Advertisement

ಜಿಲ್ಲೆಗೆ ಕೆ.ಸಿ.ವ್ಯಾಲಿ ಯೋಜನೆ ವರದಾನ

09:46 AM May 22, 2019 | Team Udayavani |

ಕೋಲಾರ: ಕುಡಿಯುವ ನೀರಿನ ಸಮಸ್ಯೆಯಿರುವ ಗ್ರಾಮಗಳಲ್ಲಿ ಖಾಸಗಿ ಕೊಳವೆ ಬಾವಿಗಳನ್ನು ರೈತರಿಂದ ಬಾಡಿಗೆಗೆ ಪಡೆದು ನೀರು ಪೂರೈಸಲಾಗುವುದು. ಒಂದು ವೇಳೆ ಮಾಲಿಕರು ನೀರು ಕೊಡಲು ಒಪ್ಪದಿದ್ದರೆ ಸಂಪೂರ್ಣ ಸುಪರ್ದಿಗೆ ಪಡೆಯಲಾಗುವುದು ಎಂದು ಜಿಲ್ಲಾಧಿಕಾರಿ ಜೆ.ಮಂಜುನಾಥ್‌ ತಿಳಿಸಿದರು.

Advertisement

ತಮ್ಮ ಕಚೇರಿಯ ನ್ಯಾಯಾಂಗ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಬರ ನಿರ್ವಹಣೆ ಕುರಿತ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ, ಈಗಾಗಲೇ 178 ಟ್ಯಾಂಕರ್‌ಗಳ ಮೂಲಕ ಪೂರೈಕೆ ಮಾಡುತ್ತಿರುವ ಗ್ರಾಮಗಳಿಗೂ ಖಾಸಗಿ ಕೊಳವೆ ಬಾವಿಗಳ ನೀರನ್ನು ಪಡೆದುಕೊಳ್ಳಲು ಅಧಿಕಾರಿಗಳು ಪ್ರಥಮ ಆದ್ಯತೆ ನೀಡುವಂತೆ ತಿಳಿಸಿದರು.

ಈಗಾಗಲೇ ಪಾವತಿಯಾಗಿರುವ ಟ್ಯಾಂಕರ್‌ ಮತ್ತು ಖಾಸಗಿ ಕೊಳವೆ ಬಾವಿಗಳ ಬಿಲ್ಲುಗಳ ವರದಿಯನ್ನು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳಿಗೆ ಸಲ್ಲಿಸಲಾಗುವುದು. ಟ್ಯಾಂಕರ್‌ ಬಿಲ್ಲುಗಳನ್ನು 15 ದಿನಕ್ಕೊಮ್ಮೆ, ಖಾಸಗಿ ಕೊಳವೆಬಾವಿಗಳ ಬಿಲ್ಲನ್ನು ಪ್ರತಿ ತಿಂಗಳು ತಪ್ಪದೇ ನೀಡಿ. ಬಿಲ್ಲುಗಳೊಂದಿಗೆ ನೀರು ಸರಬರಾಜು ಮಾಡಲು ನೀಡಿರುವ ಅನುಮತಿ ಪತ್ರವನ್ನು ಕಡ್ಡಾಯವಾಗಿ ಲಗತ್ತಿಸಬೇಕು. ಬಿಲ್ಲುಗಳ ಆಡಿಟ್‌ಗೆ ಗ್ರಾಮೀಣ ಕುಡಿಯುವ ನೀರಿನ ಇಲಾಖೆ ಅಧಿಕಾರಿಗಳು ಹಾಗೂ ಕಾರ್ಯನಿರ್ವಾಹಕ ಅಧಿಕಾರಿಗಳು ದಾಖಲೆಗಳನ್ನು ಸರಿಯಾದ ಸಮಯಕ್ಕೆ ಸಲ್ಲಿಸಿ ಎಂದು ತಿಳಿಸಿದರು.

