ಮಾಲೂರು: ತಾಲೂಕಿನ ಕೆರೆಗಳಿಗೆ ಕೆ.ಸಿ.ವ್ಯಾಲಿ ನೀರು ಹರಿಸದಿದ್ದಲ್ಲಿ ರಾಜೀನಾಮೆಗೆ ಸಿದ್ಧ ಎಂದಿದ್ದ ಕ್ಷೇತ್ರದ ಶಾಸಕ ಕೆ.ವೈ.ನಂಜೇಗೌಡ ಮಾತಿಗೆ ಮಣಿದ ರಾಜ್ಯ ಸರ್ಕಾರ, ನೀರು ಹರಿಸುವ ಕಾರ್ಯಕ್ಕೆ ಅನುಮತಿ ನೀಡಿದ್ದು, ಸೋಮವಾರ ವಿದ್ಯುಕ್ತವಾಗಿ ಚಾಲನೆ ನೀಡಲಾಯಿತು.
ತಾಲೂಕಿನ ನರಸಾಪುರ ಕೆರೆಯಲ್ಲಿ ಅಳವಡಿಸಿರುವ ಪಂಪ್ ಮೂಲಕ ಒಂದು ಭಾಗವನ್ನು ಕೋಲಾರದ ಕಡೆಗೆ, ಇನ್ನೊಂದು ಭಾಗದಲ್ಲಿ ಮಾಲೂರು ತಾಲೂಕಿನ ಶಿವಾರಪಟ್ಟಣದ ಕೆರೆಗೆ ನೀರು ಹರಿಸಲು ಯೋಜನೆ ರೂಪಿಸಿ, ಕಳೆದ ವರ್ಷ ಯೋಜನೆ ಆರಂಭಿಸಿತ್ತು. ಕೋಲಾರ ಮತ್ತು ಬಂಗಾರಪೇಟೆ ಕಡೆಗೆ ಹರಿಯುವ ಪಂಪ್‌ಗೆ ಮಾತ್ರ ಚಾಲನೆ ನೀಡಲಾಗಿತ್ತು.
ಅಧಿಕೃತವಾಗಿ ಚಾಲನೆ: ಸರ್ಕಾರದ ಕ್ರಮದಿಂದ ಬೇಸತ್ತ ಶಾಸಕ ಕೆ.ವೈ.ನಂಜೇಗೌಡ, ರಾಜ್ಯ ರಾಜಕಾರಣದಲ್ಲಿನ ಶಾಸಕರ ರಾಜೀನಾಮೆ ಪರ್ವವನ್ನು ಬಳಕೆ ಮಾಡಿಕೊಂಡು ಮಾಲೂರು ತಾಲೂಕಿನ ಕೆರೆಗಳಿಗೆ ನೀರು ಹರಿಯದಿದ್ದಲ್ಲಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಎಚ್ಚರಿಕೆ ನೀಡಿದ್ದರು. ಪರಿಣಾಮ ತಾಲೂಕಿನ ಶಿವಾರಪಟ್ಟಣದ ಕೆರೆಗೆ ನೀರು ಹರಿಸುವ ಪಂಪ್‌ಗೆ ಸೋಮವಾರ ಚಾಲನೆ ನೀಡಲಾಗಿದೆ.
40 ಎಂಎಲ್ಡಿ ನೀರು: ಈ ವೇಳೆ ಮಾತನಾಡಿದ ಶಾಸಕ ನಂಜೇಗೌಡ, 1300 ಕೋಟಿ ರೂ.ನಲ್ಲಿ ಕೆ.ಸಿ.ವ್ಯಾಲಿ ಯೋಜನೆ ರೂಪಿಸಿ ನೀರನ್ನು ತಾಲೂಕಿನ ಕೆರೆಗಳಿಗೆ ಹರಿಸಲು ಸರ್ಕಾರ ಅನುಮತಿ ನೀಡಿರುವುದು ಶ್ಲಾಘನೀಯ. ಯೋಜನೆಯಂತೆ ತಾಲೂಕಿನ ಕೆರೆಗಳಿಗೆ 100 ಎಂಎಲ್ಡಿ ನೀರು ಹರಿಸಬೇಕಾಗಿದ್ದು, ಈಗ 40 ಎಂಎಲ್ಡಿ ನೀರು ಹರಿಸುವ ಕಾರ್ಯಕ್ಕೆ ಚಾಲನೆ ನೀಡಲಾಗಿದೆ ಎಂದು ಹೇಳಿದರು.
