Advertisement

Bangalore: ರಾಜಧಾನಿ 14 ಕೆರೆಗಳಿಗೆ ಕೆ.ಸಿ.ವ್ಯಾಲಿ ನೀರು

11:33 AM Mar 19, 2024 | Team Udayavani |

ಬೆಂಗಳೂರು: ಕೈಕೊಟ್ಟ ಮಳೆಯಿಂದ ನಗರದಲ್ಲಿರುವ ಅರ್ಧಕ್ಕರ್ಧ ಸರ್ಕಾರಿ ಕೊಳವೆಬಾವಿಗಳು ಬತ್ತಿಹೋಗಿವೆ. ಹಲವೆಡೆ ಅಂತರ್ಜಲಮಟ್ಟ ಕುಸಿಯುತ್ತಿದ್ದು, ಕೊಳವೆಬಾವಿಗಳನ್ನೇ ಅವಲಂಬಿಸಿದ ಪ್ರದೇಶಗಳಲ್ಲಿ ಸಮಸ್ಯೆ ತೀವ್ರಗೊಳ್ಳುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಕೋಲಾರ ಮಾದರಿಯಲ್ಲಿ ಸಂಸ್ಕರಿಸಿದ ನೀರಿನಿಂದ ಇಲ್ಲಿನ ಕೆರೆಗಳನ್ನು ತುಂಬಿಸಲು ಸರ್ಕಾರ ಮುಂದಾಗಿದೆ.

Advertisement

ನಗರದಲ್ಲಿ ಬಳಕೆ ಮಾಡಿದ ತ್ಯಾಜ್ಯ ನೀರನ್ನು ಸಂಸ್ಕರಿಸಿ ಕೆ.ಸಿ.ವ್ಯಾಲಿ ಯೋಜನೆ ಅಡಿ ಕೋಲಾರದ ಕೆರೆಗಳನ್ನು ತುಂಬಿಸಲಾಗುತ್ತಿದೆ. ಅದೇ ನೀರನ್ನು ಬೆಂಗಳೂರಿನಲ್ಲಿ ಬತ್ತಿಹೋಗಿರುವ 14 ಕೆರೆಗಳಿಗೆ ಹರಿಸಲು ತೀರ್ಮಾನಿಸಲಾಗಿದೆ. ಈ ಸಂಬಂಧ ಪೈಪ್‌ಲೈನ್‌ಗಳ ಅಳವಡಿಕೆ ಮತ್ತಿತರ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲು ಸೂಚಿಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಗೃಹ ಕಚೇರಿ “ಕೃಷ್ಣಾ’ದಲ್ಲಿ ಸೋಮವಾರ ಬೆಂಗಳೂರಿನ ಕುಡಿಯುವ ನೀರಿನ ಸಮಸ್ಯೆ ಕುರಿತು ಜಲಮಂಡಳಿ, ಇಂಧನ ಇಲಾಖೆ, ಬಿಬಿಎಂಪಿ ಸೇರಿ ವಿವಿಧ ಇಲಾಖೆ ಅಧಿಕಾರಿಗಳೊಂದಿಗೆ ಪರಿಶೀಲನೆ ನಡೆಸಿ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ಹಗಲಿನಲ್ಲಿ ಸಂಸ್ಕರಿಸಿದ ನೀರಿನಿಂದ ಕೋಲಾರದ ಕೆರೆಗಳನ್ನು ತುಂಬಿಸಲಾಗುತ್ತದೆ. ಅದೇ ರೀತಿ, ರಾತ್ರಿ ವೇಳೆ ನಗರದ ಕೆರೆಗಳಿಗೆ ಈ ನೀರನ್ನು ಹರಿಸಲು ಸೂಚಿಸಲಾಗಿದೆ. ಇದರಿಂದ ಅಂತರ್ಜಲಮಟ್ಟ ವೃದ್ಧಿ ಜತೆಗೆ ಈಗಾಗಲೇ ಬತ್ತಿರುವ ಕೊಳವೆಬಾವಿಗಳ ಮರುಪೂರಣಕ್ಕೂ ಅನುಕೂಲವಾಗಲಿದೆ. ಈ ಸಂಬಂಧ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದ್ದು, ಪೈಪ್‌ಲೈನ್‌ ಅಳವಡಿಕೆ, ಮಾರ್ಗಗಳ ಜೋಡಣೆ ಮತ್ತಿತರ ಕಾರ್ಯಗಳನ್ನು ಸಣ್ಣ ನೀರಾವರಿ ಇಲಾಖೆಯ ಸಮನ್ವಯದೊಂದಿಗೆ ಕೈಗೊಳ್ಳಲು ನಿರ್ದೇಶನ ನೀಡಲಾಗಿದೆ ಎಂದು ಹೇಳಿದರು.

