ಹೊಸದಿಲ್ಲಿ : 1952ರ ಹೆಲ್ಸಿಂಕಿ ಒಲಿಂಪಿಕ್ಸ್‌ನಲ್ಲಿ ಕುಸ್ತಿಯಲ್ಲಿ ವೈಯಕ್ತಿಕ ಕಂಚಿನ ಪದಕ ಗೆಲ್ಲುವ ಮೂಲಕ ದೇಶಕ್ಕೆ ಮೊತ್ತ ಮೊದಲ ಒಲಿಂಪಿಕ್ಸ್ ಪದಕವನ್ನು ಜಯಿಸಿದ ಐತಿಹಾಸಿಕ ಸಾಧನೆಯನ್ನು ಮಾಡಿದ್ದ ಕೆ ಡಿ ಜಾಧವ್ (ಖಷಾಬಾ ದಾದಾಸಾಹೇಬ್ ಜಾಧವ್) ಅವರ ಕುಟುಂಬದವರು ಇದೀಗ ಮಹಾರಾಷ್ಟ್ರ ಸರಕಾರ ತಾನು ಕೊಟ್ಟಿದ್ದ ಭರವಸೆಯನ್ನು ಈಡೇರಿಸಲು ವಿಫಲವಾಗಿರುವ ಕಾರಣಕ್ಕೆ ಆ ಒಲಿಂಪಿಕ್ಸ್ ಪದಕವನ್ನು ಹರಾಜು ಹಾಕಲು ನಿರ್ಧರಿಸಿದ್ದಾರೆ.
ಕುಸ್ತಿಯಲ್ಲಿ ವೈಯಕ್ತಿಕ ಕಂಚಿನ ಪದಕ ಗೆದ್ದ ಐತಿಹಾಸಿಕ ಸಾಧನೆಯನ್ನು ಮಾಡಿದ್ದ ಕುಸ್ತಿ ಪಟು ಜಾಧವ್ ಅವರು ತಮ್ಮ ಹುಟ್ಟೂರಾದ ಮಹಾರಾಷ್ಟ್ರದ ಸಾತಾರಾದ ಕರಾಡ್ ಉಪ ಜಿಲ್ಲೆಯ ಗೋಲೇಶ್ವರ ಗ್ರಾಮದಲ್ಲಿ ಒಂದು ಕುಸ್ತಿ ಅಕಾಡೆಮಿಯನ್ನು ಸ್ಥಾಪಿಸುವ ಹಂಬಲ ಹೊಂದಿದ್ದರು.
ಜಾಧವ್ ಅವರ ಈ ಕನಸನ್ನು ನನಸುಗೊಳಿಸಲು ಆರ್ಥಿಕವಾಗಿ ತಾನು ನೆರವಾಗುವುದಾಗಿ ಮಹಾರಾಷ್ಟ್ರ ಸರಕಾರ ಭರವಸೆ ನೀಡಿತ್ತು. ಅದಾಗಿ 65 ವರ್ಷಗಳು ಸಂದರೂ ಕುಸ್ತಿ ಅಕಾಡೆಮಿ ಸ್ಥಾಪಿಸುವ ಜಾಧವ್ ಕನಸು ನನಸಾಗಿಲ್ಲ; ಮಹಾರಾಷ್ಟ್ರ ಸರಕಾರ ತನ್ನ ಭರವಸೆಯನ್ನು ಈಡೇರಿಸಿಲ್ಲ.
ಜಾಧವ್ ಅವರು ತಮ್ಮ 58ರ ಹರೆಯದಲ್ಲಿ 1984ರಲ್ಲಿ ನಿಧನ ಹೊಂದಿದರು. 2009ರಲ್ಲಿ ಮಹಾರಾಷ್ಟ್ರದ ಕ್ರೀಡಾ ಸಚಿವಾಲಯ ಜಾಧವ್ ಅವರ ಕನಸಿನ ಕುಸ್ತಿ ಅಕಾಡೆಮಿ ಸ್ಥಾಪನೆಗೆ 1.58 ಕೋಟಿ ರೂ. ಗಳನ್ನು ಬಜೆಟ್‌ನಲ್ಲಿ ಗೊತ್ತುಪಡಿಸಿತ್ತು. ಆದರೆ ಇಂದಿನ ವರೆಗೂ ಅಕಾಡೆಮಿ ಸ್ಥಾಪನೆ ಆಗಿಲ್ಲ; ಈ ಬಗ್ಗೆ ಸರಕಾರಕ್ಕೆ ಎಷ್ಟು ಬಾರಿ ನೆನಪು ಮಾಡಿದರೂ ಪ್ರಯೋಜನವಾಗಿಲ್ಲ ಎಂದು ಜಾಧವ್ ಅವರ ಮಗ ರಂಜಿತ್ ಐಎಎನ್‌ಎಸ್‌ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.
“ನಮ್ಮ ತಂದೆ 33ನೇ ಪುಣ್ಯ ದಿನವಾಗಿರುವ ಆಗಸ್ಟ್ 14ರ ವರೆಗೆ ನಾವು ರಾಜ್ಯ ಸರಕಾರಕ್ಕೆ ಈ ವಿಷಯದಲ್ಲಿ ಗಡುವು ಕೊಟ್ಟಿದ್ದೇವೆ. ಒಂದು ವೇಳೆ ಸರಕಾರ ಅಷ್ಟರೊಳಗೆ ಏನನ್ನೂ ಮಾಡದಿದ್ದರೆ ನಮ್ಮ ಕುಟುಂಬದವರು ಮತ್ತು ಗ್ರಾಮಸ್ಥರು ಆಗಸ್ಟ್ 15ರ ಸ್ವಾತಂತ್ರ್ಯ ದಿನದಿಂದ ಉಪವಾಸ ಸತ್ಯಾಗ್ರಹ ನಡೆಸುತ್ತೇವೆ’ ಎಂದು ರಂಜಿತ್ ಹೇಳಿದ್ದಾರೆ.