ವಿಟ್ಲ : ಕಾಯರ್‌ಕಟ್ಟೆ ಸದ್ಗುರು ಸಂಗೀತ ಶಾಲೆಯ ರಜತ ಸಂಭ್ರಮ, ಸಮ್ಮಾನ ಕಾರ್ಯಕ್ರಮವು ಬಾಯಾರು ಎ.ಯು.ಪಿ. ಶಾಲೆಯಲ್ಲಿ ನಡೆಯಿತು. ಹೆದ್ದಾರಿ ಶಾಲಾ ಮಿತ್ರ ಮಂಡಳಿ ಅಧ್ಯಕ್ಷ ಶ್ರೀರಾಮ ಪದಕಣ್ಣಾಯ ಕಾರ್ಯಕ್ರಮ ಉದ್ಘಾಟಿಸಿದರು.
ಮಂಜೇಶ್ವರ ತಾ| ಲೈಬ್ರೆರಿಯನ್ ಕೌನ್ಸಿಲ್ ಅಧ್ಯಕ್ಷ ಎಸ್. ನಾರಾಯಣ ಭಟ್, ಕೇರಳ ರಾಜ್ಯ ಸಮಿತಿ ಸದಸ್ಯ ಶ್ಯಾಮ ಭಟ್ ಉಪಸ್ಥಿತರಿದ್ದರು. ಬಳಿಕ ಸಂಗೀತ ಶಾಲೆಯ ವಿದ್ಯಾರ್ಥಿಗಳಿಂದ ಹಾಡುಗಾರಿಕೆ ನೆರವೇರಿತು. ರಜತ ಸಂಭ್ರಮ ಸಮಿತಿ ಗೌರವಾಧ್ಯಕ್ಷ ಡಾ| ಎಂ.ಎಸ್. ಭಟ್ ಬಿ.ಸಿ. ರೋಡ್ ಮತ್ತು ಬಳಗದವರು ಸಂಗೀತ ಕಛೇರಿ ನಡೆಸಿಕೊಟ್ಟರು. ಸಂಗೀತ ಶಾಲೆಯ ಮುಖ್ಯ ಶಿಕ್ಷಕಿ ಜಯಲಕ್ಷ್ಮೀ ಪಿ. ಭಟ್ ಸಾದಂಗಾಯ ಮತ್ತು ಬಳಗದವರು ಪಂಚರತ್ನ ಕೀರ್ತನೆ ಹಾಡಿದರು.
ಸಮಾರೋಪ ಸಮಾರಂಭದಲ್ಲಿ ಮಂಜೇಶ್ವರ ತಾ| ಲೈಬ್ರೆರಿಯನ್ ಕೌನ್ಸಿಲ್ ಅಧ್ಯಕ್ಷ ಎಸ್. ನಾರಾಯಣ ಭಟ್ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಯಾಗಿ ಸಾಹಿತಿ ಮುಳಿಯ ಶಂಕರ ಭಟ್ ಭಾಗವಹಿಸಿದ್ದರು. ರಜತ ಸಂಭ್ರಮ ಸಮಿತಿ ಗೌರವಾಧ್ಯಕ್ಷ ಡಾ| ಎಂ.ಎಸ್. ಭಟ್ ಬಿ.ಸಿ. ರೋಡ್ ಅವರು ಸಂಗೀತ ಶಾಲೆ ಸ್ಥಾಪಕ ದಿ| ಬಜಕ್ಕಳ ಗಣಪತಿ ಭಟ್ ಅವರನ್ನು ಸಂಸ್ಮರಣೆ ಮಾಡಿದರು. ದಿ| ಬಜಕ್ಕಳ ಗಣಪತಿ ಭಟ್ ಅವರ ಶಿಷ್ಯೆ ಉಷಾ ಮಲ್ಲ ಅವರನ್ನೂ ಸ್ಮರಿಸಲಾಯಿತು. ಇದೇ ಸಂದರ್ಭ ಖ್ಯಾತ ಮೃದಂಗ ವಾದಕ ವಿದ್ವಾನ್ ಕುಕ್ಕಿಲ ಶಂಕರ ಭಟ್ ಮತ್ತು ಪ್ರಸಿದ್ಧ ಪಿಟೀಲು ವಾದಕಿ ಪ್ರೇಮಲೀಲಾ ಪಿ. ಭಟ್ ಆಟಿಕುಕ್ಕೆ ಅವರನ್ನು ಸಮ್ಮಾನಿಸಲಾಯಿತು. ವಿದ್ವಾನ್ ಬಾಲಕೃಷ್ಣ ಹೊಸಮನೆ ಮತ್ತು ನಯನಗೌರಿ ಸೇರಾಜೆ ಸಮ್ಮಾನಿತರನ್ನು ಅಭಿನಂದಿಸಿದರು.
ಉಪಾಧ್ಯಕ್ಷ ಹಾಗೂ ಹೆದ್ದಾರಿ ಶಾಲೆ ಮುಖ್ಯೋಪಾಧ್ಯಾಯ ಆದಿನಾರಾಯಣ ಭಟ್ ಶುಭ ಹಾರೈಸಿದರು. ಕಾರ್ಯಾಧ್ಯಕ್ಷ ಸಾದಂಗಾಯ ಪ್ರಮೋದ್ ಭಟ್ ಪ್ರಸ್ತಾವನೆಗೈದರು. ಕೋಶಾಧಿಕಾರಿ ಕಾಂತಿಲ ತಿರುಮಲೇಶ್ವರ ಭಟ್ ಸ್ವಾಗತಿಸಿದರು. ವಿದ್ಯಾ ಸಿ.ಎಚ್. ಆಶಯಗೀತೆ ಹಾಡಿದರು. ಕಾರ್ಯದರ್ಶಿ ಪದ್ಯಾಣ ವೆಂಕಟರಮಣ ಭಟ್ ವಂದಿಸಿದರು. ಜತೆ ಕಾರ್ಯದರ್ಶಿ ಸೇರಾಜೆ ಶ್ರೀನಿವಾಸ ಭಟ್ ಕಾರ್ಯಕ್ರಮ ನಿರ್ವಹಿಸಿದರು.
ಬಳಿಕ ಪೂರ್ಣಶ್ರೀ ಕಾಂಞಂಗಾಡ್, ಟಿ.ಪಿ. ಶ್ರೀನಿವಾಸನ್ ಇವರಿಂದ ಸಂಗೀತ ಕಛೇರಿ ನೆರವೇರಿತು. ಮೃದಂಗದಲ್ಲಿ ವಿದ್ವಾನ್ ಬಾಲಕೃಷ್ಣ ಹೊಸಮನೆ ಮತ್ತು ಪಿಟೀಲಿನಲ್ಲಿ ವಿದ್ವಾನ್ ಕೆ. ವೇಣುಗೋಪಾಲ ಶ್ಯಾನುಭೋಗ್ ಸಹಕರಿಸಿದರು.