Advertisement
ಈಕೆ ಮೈಕಿನ ಎದುರು ಹಾಡಲು ಕುಳಿತರೆ ವೇದಿಕೆಯಲ್ಲಿ ಮಿಂಚಿನ ಸಂಚಾರವಾದ ಅನುಭವ. ಸುಶ್ರಾವ್ಯ ಕಂಠ ಹಾಗೂ ಸ್ಪಷ್ಟ ಮಾತುಗಾರಿಕೆಯಿಂದ ಯಕ್ಷ ಪ್ರಸಂಗಗಳಿಗೆ ಜೀವ ತುಂಬುವ ಕಲೆ ಈಕೆಗೆ ಕರಗತ. ಮೂರು ಗಂಟೆ, ಆರು ಗಂಟೆ ಸತತವಾಗಿ ದಣಿವಿಲ್ಲದೆ ಯಕ್ಷಪದಗಳನ್ನು ಹಾಡಬಲ್ಲ ಕಾವ್ಯಶ್ರೀ ನಾಯಕ್ ಅಜೇರು, ಭಾಗವತಿಕೆಯಲ್ಲಿ ಹೆಸರು ಮಾಡುತ್ತಿರುವ ಯುವ ಪ್ರತಿಭೆ. ಪುರುಷರಿಗಷ್ಟೇ ಸೀಮಿತ ಅನಿಸಿಕೊಂಡಿದ್ದ ವಿಭಾಗದಲ್ಲಿ, ಮಹಿಳಾ ಭಾಗವತರ ಸಂಖ್ಯೆ ಕಡಿಮೆಯೇ. ಆ ಸಾಲಿನಲ್ಲಿ ಬರುವ ಕೆಲವೇ ಕೆಲವು ಹೆಸರುಗಳಲ್ಲಿ ಕಾವ್ಯಾ ಕೂಡ ಒಬ್ಬರು.ಕಾವ್ಯಾ ಹುಟ್ಟಿ, ಬೆಳೆದಿದ್ದು ಬಂಟ್ವಾಳ ತಾಲೂಕಿನ ಅಜೇರು ಗ್ರಾಮದ ಕಲಾಸಕ್ತರ ಕುಟುಂಬದಲ್ಲಿ. ಅಜ್ಜ, ಅಪ್ಪ ಇಬ್ಬರೂ ಹವ್ಯಾಸಿ ಯಕ್ಷಗಾನ ಕಲಾವಿದರು. ಹಿಮ್ಮೇಳ ಕಲಾವಿದರಾಗಿದ್ದ ತಂದೆ ಶ್ರೀಪತಿ ನಾಯಕ್, ಮಾಂಬಾಡಿ ಸುಬ್ರಹ್ಮಣ್ಯ ಭಟ್‌ರಿಂದ ಚಂಡೆ ಕಲಿಯುತ್ತಿದ್ದರು. ಆಗ 5ನೇ ಕ್ಲಾಸ್‌ನಲ್ಲಿದ್ದ ಕಾವ್ಯಾ ಕೂಡ ಪ್ರತಿದಿನ ತಂದೆ ಜೊತೆಗೆ ಚಂಡೆ ಕ್ಲಾಸ್‌ಗೆ ಹೋಗುತ್ತಿದ್ದಳು. ನಿತ್ಯವೂ ಅಪ್ಪನ ಜೊತೆಗೆ ಬರುವ ಹುಡುಗಿಯನ್ನು ನೋಡಿದ ಸುಬ್ರಹ್ಮಣ್ಯ ಭಟ್ಟರು, ಆಗಾಗ ಅವಳ ಕೈಯಲ್ಲಿ ಹಾಡು ಹಾಡಿಸುತ್ತಿದ್ದರು. ಕಾವ್ಯಾ ಕೂಡ ಅಷ್ಟೇ ಆಸಕ್ತಿಯಿಂದ ಹಾಡು ಹೇಳುತ್ತಿದ್ದಳು. ಅವಳ ಕಂಠ ಚೆನ್ನಾಗಿದೆ ಎಂದು ಗುರುತಿಸಿದ ಅವರು, “ನೀವು ಚಂಡೆ ಕಲಿತಿದ್ದು ಸಾಕು. ಇನ್ಮುಂದೆ ನಿಮ್ಮ ಮಗಳಿಗೆ ಹಾಡಲು ಕಲಿಸೋಣ’ ಅಂತ ಆಕೆಯ ತಂದೆಗೆ ಹೇಳಿದರು. ಅಂದಿನಿಂದ ಕಾವ್ಯಾಳ ಕಲಿಕೆ ಶುರುವಾಯಿತು.
