Advertisement

ಕೆಸಿಸಿಐ ಸಂಸ್ಥಾಪಕರ ದಿನಾಚರಣೆ; ಐವರಿಗೆ ವಾಣಿಜ್ಯ ರತ್ನ ಪ್ರಶಸ್ತಿ

02:54 PM Jul 31, 2019 | Team Udayavani |

ಹುಬ್ಬಳ್ಳಿ: ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯ 91ನೇ ಸಂಸ್ಥಾಪಕರ ದಿನಾಚರಣೆ ಹಾಗೂ ವಾಣಿಜ್ಯ ರತ್ನ ಪ್ರಶಸ್ತಿ ಪ್ರದಾನ ಆ. 1 ರಂದು ಮಧ್ಯಾಹ್ನ 3:30 ಗಂಟೆಗೆ ಇಲ್ಲಿನ ವಾಣಿಜ್ಯೋದ್ಯಮ ಸಂಸ್ಥೆಯ ಚಂದ್ರವದನ ದೇಸಾಯಿ ಸಭಾಗೃಹದಲ್ಲಿ ನಡೆಯಲಿದೆ.

Advertisement

ಸುದ್ದಿಗೋಷ್ಠಿಯಲ್ಲಿ ಸಂಸ್ಥೆಯ ಅಧ್ಯಕ್ಷ ವಿ.ಪಿ. ಲಿಂಗನಗೌಡರ ಮಾತನಾಡಿ, ಕಾರ್ಯಕ್ರಮದಲ್ಲಿ ಹಾವೇರಿಯ ಹುಕ್ಕೇರಿಮಠದ ಶ್ರೀ ಸದಾಶಿವ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಮೆ| ಸಂಜಯ ಗೋಡಾವತ್‌ ಗ್ರೂಪ್‌ನ ಚೇರ್ಮನ್‌ ಹಾಗೂ ವ್ಯವಸ್ಥಾಪಕ ನಿರ್ದೇಶಕ ಸಂಜಯ ಗೋಡಾವತ್‌ ಆಗಮಿಸುವರು. ಸಂಸ್ಥೆ ಅಧ್ಯಕ್ಷ ವಿ.ಪಿ. ಲಿಂಗನೌಡರ ಅಧ್ಯಕ್ಷತೆ ವಹಿಸುವರು ಎಂದು ತಿಳಿಸಿದರು.

ಉದ್ಯಮಿಗಳಿಗೆ ಪ್ರಶಸ್ತಿ: ಸಂಸ್ಥಾಪನಾ ದಿನಾಚರಣೆ ಪ್ರಯುಕ್ತ ಯಶಸ್ವಿ ಉದ್ದಿಮೆದಾರರನ್ನು ಗುರುತಿಸಿ ವಾಣಿಜ್ಯ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದ್ದು, ಎಲ್ಲ ಪ್ರದೇಶಗಳಿಗೆ ಪ್ರಾತಿನಿಧ್ಯ ನೀಡುವ ಉದ್ದೇಶದಿಂದ ಹುಬ್ಬಳ್ಳಿಯ ಮೆ| ಮೈಕ್ರೋಫಿನಿಷ್‌ ಗ್ರೂಪ್‌ ಆಫ್‌ ಕಂಪನೀಸ್‌ ಚೇರ್ಮನ್‌ ತಿಲಕ ವಿಕಮಶಿ, ಲಕ್ಷ್ಮೇಶ್ವರದ ಮೆ| ಮಹಾವೀರ ಕುಮಾರ ಅಶೋಕಕುಮಾರ ಜಿನ್ನಂಗ್‌ ಆ್ಯಂಡ್‌ ಪ್ರಸ್ಸಿಂಗ್‌ ಫ್ಯಾಕ್ಟರಿಯ ಸಂಸ್ಥಾಪಕ ಓಂ ಪ್ರಕಾಶ ಜೈನ್‌, ಹುಬ್ಬಳ್ಳಿಯ ಮೆ| ಕೆನ್‌ ಅಗ್ರಿಟೆಕ್‌ ಪ್ರೈವೇಟ್ ಲಿಮಿಟೆಡ್‌ ಸಂಸ್ಥಾಪಕ ವಿವೇಕ ನಾಯಕ, ಮೆ| ದಾಸನೂರ ಅಗ್ರೋ ಇಂಡಿಸ್ಟ್ರೀಸ್‌ ಸಂಸ್ಥಾಪಕ ಪ್ರಕಾಶ ದಾಸನೂರ, ಕಾರವಾರದ ಮೆ.ಗೋವಿಂದರಾವ್‌ ಮಾಂಜ್ರೇಕರ್‌ ಕಂಪನಿಯ ಸತೀಶ ಮಾಂಜ್ರೇಕರ ಅವರಿಗೆ ವಾಣಿಜ್ಯ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ.

