ಮುಳಬಾಗಿಲು: ಕೆ.ಸಿ.ವ್ಯಾಲಿ ನೀರನ್ನು ನಗರದಂಚಿನ ಯರಕಲಕುಂಟೆ ಮತ್ತು ಗೋಪನ್ನ ಕೆರೆಗೆ ಹರಿಸಲಾಗುತ್ತದೆ. ಹೀಗಾಗಿ ಕೂಡಲೇ ಸ್ವಚ್ಛಗೊಳಿಸಿ ಎಂದು ಜಿಲ್ಲಾಧಿಕಾರಿ ಜೆ.ಮಂಜುನಾಥ್ ಪಿಡಿಒ ರೂಪಾಗೆ ಸೂಚಿಸಿದರು.
ತಾಲೂಕಿನ ಕುರುಡುಮಲೆ ಗ್ರಾಪಂ ವ್ಯಾಪ್ತಿಯ ಕದರೀಪುರ ಗ್ರಾಮದ ಎಸ್‌ಸಿ ಕಾಲೋನಿಯಲ್ಲಿ ನಡೆದ ಕುಂದುಕೊರತೆ ಸಭೆಯಲ್ಲಿ ಮಾತನಾಡಿ, ರೈತ ಕೃಷ್ಣಪ್ಪ ಅವರ ಕೊಳವೆ ಬಾವಿಯಿಂದ ನೀರು ಪೂರೈಕೆ ಮಾಡಿ, ಅವರಿಗೆ ಮಾಸಿಕ 18 ಸಾವಿರ ರೂ. ನೀಡಲು ಅಗತ್ಯ ಕ್ರಮ ಕೈಗೊಳ್ಳಲು ಸೂಚಿಸಿದ ಅವರು, ಗ್ರಾಮಗಳಲ್ಲಿ ನೀರಿನ ಸಮಸ್ಯೆ ಉಂಟಾದರೆ ಪ್ರತಿ ಟ್ಯಾಂಕರ್‌ಗೆ 500 ರೂ.ನಂತೆ ಪೂರೈಕೆ ಮಾಡಬೇಕು. ವೃದ್ಧಾಪ್ಯ ವೇತನ ಸಮಸ್ಯೆ ನಿವಾರಣೆಗೆ ಹಳ್ಳಿಗಳಲ್ಲಿಯೇ ಕಂದಾಯ ಅದಾಲತ್ ಮಾಡಲಾಗುವುದು ಎಂದು ಹೇಳಿದರು.
ಹೂಳು ತೆಗೆಯಿರಿ: ಉತ್ತನೂರು ಗ್ರಾಪಂ ವ್ಯಾಪ್ತಿಯ ಕೆ.ಜಿ.ಲಕ್ಷ್ಮೀಸಾಗರ ಗ್ರಾಮದಲ್ಲಿ ಸಾರ್ವಜನಿಕರ ಕುಂದುಕೊರತೆ ಸಭೆ ನಡೆಸಿದ ಜಿಲ್ಲಾಧಿಕಾರಿ ಮಂಜುನಾಥ್, ನರೇಗಾ, ಕುಡಿಯುವ ನೀರು, ಮತ್ತಿತರ ಸಮಸ್ಯೆಗಳ ಕುರಿತು ಚರ್ಚಿಸಿದರು. ತಾಲೂಕಿನಲ್ಲಿ ಬರ ಇರುವುದರಿಂದ ಜನರಿಗೆ ಕೆಲಸ ಸಿಗಲು ಗ್ರಾಮದ ಕೆರೆಯಲ್ಲಿ ಹೂಳು ತೆಗೆಯುವ ಕೆಲಸ ಕೈಗೊಳ್ಳಿ ಎಂದು ಜಿಪಂ ಸಿಇಒ ಜಿ.ಜಗದೀಶ್‌ಗೆ ಸೂಚಿಸಿದರು.