6ನೇ ತರಗತಿಯಲ್ಲಿದ್ದಾಗಲೇ ತಾಳಮದ್ದಳೆ ರಂಗಪ್ರವೇಶ ಮಾಡಿದ ಕಾವ್ಯಾ, ಈಗಾಗಲೇ 500ಕ್ಕೂ ಹೆಚ್ಚು ಪ್ರದರ್ಶನ ನೀಡಿದ್ದಾಳೆ. ಮೈಸೂರು, ಹೆಗ್ಗೊàಡು, ಹುಬ್ಬಳ್ಳಿ, ಬೆಂಗಳೂರು, ಮುಂಬೈ, ಹರಿದ್ವಾರ, ಚೆನ್ನೈ, ದುಬೈ ಮುಂತಾದ ಕಡೆಗಳಲ್ಲಿ, ಹಿರಿಯ ಭಾಗವತರ ಜೊತೆಗೆ ವೇದಿಕೆ ಏರಿದ ಹೆಗ್ಗಳಿಕೆ ಈ ಯುವತಿಯದ್ದು. ಶಾಂತ ಸ್ವಭಾವದ, ಸುಮಧುರ ಕಂಠದ ಕಾವ್ಯಾ, ಪಾತ್ರದ ಸ್ವಭಾವಕ್ಕೆ ತಕ್ಕಂತೆ ಧ್ವನಿ ಬದಲಾಯಿಸಿಕೊಂಡು ಹಾಡಬಲ್ಲರು. ತೆಂಕು, ಬಡಗಿನ ಹಿರಿಯ ಭಾಗವತರ ಜತೆ ಅನೇಕ ಗಾನ ವೈಭವ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದಾರೆ. ಅಷ್ಟೇ ಅಲ್ಲ, ಇದೀಗ ಮೇರು ಭಾಗವತರ ಜತೆಗೆ ದ್ವಂದ್ವದಲ್ಲೂ ಸೈ ಎನಿಸಿಕೊಂಡಿದ್ದಾರೆ. ನವರಸಗಳಿಗೆ ಜೀವ ತುಂಬಿ, ವೇದಿಕೆಯನ್ನು ಆವರಿಸುವ 24ರ ಈ ಯುವತಿ, ಕಲಾಸಂಗಮ ಜಿಲ್ಲಾ ಪ್ರಶಸ್ತಿ, ಸುಮ ಸೌರಭ ರಾಜ್ಯ ಪ್ರಶಸ್ತಿ, ನಾದಶ್ರೀ ಪ್ರಶಸ್ತಿ, ಕೊಂಕಣಿ ಸಾಂಸ್ಕೃತಿಕ ರಾಯಭಾರಿ ಪ್ರಶಸ್ತಿ ಸೇರಿದಂತೆ ಹಲವಾರು ಸಂಘ ಸಂಸ್ಥೆಗಳಿಂದ ಪುರಸ್ಕಾರ ಪಡೆದಿದ್ದಾರೆ.
Related Articles
Advertisement
ತುಂಬಾ ಸುಲಭದ್ದೇನಲ್ಲ…ಹೆಣ್ಣುಮಕ್ಕಳ ಕಂಠ ಇಂಪಾಗಿರುತ್ತದೆ. ಹಾಗಾಗಿ ಹಾಡುವುದು ಅವರಿಗೆ ಸಹಜವಾಗಿಯೇ ಒಲಿಯುತ್ತದೆ ಎನ್ನುತ್ತಾರೆ. ಆದರೆ, ಯಕ್ಷಗಾನ ಭಾಗವತಿಕೆ ಎಂದರೆ ಕೇವಲ ಹಾಡುವುದಲ್ಲ. ರಂಗದ ಮೇಲೆ ನಡೆಯುವ ದೃಶ್ಯಾವಳಿಗೆ ಜೀವ ತುಂಬುವುದೇ ಭಾಗವತರ ಕೆಲಸ. ಪಾತ್ರಧಾರಿಯನ್ನು ಸೂಕ್ಷ್ಮವಾಗಿ ಗಮನಿಸುತ್ತ, ಅರ್ಥ ಲೋಪವಾಗದಂತೆ ಹಾಡಬೇಕು. ನವರಸಗಳಿಗೆ ಜೀವ ತುಂಬುವ ಕಲೆ ಇದು.
ಕಾವ್ಯಶ್ರೀ ನಾಯಕ್ ಅಜೇರು ಪ್ರಿಯಾಂಕ ಎನ್.