ಹಳೇ ಪಂಪ್‌ಸೆಟ್ ಬಳಸಿಕೊಳ್ಳಿ: ಜಿಪಂ ಉಪಕಾರ್ಯದರ್ಶಿ ಲಕ್ಷ್ಮಿನಾರಾಯಣ್‌ ಮಾತನಾಡಿ, ಈಗಾಗಲೇ ಇರುವ ಸಮಸ್ಯಾತ್ಮಕ ಗ್ರಾಮಗಳಲ್ಲದೇ, ಇನ್ನು ಮುಂದೆ ಕಂಡುಬರುವ ಸಮಸ್ಯಾತ್ಮಕ ಗ್ರಾಮಗಳ ಪಟ್ಟಿ ತಯಾರಿಸಿಕೊಂಡು ನೀರು ಪೂರೈಕೆಗೆ ಕೈಗೊಳ್ಳಬಹುದಾದ ಕ್ರಮಗಳ ಕುರಿತು ಪಟ್ಟಿ ಮಾಡಿಕೊಳ್ಳಿ. ಹೊಸದಾಗಿ ಕೊರೆಸುವ ಕೊಳವೆ ಬಾವಿಗಳಿಗೆ ಬಾಕಿ ಉಳಿದಿರುವ ಹಳೆಯ ಪಂಪು ಮೋಟಾರುಗಳನ್ನು ಬಳಕೆ ಮಾಡಿಕೊಳ್ಳಿ ಎಂದು ತಿಳಿಸಿದರು.

ಜಲಾಮೃತ ವರ್ಷ: 14ನೇ ಹಣಕಾಸು ಅನುದಾನದಲ್ಲಿ ಕುಡಿಯುವ ನೀರಿನ ಸರಬರಾಜಿಗೆ ಆದ್ಯತೆ ನೀಡಿ ಹೆಚ್ಚಿನ ಅನುದಾನ ಬಳಕೆ ಮಾಡಿಕೊಳ್ಳಲು ಗ್ರಾಮ ಪಂಚಾಯತ್‌ಗಳಿಗೆ ಅವಕಾಶ ಕಲ್ಪಿಸಲಾಗಿದೆ. ಈ ವರ್ಷವನ್ನು ಜಲಾಮೃತ ವರ್ಷವೆಂದು ಘೋಷಣೆ ಮಾಡಿದ್ದು, ನರೇಗಾ ಯೋಜನೆಯಲ್ಲಿ ನೀರಿನ ಸಂಗ್ರಹಣೆ ಮಾಡುವ ಕಾಮಗಾರಿಗಳನ್ನು ನಿರ್ಮಿಸಲು ಆದ್ಯತೆ ನೀಡಲಾಗುತ್ತಿದೆ. ಈ ವರ್ಷ 50 ಲಕ್ಷ ಮಾನವ ದಿನಗಳ ಗುರಿಯಿದ್ದು, ಈಗಾಗಲೇ 5.12 ಲಕ್ಷ ಮಾನವ ದಿನಗಳನ್ನು ಸೃಜಿಸಲಾಗಿದೆ. ಜಿಲ್ಲೆಯಿಂದ ಯಾರೂ ಕೆಲಸ ಇಲ್ಲ ಎಂದು ಗುಳೆ ಹೋಗದಂತೆ ನೋಡಿಕೊಳ್ಳಲಾಗುವುದು ಎಂದು ತಿಳಿಸಿದರು.

Advertisement

ಕೋಲಾರವು ಬರ ಪೀಡಿತ ಜಿಲ್ಲೆಯಾಗಿದ್ದು, ನೀರಿನ ಸಂಪನ್ಮೂಲಗಳ ಕೊರತೆ ಇದ್ದು, ನೀರಿನ ಮರುಪೂರಣ ಮಾಡುವ ಕೆ.ಸಿ. ವ್ಯಾಲಿ ಯೋಜನೆಯು ಜಿಲ್ಲೆಗೆ ವರದಾನವಾಗಿದೆ ಎಂದು ಜಿಲ್ಲಾಧಿಕಾರಿ ಜೆ.ಮಂಜುನಾಥ್‌ ತಿಳಿಸಿದರು.