ಕೊಳವೆ ಬಾವಿ ಕೊರೆಯಿಸಿ: ಮುಖ್ಯರಸ್ತೆಗೆ 2 ಕಿ.ಮೀ. ದೂರವಿರುವುದರಿಂದ ಗ್ರಾಮಕ್ಕೆ ಪ್ರತಿನಿತ್ಯ ಮುಂಜಾನೆ 9 ಮತ್ತು ಮಧ್ಯಾಹ್ನ 2 ಗಂಟೆಗೆ ಬಸ್ ಸಂಚಾರ ವ್ಯವಸ್ಥೆ ಕಲ್ಪಿಸಬೇಕೆಂದು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದರು. ಅದಕ್ಕೆ ಸ್ಪಂದಿಸಿದ ಜಿಲ್ಲಾಧಿಕಾರಿ ಕ್ರಮಕೈಗೊಳ್ಳುವಂತೆ ಕೆಎಸ್‌ಆರ್‌ಟಿಸಿ ಅಧಿಕಾರಿಗಳಿಗೆ ಸೂಚಿಸಿದರು. ಗ್ರಾಮದಲ್ಲಿ ಈಗಾಗಲೇ ಎರಡು ಕೊಳವೆಬಾವಿ ಕೊರೆಸಿದ್ದರೂ ನೀರು ಸಿಗದ ಕಾರಣ ಇತ್ತೀಚಿನ ದಿನಗಳಲ್ಲಿ ಖಾಸಗಿ ಕೊಳವೆ ಬಾವಿಯಿಂದ ನೀರಿನ ವ್ಯವಸ್ಥೆ ಮಾಡಲಾಗಿತ್ತು. ಅದನ್ನು ಪರಿಶೀಲಿಸಿದ ಅವರು, ತುರ್ತಾಗಿ ಮತ್ತೂಂದು ಕೊಳವೆಬಾವಿ ಕೊರೆಸಲು ಸೂಚಿಸಿದರು.
ತಹಶೀಲ್ದಾರ್‌ಗೆ ಸೂಚನೆ: ಅಲ್ಲದೇ, ಗ್ರಾಮದ 20 ಜಮೀನಿಗೆ ತೆರಳಲು ನಕಾಶೆಯಲ್ಲಿ ದಾರಿಯಿದ್ದರೂ ಈ ರಸ್ತೆಯನ್ನು ಕೆಲವರು ಮುಚ್ಚಿದ್ದಾರೆ. ರಸ್ತೆಯನ್ನು ಸರಿಪಡಿಸಿ ಜನರ ಮುಕ್ತ ಓಡಾಟಕ್ಕೆ ಅನುಕೂಲ ಕಲ್ಪಿಸಬೇಕು ಎಂದು ಮನವಿ ಮಾಡಿದರು. ಅದಕ್ಕೆ ಸ್ಪಂದಿಸಿದ ಜಿಲ್ಲಾಧಿಕಾರಿ ಶೀಘ್ರ ಸರ್ವೇ ಮಾಡಿಸಿ ರಸ್ತೆ ಸೌಲಭ್ಯ ಕಲ್ಪಿಸಲು ತಹಶೀಲ್ದಾರ್ ಬಿ.ಎನ್.ಪ್ರವೀಣ್‌ಗೆ ಸೂಚಿಸಿದರು. ತಹಶೀಲ್ದಾರ್ ಬಿ.ಎನ್.ಪ್ರವೀಣ್, ತಾಪಂ ಇಒ ಡಾ.ಕೆ.ಸರ್ವೇಶ್, ಜಿಪಂ ಸದಸ್ಯ ಅರವಿಂದ್‌ಕುಮಾರ್, ಉತ್ತನೂರು ಪಿಡಿಒ ಕೃಷ್ಣಪ್ಪ, ಉತ್ತನೂರು ಶ್ರೀನಿವಾಸ್, ತಾಪಂ ಮಾಜಿ ಉಪಾಧ್ಯಕ್ಷ ರಾಜಪ್ಪ, ಗ್ರಾಮದ ಮುಖಂಡ ಕೆ.ಆರ್.ಮಂಜುನಾಥ್, ಯುವ ಮುಖಂಡ ಸುಬ್ರಮಣಿ ಇತರರಿದ್ದರು.