1,700 ಟ್ಯಾಂಕರ್‌ಗಳ ನೋಂದಣಿ: ಇದಲ್ಲದೆ, 313 ಸ್ಥಳಗಳಲ್ಲಿ ಹೊಸದಾಗಿ ಬೋರ್‌ವೆಲ್‌ಗ‌ಳನ್ನು ಕೊರೆಸುವುದರ ಜತೆಗೆ 1,200 ನಿಷ್ಕ್ರಿಯ ಬೋರ್‌ವೆಲ್‌ಗ‌ಳ ಮರುಪೂರಣಗೊಳಿಸಲಾಗುತ್ತಿದೆ. ಕೊಳೆಗೇರಿ, ಎತ್ತರದ ಪ್ರದೇಶದಲ್ಲಿ ಹಾಗೂ ಬೋರ್‌ವೆಲ್‌ ಮೇಲೆ ಅಬಲಂಬಿತ ಪ್ರದೇಶಗಳಲ್ಲಿ ಕೆಎಂಎಫ್ ಸೇರಿ ಎಲ್ಲಾ ಖಾಸಗಿ ಟ್ಯಾಂಕರ್‌ಗಳನ್ನು ಬಳಸಲು ಹೇಳಿದ್ದೇನೆ. ಎರಡು ಸಾವಿರ ಖಾಸಗಿ ಟ್ಯಾಂಕರ್‌ಗಳ ಪೈಕಿ 1,700 ನೋಂದಣಿ ಮಾಡಿಕೊಂಡಿದ್ದು, ಮಾಲ್‌ಗ‌ಳು, ಖಾಸಗಿ ಬೋರ್‌ವೆಲ್‌ಗ‌ಳಿಂದ ಇವು ನೀರಿನ ಸರಬರಾಜು ಮಾಡಲಿವೆ ಎಂದು ಹೇಳಿದರು.

Advertisement

ಇನ್ನು ನಗರದಲ್ಲಿ ನಿತ್ಯ ಒಟ್ಟು 2,600 ಎಂಎಲ್‌ಡಿ ನೀರಿನ ಅವಶ್ಯಕತೆ ಇದ್ದು, 1,470 ಎಂಎಲ್‌ಡಿ ಕಾವೇರಿ ನದಿಯಿಂದ ಬರುತ್ತದೆ. 650 ಎಂಎಲ್‌ಡಿ ನೀರು ಕೊಳವೆಬಾವಿಯಿಂದ ದೊರೆಯುತ್ತಿದ್ದು, 500 ಎಂಎಲ್‌ಡಿ ನೀರಿನ ಕೊರತೆ ಇದೆ. ಜೂನ್‌ ಅಂತ್ಯಕ್ಕೆ ಕಾವೇರಿ 5ನೇ ಹಂತದ ಕಾಮಗಾರಿ ಮುಕ್ತಾಯವಾಗಲಿದ್ದು, ಆಗ ಇನ್ನೂ 775 ಎಂಎಲ್‌ಡಿ ಹೆಚ್ಚುವರಿ ನೀರು ಸಿಗಲಿದೆ. ಇದು 110 ಹಳ್ಳಿಗಳಿಗೆ ಸರಬರಾಜು ಆಗಲಿದೆ ಎಂದು ಮಾಹಿತಿ ನೀಡಿದರು.

ನಗರದ ಒಟ್ಟಾರೆ ಜನಸಂಖ್ಯೆ ಪೈಕಿ ಶೇ.40ರಷ್ಟು ಜನ ಕೊಳವೆಬಾವಿಗಳನ್ನು ಅವಲಂಬಿಸಿದ್ದಾರೆ ಎಂದ ಅವರು, ನಿಯಂತ್ರಣ ಕೊಠಡಿಗಳ ಸಂಖ್ಯೆ ಹೆಚ್ಚಿಸುವುದರ ಜತೆಗೆ ಟಾಸ್ಕ್ಫೋರ್ಸ್‌ಗಳ ಸಂಖ್ಯೆ ಕೂಡ ಹೆಚ್ಚಳ ಮಾಡಲು ಸೂಚಿಸಲಾಗಿದೆ. ದೂರುಬಂದ ತಕ್ಷಣ ಆ ಪ್ರದೇಶಗಳಿಗೆ ನೀರು ಸರಬರಾಜು ಮಾಡಬೇಕು. ಯಾವುದೇ ರೀತಿಯ ದೂರುಗಳು ಬಂದರೆ, ಅಧಿಕಾರಿಗಳನ್ನೇ ಹೊಣೆ ಮಾಡುವುದಾಗಿ ಎಚ್ಚರಿಸಲಾಗಿದೆ ಎಂದು ವಿವರಿಸಿದರು.

