Advertisement

ಶಿಖರದಿಂದ ಸಾಗರದವರೆಗೆ ಯುವತಿಯರ ಸಾಹಸ ಯಾತ್ರೆಗೆ ಕಾಪುವಿನಲ್ಲಿ ಸ್ವಾಗತ

04:09 PM Oct 30, 2021 | Team Udayavani |

ಕಾಪು: ಭಾರತದ ಸ್ವಾತಂತ್ರೋತ್ಸವದ ಅಮೃತ ಮಹೋತ್ಸವ ಅಂಗವಾಗಿ “ಶಿಖರದಿಂದ ಸಾಗರ” ಐತಿಹಾಸಿಕ ಯಾನದಲ್ಲಿ ಭಾಗಿಯಾಗಿರುವ ರಾಜ್ಯದ 5 ಮಂದಿ ಯುವತಿಯರನ್ನು ಕಾಪು ಲೈಟ್ ಹೌಸ್ ಬಳಿ  ಆತ್ಮೀಯವಾಗಿ ಸ್ವಾಗತಿಸಿ, ಬೀಳ್ಕೊಡಲಾಯಿತು.

Advertisement

ಶುಕ್ರವಾರ ಸಂಜೆ ಕಾಪು ತಹಶೀಲ್ದಾರ್ ಶ್ರೀನಿವಾಸ ಮೂರ್ತಿ ಕುಲಕರ್ಣಿ, ಪುರಸಭೆ ಮುಖ್ಯಾಧಿಕಾರಿ ವೆಂಕಟೇಶ ನಾವಡ, ಕಂದಾಯ ನಿರೀಕ್ಷಕ ಸುದೀರ್ ಕುಮಾರ್ ಶೆಟ್ಟಿ ಹಾಗೂ ಸ್ಥಳೀಯ ಲಾಲ್ ಬಹದ್ದೂರ್ ಶಾಸ್ತ್ರಿ ಸ್ಪೋರ್ಟ್ಸ್ ಆ್ಯಂಡ್ ಕಲ್ಚರಲ್ ಕ್ಲಬ್ ವತಿಯಿಂದ ಬರಮಾಡಿಕೊಳ್ಳಲಾಯಿತು.

ಶನಿವಾರ ಮುಂಜಾನೆ ಕಾಪು ಶಾಸಕ ಲಾಲಾಜಿ ಆರ್. ಮೆಂಡನ್ ಅವರ ನೇತೃತ್ವದಲ್ಲಿ ಮಂಗಳೂರಿಗೆ ಬೀಳ್ಕೊಡಲಾಯಿತು.

ರಾಜ್ಯದ ವಿವಿಧೆಡೆಗಳ ಐದು ಮಂದಿ ಯುವತಿಯರು ಕಾಶ್ಮೀರದಲ್ಲಿ ಕೋಲ್‌ ಹೈ  (5425 ಮೀ ) ಶಿಖರವನ್ನು ಯಸ್ವಿಯಾಗಿ ಏರಿ, ಅನಂತರ ಲಡಾಖ್ ನಿಂದ 3,000 ಕಿ.ಮೀ ಸೈಕಲ್ ಯಾನ ಮಾಡುತ್ತಾ ಕಾರವಾರ ತಲುಪಿದ್ದು, ಕಾರವಾರದಿಂದ ಕರ್ನಾಟಕದ ಕರಾವಳಿ ಪ್ರದೇಶದಲ್ಲಿ 300 ಕಿ.ಮೀ. ಸಮುದ್ರದಲ್ಲಿ ಕಯಾಕಿಂಗ್ ಯಾನ ಮಾಡುತ್ತಿದ್ದಾರೆ.

Advertisement

ಮೈಸೂರಿನ ಬಿಂದು ಅವರ ನೇತೃತ್ವದಲ್ಲಿ ಶಿವಮೊಗ್ಗದ ಐಶ್ವರ್ಯ ಮತ್ತು ಧನಲಕ್ಷ್ಮೀ, ಬೆಂಗಳೂರಿನ ಆಶಾ, ಮಡಿಕೇರಿಯ ಪುಷ್ಪ ಅವರು ಶಿಖರದಿಂದ ಸಾಗರದವರೆಗಿಗ ಯಾನ ಕೈಗೊಂಡಿದ್ದು, ಅವರು ತಮ್ಮ 75 ದಿನಗಳ ಯಾನದ ಅನುಭವಗಳನ್ನು ಹಂಚಿಕೊಂಡರು. ಕಯಾಕಿಂಗ್ ಯಾನ ರವಿವಾರ ಮಂಗಳೂರಿನಲ್ಲಿ ಮುಕ್ತಾಯಗೊಳ್ಳಲಿದೆ.