ಅನುಮತಿ: ತಾಲೂಕಿನ ಕೆರೆಗಳಿಗೆ ನೀರು ಹರಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣಾಬೈರೇಗೌಡರಲ್ಲಿ ಮನವಿ ಮಾಡಿದ್ದೆ. ವಾರದಲ್ಲಿ ನೀರು ಹರಿಸುವ ಕಾರ್ಯಕ್ಕೆ ಚಾಲನೆ ನೀಡುವ ವಿಶ್ವಾಸ ವ್ಯಕ್ತ ಪಡಿಸಿದ್ದರು. ಅನ್ಯಾಯವಾದಲ್ಲಿ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಲು ಸಿದ್ಧನಾಗಿರುವುದಾಗಿ ಹೇಳಿ ದ್ದರಿಂದ, ಅಂತಹ ಘಟನೆಗಳಿಗೆ ಅವಕಾಶ ನೀಡದೆ ಅನುಮತಿ ನೀಡಲಾಗಿದೆ ಎಂದು ಹೇಳಿದರು.
ಹಲವು ಕೆರೆಗಳಿಗೆ ನೀರು: ಸದ್ಯ ತಾಲೂಕಿನ ಕೆರೆಗಳಿಗೆ ಪೀಡರ್ ಚಾನಲ್ ಮೂಲಕ ನೀರು ಪಂಪ್ ಮಾಡಲು ಅನುಮತಿ ನೀಡಲಾಗಿದೆ. ಇದರಿಂದ ತಾಲೂಕಿನ ಶಿವಾರಪಟ್ಟಣದ ಕೆರೆಗೆ ಹೊಂದಿಕೊಂಡಿರುವ ದೊಡ್ಡಅಯ್ಯೂರು ಕೆರೆಗೆ ನೀರು ಹರಿದು ನಂತರ ರಾಜಕಾಲುವೆಯ ಮೂಲಕ ಶಿವಾರಪಟ್ಟಣದ ಕೆರೆಗೆ ಹರಿದು ಬರಲಿದೆ. ಇಲ್ಲಿಂದ ಭಾವನಹಳ್ಳಿ ಕೆರೆಗೆ ಪಂಪ್‌ಮಾಡಿ ತಾಲೂಕಿನ ತಂಬಿಹಳ್ಳಿ ಅಬ್ಬೇನಹಳ್ಳಿ, ಹಾರೋಹಳ್ಳಿ, ಮಾಲೂರು ಕೆರೆಗೆ ನೀರು ಹರಿಸಲಾಗುವುದು ಎಂದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಟಿ.ಮುನಿಯಪ್ಪ, ಸಿ.ರಾಜಣ್ಣ, ನವೀನ್, ಮೈಲಾಂಡಹಳ್ಳಿ ನಾರಾಯಣಸ್ವಾಮಿ, ಸಂತೇಹಳ್ಳಿ ನಾರಾಯಣಸ್ವಾಮಿ, ಅಶ್ವತ್ಥ್ರೆಡ್ಡಿ, ಬಿ.ಆರ್.ಶ್ರೀನಿವಾಸ್, ಹರೀಶ್, ಎಂ.ಜಿ.ಮಧುಸೂದನ್ ಮತ್ತಿತರರು ಇದ್ದರು.