ಪ್ರತಿ ದಿನ ಸಭೆ, ವಾರಕ್ಕೊಂದು ಕ್ರಿಯಾ ಯೋಜನೆ: ಸಿಎಂ: 

ಯಾವುದೇ ಕಾರಣಕ್ಕೂ ನೀರಿನ ಸಮಸ್ಯೆ ಉಂಟಾಗಬಾರದು. ಒಂದು ವೇಳೆ ದೂರುಗಳು ಕೇಳಿ ಬಂದರೆ, ಅದಕ್ಕೆ ಅಧಿಕಾರಿಗಳನ್ನು ಹೊಣೆ ಮಾಡಲಾಗುವುದು ಎಂದು ಕಟ್ಟೆಚ್ಚರ ನೀಡಲಾಗಿದೆ. ಮುಂಗಾರು ಶುರು ಆಗುವವರೆಗೂ ಸಂಬಂಧಪಟ್ಟ ಎಲ್ಲ ಇಲಾಖೆಗಳ ಅಧಿಕಾರಿಗಳು ನಿತ್ಯ ಸಭೆ ನಡೆಸಿ ನೀರಿನ ಸಮಸ್ಯೆ ನಿರ್ವಹಣೆ ಮಾಡಬೇಕು. ಪ್ರತಿ ದಿನ ಅಧಿಕಾರಿಗಳ ಸಭೆ ಜತೆಗೆ ವಾರಕ್ಕೊಂದು ಕ್ರಿಯಾಯೋಜನೆ ರೂಪಿಸುವಂತೆ ಸೂಚಿಸಿರುವು ದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾಹಿತಿ ನೀಡಿದರು. ನಗರದಲ್ಲಿ 14 ಸಾವಿರ ಸರ್ಕಾರಿ ಕೊಳವೆಬಾವಿಗಳಿವೆ. ಈ ಪೈಕಿ ಮಳೆಯ ತೀವ್ರ ಕೊರತೆ, ಅತಿಕ್ರಮಣ, ಬೆಂಗಳೂರು ಎತ್ತರದಲ್ಲಿರು ವುದು ಸೇರಿ ಹಲವು ಕಾರಣಗಳಿಂದ 6,900 ಕೊಳ ವೆಬಾವಿಗಳು ಬತ್ತಿವೆ. ಇದರಿಂದ ಹೆಚ್ಚು ಸಮಸ್ಯೆ ಉಂಟಾಗಿದೆ. ಆದ್ದರಿಂದ ಯಾವುದೇ ಕಾರಣಕ್ಕೂ ನೀರಿನ ಹಾಹಾಕಾರ ಉಂಟಾಗದಂತೆ ಎಚ್ಚರ ವಹಿ ಸುವಂತೆ ಸೂಚಿಸಲಾಗಿದೆ ಎಂದು ವಿವರಿಸಿದರು.

ನೀರಿನ ದುರುಪಯೋಗ ತಡೆಗಟ್ಟಲು ಸಹಾಯವಾಣಿ ಸಂಖ್ಯೆ 1916, ವಾಟ್ಸ್‌ ಆ್ಯಪ್‌ ಮೂಲಕ ದೂರು ನೀಡಿ:

ಸಾರ್ವಜನಿಕರು ಕುಡಿಯುವ ನೀರಿನ ದುಂದುವೆಚ್ಚ ಮಾಡಬಾರದು. ಗಾರ್ಡನ್‌ಗಳಿಗೆ ಕುಡಿಯುವ ನೀರು ಬಳಸದಂತೆ ಎಚ್ಚರಿಕೆ ನೀಡಲಾಗಿದೆ. ಮಳೆನೀರು ಕೊಯ್ಲು ಕಡ್ಡಾಯವಾಗಿ ಅಳವಡಿಸಿಕೊಳ್ಳಬೇಕು. ಬಳಕೆ ನೀರಿನ ಶುದ್ಧೀಕರಿಸಿ ಹೆಚ್ಚಿನ ಪ್ರಮಾಣದಲ್ಲಿ ಮರುಬಳಸುವಂತೆ ಸೂಚಿಸಲಾಗಿದೆ. ನೀರಿನ ದುರುಪಯೋಗ ತಡೆಗಟ್ಟಲು ಸೂಚಿಸಲಾಗಿದ್ದು, ಈ ಬಗ್ಗೆ 143 ಟಾಸ್ಕ್ ಫೋರ್ಸ್‌ಗಳು ಕಾರ್ಯನಿರ್ವಹಿಸುತ್ತಿವೆ. ಈ ಪ್ರಮಾಣ ಹೆಚ್ಚಿಸಲು ಸೂಚಿಸಲಾಗಿದೆ. ಕೇಂದ್ರೀಯ ಸಹಾಯವಾಣಿ ಸಂಖ್ಯೆ 1916 ಹಾಗೂ ವಾಟ್ಸ್‌ ಆ್ಯಪ್‌ ಮೂಲಕ ದೂರು ದಾಖಲಿಸಬಹುದು. ಈ ದೂರುಗಳನ್ನು ಕೂಡಲೇ ಬಗೆಹರಿಸಬೇಕು ಎಂದು ನಿರ್ದೇಶನ ನೀಡಲಾಗಿದೆ ಎಂದು ಸಿಎಂ ವಿವರಿಸಿದರು. ಇದರ ಜತೆಗೆ ಭವಿಷ್ಯದಲ್ಲಿ ಯಾವುದೇ ಸಂದರ್ಭದಲ್ಲೂ ನೀರಿನ ಕೊರತೆ ಆಗದಂತೆ ತಜ್ಞರ ಸಮಿತಿಯನ್ನು ರಚಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next