ಯುವ ಉದ್ಯಮಗಳಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಇಬ್ಬರು ಯುವ ಉದ್ಯಮಿಗಳಿಗೆ ಸನ್ಮಾನ ಮಾಡಲಾಗುತ್ತಿದ್ದು, ಹುಬ್ಬಳ್ಳಿಯ ಮೆ| ಪಾಟೀಲ ಎಲೆಕ್ಟ್ರಿಕ್‌ ವಕ್ಸರ್ ಪ್ರೈ.ಲಿಮಿಟೆಡ್‌ನ‌ ಪ್ರಸಾದ ಪಾಟೀಲ ಹಾಗೂ ಬೆಳಗಾವಿಯ ಮೆ| ನಿರ್ನಲ್ ವಾಟರ್‌ ಫಿಲ್ಟರ್ನ ನಿರಂಜನ ಕಾರ್ಗಿ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ವಿ.ಪಿ.ಲಿಂಗನಗೌಡರ ತಿಳಿಸಿದರು.

ಸುದ್ದಿಗೊಷ್ಠಿಯಲ್ಲಿ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮ ಸಮಿತಿ ಚೇರ್ಮನ್‌ ಸುಭಾಸ ಬಾಗಲಕೋಟೆ, ಸಂಸ್ಥೆಯ ಉಪಾಧ್ಯಕ್ಷರಾದ ಮಹೇಂದ್ರ ಲದ್ದಡ, ಅಶೋಕ ತೋಳನವರ, ಗೌರವ ಕಾರ್ಯದರ್ಶಿ ವಿನಯ ಜವಳಿ, ಜೊತೆ ಗೌರವ ಕಾರ್ಯದರ್ಶಿ ಅಶೋಕ ಗಡಾದ, ಅಚ್ಯುತ ಲಿಮೆ ಹಾಗೂ ಅಂದಾನಪ್ಪ ಸಜ್ಜನರ ಇದ್ದರು.

ಶಾಶ್ವತ ವಸ್ತು ಪ್ರದರ್ಶನ ಮೈದಾನಕ್ಕೆ ಮೂಲಸೌಲಭ್ಯ ಕೊರತೆ

ಎಪಿಎಂಸಿ ಆವರಣದಲ್ಲಿ ನಿರ್ಮಿಸಿರುವ ಶಾಶ್ವತ ವಸ್ತು ಪ್ರದರ್ಶನ ಮೈದಾನದಲ್ಲಿ ಮೂಲಸೌಲಭ್ಯಗಳ ಕೊರತೆಯಿರುವ ಪರಿಣಾಮ ಬಳಕೆ ಅಸಾಧ್ಯವಾಗಿದೆ. ಮೇಲ್ದರ್ಜೆಗೇರಿಸುವುದು ಹಾಗೂ ಕೆಲಸ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ 2.97 ಕೋಟಿ ರೂ. ಯೋಜನೆ ಸಿದ್ಧಪಡಿಸಲಾಗಿದೆ. ಈ ಕುರಿತು ಹಲವು ಬಾರಿ ಸರಕಾರದ ಹಂತದಲ್ಲಿ ಅಧಿಕಾರಿಗಳನ್ನು ಸಂಪರ್ಕಿಸಿ ಮನವಿ ಸಲ್ಲಿಸಿದರೂ ಸಾಧ್ಯವಾಗಿಲ್ಲ. ಪ್ರತಿಯೊಂದು ಕಾರ್ಯಕ್ಕೆ ಜಿಲ್ಲಾಧಿಕಾರಿ ಅನುಮತಿ ಬೇಕಾಗಿರುವುದರಿಂದ ಜಿಲ್ಲಾಧಿಕಾರಿಗಳು ಈ ಕುರಿತು ಕಾಳಜಿ ತೋರಬೇಕಾಗಿದೆ. ಹಿಂದಿನಿಂದಲೂ ಸರಕಾರಗಳು ಉತ್ತರ ಕರ್ನಾಟಕವನ್ನು ನಿರ್ಲಕ್ಷ್ಯ ಮಾಡಿದ್ದರ ಪರಿಣಾಮ ದೊಡ್ಡ ಕಂಪನಿಗಳು, ಯೋಜನೆಗಳು ಈ ಭಾಗದಲ್ಲಿ ಅನುಷ್ಠಾನವಾಗುತ್ತಿಲ್ಲ. ಈ ಭಾಗದ ಜನಪ್ರತಿನಿಧಿಗಳಲ್ಲಿನ ಇಚ್ಛಾಶಕ್ತಿ ಕೊರತೆ ಇದಕ್ಕೆ ಕಾರಣ ಎಂದು ಸಂಸ್ಥೆ ಪದಾಧಿಕಾರಿಗಳು ದೂರಿದರು.
Advertisement
Advertisement

Udayavani is now on Telegram. Click here to join our channel and stay updated with the latest news.

Next