ಶಿಖರವೇರುವ ಸಂದರ್ಭದಲ್ಲಿ 25 ಕೆಜಿಗೂ ಅಧಿಕ ಭಾರದ ಬ್ಯಾಗ್ ಗಳನ್ನು ಹೊತ್ತುಕೊಂಡು, ಜೀವವನ್ನು ಪಣಕ್ಕಿಟ್ಟು ಸಾಹಸ ಮಾಡಿದ್ದೇವೆ. ಯಾನದ ಸಂದರ್ಭದಲ್ಲಿ ತಮ್ಮ ಎಲ್ಲಾ ಅಗತ್ಯತೆಗಳಿಗೆ ಯಾರನ್ನೂ ಅವಲಂಬಿಸದೇ ತಾವೇ ಸ್ವತ: ನಿರ್ವಹಿಸಿದ್ದೇವೆ.‌ ಅಡುಗೆ ಮಾಡುವುದು ಸೇರಿದಂತೆ ಟೆಂಟ್‌ಗಳನ್ನು ಹಾಕುವ ಕೆಲಸಗಳನ್ನು ಮಾಡಿ, ಶಿಖರವನ್ನು ನಿಗಧಿತ ಅವಧಿಗಿಂತ ಮುಂಚಿತವಾಗಿಯೇ ಏರಿ ಸಾಧನೆ ಮಾಡಿದ್ದೇವೆ.‌ಸಾಧನೆಯ ಈ ಹಾದಿಯಲ್ಲಿ ಎದುರಾದ ಎಲ್ಲಾ ಆರೋಗ್ಯ ಸಮಸ್ಯೆಗಳನ್ನು ಲೆಕ್ಕಿಸದೇ ನಿಗಧಿತ ಗುರಿ ಸಾಧನೆಯೆಡೆಗೆ ಬಂದಿದ್ದೇವೆ. ಲಡಾಖ್ ನಿಂದ ನಡೆಸಿದ ಸೈಕ್ಲಿಂಗ್ ಪ್ರಯಾಣದಲ್ಲಿ ಕಂಡು ಬಂದ ವಿವಿಧ ಪ್ರದೇಶದಲ್ಲಿನ ಯುವತಿಯರು ಮತ್ತು ಮಹಿಳೆಯರ ಸಮಸ್ಯೆಗಳನ್ನು ಕಂಡಿದ್ದು, ಮಹಿಳೆಯರು ಮನೆಯಿಂದ ಹೊರಬಂದು ಸಾಹಸಿಗಳಾಗಬೇಕು ಎನ್ನುವ ಉದ್ದೇಶದಿಂದ ಮುಂದಿನ ದಿನದಲ್ಲಿ ಅರಿವು ಕಾರ್ಯಕ್ರಮಗಳನ್ನು  ಮಾಡುವ ಉದ್ದೇಶ ಇದೆ ಎಂದು ಟೀಮ್ ಲೀಡರ್ ಮೈಸೂರಿನ‌ ಬಿಂದು ತಿಳಿಸಿದರು.

ಕಾಪು ತಾಲೂಕು ಆಡಳಿತದ ಪರವಾಗಿ ತಹಶೀಲ್ದಾರ್ ಶ್ರೀನಿವಾಸ ಮೂರ್ತಿ ಕುಲಕರ್ಣಿ, ಕಂದಾಯ ನಿರೀಕ್ಷಕ ಸುದೀರ್ ಕುಮಾರ್ ಶೆಟ್ಟಿ, ಪುರಸಭೆ ಮುಖ್ಯಾಧಿಕಾರಿ ವೆಂಕಟೇಶ ನಾವಡ, ಬೀಚ್ ನಿರ್ವಹಣಾ ಉಸ್ತುವಾರಿ ವಹಿಸಿಕೊಂಡಿರುವ ಸ್ಥಳೀಯ ಲಾಲ್ ಬಹದ್ದೂರ್ ಶಾಸ್ತ್ರಿ ಸ್ಪೋರ್ಟ್ಸ್ ಆ್ಯಂಡ್ ಕಲ್ಚರಲ್ ಕ್ಲಬ್ ನ  ಅಧ್ಯಕ್ಷ ಶೀಲರಾಜ್ ಪುತ್ರನ್, ಉಪಾಧ್ಯಕ್ಷ ಆನಂದ ಶ್ರೀಯಾನ್, ಕಯಾಕಿಂಗ್ ನಿರ್ವಾಹಕ ರಾಕೇಶ್  ಸುವರ್ಣ, ಮಹಿಳಾ ಮಂಡಲ ಅಧ್ಯಕ್ಷೆ ಉಷಾ ಶ್ರೀಯಾನ್, ಮಮತಾ ಕೆ. ಸಾಲ್ಯಾನ್, ಲೈಫ್ ಗಾರ್ಡ್ ಗಳು ಮೊದಲಾದವರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next