ಕೋಲಾರ ಜಿಲ್ಲೆಯ ಅಂತರ್ಜಲ ಮಟ್ಟ 1500 ಅಡಿಯಾಳಕ್ಕೆ ಕುಸಿದಿದ್ದು, ಕೆ.ಸಿ. ವ್ಯಾಲಿ ನೀರಿನಿಂದ ಅಂತರ್ಜಲ ಮಟ್ಟ ಉತ್ತಮಗೊಳ್ಳಲಿದೆ. ಜಿಲ್ಲೆಯ 126 ಕೆರೆಗಳಿಗೆ ಕೆ.ಸಿ.ವ್ಯಾಲಿ ನೀರು ಹರಿಯಲಿದ್ದು, ಇದರಿಂದ ಕೊಳವೆಬಾವಿಗಳಲ್ಲಿ ಉತ್ತಮವಾಗಿ ನೀರು ಸಿಗುವಂತಾಗುತ್ತದೆ. ಇದರಿಂದ ಜಿಲ್ಲೆಯಲ್ಲಿ ಕೃಷಿಕರ ಬದುಕು ಹಸನಾಗಲಿದೆ ಎಂದು ತಿಳಿಸಿದರು.

ಕೆ.ಸಿ.ವ್ಯಾಲಿ ನೀರು ಉತ್ತಮ ಗುಣಮಟ್ಟದಿಂದ ಕೂಡಿದ್ದು, ಪ್ರತಿನಿತ್ಯ ಇದರ ಸ್ಯಾಂಪಲ್ ತೆಗೆದು 5 ಪ್ಯಾರಾಮೀಟರ್‌ ಅನ್ನು ಸ್ಥಳದಲ್ಲಿಯೇ ಪರೀಕ್ಷಿಸುವರು. ತಿಂಗಳಿಗೆ ಕನಿಷ್ಠ 33 ಪ್ಯಾರಾಮೀಟರ್‌ ಪರೀಕ್ಷಿಸಲಾಗುವುದು. ಆದ್ದರಿಂದ ಜನರು ಯಾವುದೇ ಗೊಂದಲಗಳಿಗೆ ಒಳಗಾಗಬಾರದು. ಈಗಾಗಲೇ 14 ಕೆರೆಗಳು ತುಂಬಿವೆ. ಪ್ರತಿ ಕೆರೆಗೂ ಶೇ.60 ರಿಂದ 70 ರಷ್ಟು ನೀರನ್ನು ತುಂಬಿಸಲಾಗುವುದು. ಎಲ್ಲಾ ಕೆರೆಗಳು ತುಂಬಿದ ನಂತರ ಶೇ. 100 ನೀರನ್ನು ಕೆರೆಗಳಲ್ಲಿ ಸಂಗ್ರಹಿಸಲಾಗುವುದು ಎಂದು ತಿಳಿಸಿದರು. ಕೆ.ಸಿ.ವ್ಯಾಲಿ ನೀರು ಹರಿಯುವ ಎಲ್ಲಾ ರಾಜಕಾಲುವೆಗಳನ್ನು ತೆರವುಗೊಳಿಸಿ ಶುಚಿಗೊಳಿಸಲಾಗುತ್ತಿದೆ. ನರಸಾಪುರ ಕೆರೆಯಲ್ಲಿ ಬೆಳೆದಿರುವ ಕಳೆಯನ್ನು ತೆಗೆಸಲಾಗುತ್ತಿದೆ.

ಪ್ರತಿನಿತ್ಯ 250 ಎಂ.ಎಲ್.ಡಿ ನೀರು ಪಂಪಾಗುತ್ತಿದೆ. ಜಿಲ್ಲೆಯ ಎಲ್ಲಾ ಕೆರೆಗಳು ತುಂಬುವÊ‌ರೆಗೆ ಕೆರೆ ನೀರನ್ನು ಪಂಪು ಮೋಟಾರುಗಳನ್ನು ಬಳಸಿ ವ್ಯವಸಾಯಕ್ಕೆ ಬಳಸುವುದನ್ನು ನಿಷೇಧಿಸಲಾಗಿದೆ ಎಂದು ತಿಳಿಸಿದರು.

ಸಭೆಯಲ್ಲಿ ಬರ ನಿರ್ವಹಣೆಯ ನೋಡಲ್ ಅಧಿಕಾರಿಗಳು, ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next