ್ರಾ.ಪಂ. ಮಟ್ಟದಲ್ಲಿ ಬಡತನ ನಿರ್ಮೂಲನೆ, ಮಕ್ಕಳ ಮತ್ತು ಗರ್ಭಿಣಿಯರ ಆರೋಗ್ಯಕ್ಕಾಗಿ ಪೌಷ್ಠಿಕಾಂಶ ಕಾರ್ಯಕ್ರಮ ಅನುಷ್ಠಾನ, ಮಕ್ಕಳ ಮತ್ತು ಮಹಿಳೆಯರ ಆರೋಗ್ಯ, ಶೈಕ್ಷಣಿಕ ಕಾರ್ಯಕ್ರಮ ಅನುಷ್ಠಾನ ಮತ್ತು ಪಡಿತರ ವಿತರಣೆ, ಶಾಲೆಗಳಲ್ಲಿ ವಿದ್ಯಾರ್ಥಿಗಳ ಹಾಜರಾತಿ ಮತ್ತು ತರಗತಿ ನಿರ್ವಹಣೆ, ಕೃಷಿ, ತೋಟಗಾರಿಕೆ ಮತ್ತಿತರ ಇಲಾಖೆಗಳ ಕಾರ್ಯಚಟುವಟಿಕೆ, ಪ್ರಗತಿ ಪರಿಶೀಲನೆ ಸಭೆಯಲ್ಲಿ ನಡೆಯಲಿದೆ.

ಚರ್ಚಿಸಬಹುದಾದ ವಿಷಯ
ಬೆಳೆ ಸಮೀಕ್ಷೆ, ಬಿತ್ತನೆ ಬೀಜ, ಬೆಳೆ ಪರಿಹಾರ, ಸಬ್ಸಿಡಿ ಆಧಾರದ ಕೃಷಿ ಸಲಕರಣೆ, ಹೊಸ ಬೆಳೆ-ತಳಿಗಳ ಪರಿಚಯ, ಭೂಸಾರ ಆಧಾರಿತ ತೋಟಗಾರಿಕೆ ಬೆಳೆ, ಶಾಲೆಯಿಂದ ಹೊರಗುಳಿದ ಮಕ್ಕಳ ವಿಚಾರ, ಮಕ್ಕಳ ಶೈಕ್ಷಣಿಕ ಗುಣಮಟ್ಟ ಸುಧಾರಣೆ, ಶಾಲೆಯಲ್ಲಿ ಮೂಲ ಸೌಕರ್ಯ, ವಿದ್ಯಾರ್ಥಿ ವೇತನ, ಮಹಿಳೆ-ಮಕ್ಕಳ ದೌರ್ಜನ್ಯ ತಡೆ, ಅಂಗನವಾಡಿ ಕೇಂದ್ರಗಳ ಮೂಲ ಸೌಕರ್ಯ, ಜಾನುವಾರು ಚಿಕಿತ್ಸೆ, ಅರಣ್ಯ ಅಭಿವೃದ್ಧಿ ಕ್ರಮ, ಕೆರೆ ಹೂಳೆತ್ತುವುದು, ಗ್ರಾ.ಪಂ. ಸೇತುವೆ, ನ್ಯಾಯಬೆಲೆ ಅಂಗಡಿ ನಿರ್ವಹಣೆ, ಸಮುದಾಯ ಆರೋಗ್ಯ ಕೇಂದ್ರ ಸುಧಾರಣೆ, ಗುಡಿ ಕೈಗಾರಿಕೆಗಳಿಗೆ ಉತ್ತೇಜನ, ವಸತಿ ಯೋಜನೆಯ ಅನುಷ್ಠಾನ, ಶುದ್ಧ ನೀರು ಪೂರೈಕೆ, ಶೌಚಾಲಯಗಳ ನಿರ್ಮಾಣ, ಆಸ್ತಿ ತೆರಿಗೆ ಸಂಗ್ರಹಣೆ, ವಿಸ್ತರಣೆ, ಪರಿಷ್ಕರಣೆ ಇತ್ಯಾದಿ.

Advertisement

ಜುಲೈಯಿಂದ ಸಮಿತಿ ಕಾರ್ಯಾರಂಭ
ಗ್ರಾ.ಪಂ. ಮಟ್ಟದಲ್ಲಿ ಗ್ರಾ.ಪಂ. ಅಧ್ಯಕ್ಷರ ಅಧ್ಯಕ್ಷತೆಯಲ್ಲಿ ಕೆಡಿಪಿ ಪ್ರಗತಿ ಪರಿಶೀಲನ ಸಮಿತಿಯನ್ನು ರಚಿಸಲು ಸರಕಾರ ತೀರ್ಮಾನಿಸಿದ್ದು, ಮುಂದಿನ ತಿಂಗಳಿನಿಂದ ಜಾರಿಗೆ ಬರಲಿದೆ. ಹೋಬಳಿ ಮತ್ತು ಗ್ರಾ.ಪಂ. ಮಟ್ಟದ ಎಲ್ಲ ಇಲಾಖೆಗಳ ಅಧಿಕಾರಿಗಳು ಇದರಲ್ಲಿ ಇರಲಿದ್ದು, ತ್ತೈಮಾಸಿಕವಾಗಿ ಈ ಸಮಿತಿ ಸಭೆ ಸೇರಲಿದೆ. ಗ್ರಾ.ಪಂ. ಅಧಿಕಾರಿಗಳ ಕಾರ್ಯಕ್ಷಮತೆ ಕುರಿತಾಗಿಯೂ ಸಭೆಯಲ್ಲಿ ಅವಲೋಕನ ನಡೆಯಲಿದೆ.
ಕೆ. ಯಾಲಕ್ಕಿ ಗೌಡ, ನಿರ್ದೇಶಕರು (ಪಂ ರಾಜ್‌-1) ಗ್ರಾಮೀಣಾಭಿವೃದ್ಧಿ ಮತ್ತು ಪಂ.ರಾಜ್‌ ಇಲಾಖೆ

  ದಿನೇಶ್‌ ಇರಾ

Advertisement

Udayavani is now on Telegram. Click here to join our channel and stay updated with the latest news.

Next