Advertisement

ಕೆಸಿಆರ್‌ ಮಹಾಸುದರ್ಶನ ಯಾಗ

09:37 AM Aug 02, 2019 | Team Udayavani |

ಹೈದರಾಬಾದ್‌: ತೆಲಂಗಾಣ ಸಿಎಂ ಕೆ.ಚಂದ್ರಶೇಖರ ರಾವ್‌ ದೈವಭಕ್ತಿ ಇಡೀ ದೇಶಕ್ಕೆ ಚಿರಪರಿಚಿತ. ಸಿಎಂ ಆದಾಗಿನಿಂದಲೂ ಅವರ ದೈವಭಕ್ತಿ ಸಾರ್ವಜನಿಕವಾಗಿ ಪ್ರದರ್ಶನವಾಗುತ್ತಲೇ ಇತ್ತು. ಈ ಬಾರಿ ಕೆಸಿಆರ್‌ ಎಲ್ಲ ಯಾಗಕ್ಕಿಂತಲೂ ಅತಿದೊಡ್ಡ ಹಾಗೂ ಶ್ರೇಷ್ಠ ಎಂದೇ ಕರೆಯಲಾದ ಮಹಾ ಸುದರ್ಶನ ಯಾಗವನ್ನು ನಡೆಸಲು ನಿರ್ಧರಿಸಿದ್ದಾರೆ.

Advertisement

ಈ ಕುರಿತ ಪೂರ್ವ ತಯಾರಿಯ ಬಗ್ಗೆ ತ್ರಿದಂಡಿ ಚಿನ್ನ ಜೀಯಾರ ಸ್ವಾಮೀಜಿ ಜೊತೆಗೆ ಇತ್ತೀಚೆಗೆ ಮಾತುಕತೆಯನ್ನೂ ಕೆಸಿಆರ್‌ ನಡೆಸಿದ್ದಾರೆ. ಆದರೆ ಈ ಯಾಗದ ದಿನಾಂಕ ಇನ್ನೂ ನಿಗದಿಯಾಗಿಲ್ಲ. ಯಡಾದ್ರಿಯಲ್ಲಿನ ಲಕ್ಷ್ಮೀ ನರಸಿಂಹ ದೇಗುಲದ ಸಮೀಪ ಯಾಗ ನಡೆಸಲು ನಿರ್ಧರಿಸಲಾಗಿದೆ.

ಇದಕ್ಕಾಗಿ 1048 ಯಜ್ಞಕುಂಡಗಳನ್ನು ಸ್ಥಾಪಿಸಲಾಗುತ್ತದೆ. ಒಟ್ಟು 100 ಎಕರೆ ಜಾಗದಲ್ಲಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತದೆ. 1 ಸಾವಿರ ವೈದಿಕರು ಹಾಗೂ 3 ಸಾವಿರ ಸಹಾಯಕ ವೈದಿಕರು ಈ ಯಾಗ ನೆರವೇರಿಸಲಿದ್ದಾರೆ. ದೇಶದ ಎಲ್ಲೆಡೆ ಇರುವ ವೈಷ್ಣವ ಪೀಠಾಧಿಪತಿಗಳಿಗೆ ಆಹ್ವಾನ ನೀಡಲಿದ್ದಾರೆ. ಬದರಿನಾಥ, ಶ್ರೀರಂಗಮ್‌, ಜಗನ್ನಾಥ, ತಿರುಪತಿ ಮತ್ತು ಇತರ ಪವಿತ್ರ ಸ್ಥಳಗಳ ಪೀಠಾಧಿಪತಿಗಳು ಈ ಯಜ್ಞಕ್ಕೆ ಆಗಮಿಸಲಿದ್ದಾರೆ.

ಇದರ ಜೊತೆಗೇ ವಿವಿಧ ರಾಜಕೀಯ ಪಕ್ಷಗಳ ನಾಯಕರು, ಕೇಂದ್ರ ಸಚಿವರು, ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳು, ರಾಜ್ಯಪಾಲರು, ದೇಶ ವಿದೇಶದ ಹಿಂದು ಧಾರ್ಮಿಕ ಮುಖಂಡರನ್ನೂ ಆಹ್ವಾನಿಸಲಿದ್ದಾರೆ. ಅವರೆಲ್ಲರ ಜತೆಗೆ ಸಾಮಾನ್ಯ ಜನರಿಗೂ ಯಾಗ ವೀಕ್ಷಣೆಗೆ ಅನುಕೂಲ ಮಾಡಿಕೊಡಲಾಗುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next