Advertisement

ಕಾವು ತ್ರಿಗುಣಾತ್ಮಿಕ ಕ್ಷೇತ್ರ: ಬ್ರಹ್ಮಕಲಶೋತ್ಸವ

03:22 PM Mar 22, 2018 | Team Udayavani |

ನೆಲ್ಯಾಡಿ : ಮನುಷ್ಯ ನೆಮ್ಮದಿಯನ್ನು ಕಂಡುಕೊಳ್ಳಲು ಧಾರ್ಮಿಕ ಕೇಂದ್ರಗಳ ಮೊರೆ ಹೋಗುವ ಪರಿಸ್ಥಿತಿ ಇದ್ದು, ಶ್ರದ್ಧಾ ಕೇಂದ್ರಗಳ ಸಂರಕ್ಷಣೆ ಮಾಡುವ ಮೂಲಕ ಸುಖ, ಶಾಂತಿ ನೆಲೆಯೂರಿ ಸುಭಿಕ್ಷೆಯಾಗಲಿದೆ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ| ವೀರೇಂದ್ರ ಹೆಗ್ಗಡೆ ಹೇಳಿದರು.

Advertisement

ಅವರು ಕೌಕ್ರಾಡಿ ಗ್ರಾಮದ ಕಾವು ತ್ರಿಗುಣಾತ್ಮಿಕ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ನಡೆಯುತ್ತಿರುವ ನವೀಕರಣ ಪುನಃ ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವದ ಪ್ರಯುಕ್ತ ತ್ರಿಗುಣಾತ್ಮಿಕ ವೇದಿಕೆಯಲ್ಲಿ ನಡೆದ ಧಾರ್ಮಿಕ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಹಿಂದೆ ಬಡವರಲ್ಲಿ ಸಂಪತ್ತು ಇರಲಿಲ್ಲ. ಇದ್ದರೂ ಊರಿನ ಯಜಮಾನನ ಮುಂದೆ ನೀಡುವ ಧೈರ್ಯ ಇರುತ್ತಿರಲಿಲ್ಲ. ಗ್ರಾಮದಲ್ಲಿ ಕೆಲವು ಶ್ರೀಮಂತರಿದ್ದರೂ ಅವರಿಗೆ ದೇವಾಲಯಗಳ ಪುನರುತ್ಥಾನದ ಶಕ್ತಿ ಇರಲಿಲ್ಲ. ಆದ್ದರಿಂದ ದೇವಾಲಯಗಳು ನಶಿಸಿಹೋಗುತ್ತಿದ್ದವು. ಕಾಲಕ್ರಮೇಣ ಜನರು ವಿದ್ಯಾವಂತರಾದರು, ಉದ್ಯೋಗವೂ ದೊರೆಯಿತು. ಕೃಷಿಗೆ ಬೆಲೆ ಬಂದು ಜನರಲ್ಲಿ ಸಂಪತ್ತು ಆಯಿತು. ಬಳಿಕ ಜನರು ಊರಿನ ದೇವಾಲಯಗಳ ಸಂರಕ್ಷಣೆಗೆ ಮುಂದಾದರು. ಇದರಿಂದ ಪ್ರತಿಯೊಂದು ಗ್ರಾಮಗಳಲ್ಲೂ ಪುರಾತನ ದೇವಾಲಯಗಳ ಜೀರ್ಣೋದ್ಧಾರ ಕಾರ್ಯ ನಡೆಯುತ್ತಿದೆ. ದೇವರು ಹಾಗೂ ಭಕ್ತರ ನಡುವಿನದು ತಾಯಿ-ಮಕ್ಕಳ ಸಂಬಂಧ. ನವೀಕರಣ, ಬ್ರಹ್ಮಕಲಶೋತ್ಸವ ನಡೆದ ಬಳಿಕ ಕ್ಷೇತ್ರದ ರಕ್ಷಣೆ ಮಾಡುವುದು ಭಕ್ತರ ಕರ್ತವ್ಯವೂ ಆಗಿದೆ ಎಂದರು.

ಆಶೀರ್ವಚನ ನೀಡಿದ ಜೀರ್ಣೋದ್ಧಾರ ಸಮಿತಿಯ ಗೌರವಾಧ್ಯಕ್ಷ, ಶ್ರೀಧಾಮ ಮಾಣಿಲದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ, ದೇಗುಲ ನವೀಕರಣಗೊಂಡು ಬ್ರಹ್ಮಕಲಶೋತ್ಸವ ನಡೆದರೆ ಕೆಲಸ ಮುಗಿಯುವುದಿಲ್ಲ. ಬ್ರಹ್ಮಕಲಶೋತ್ಸವ ಮುಗಿದ ಬಳಿಕವೂ ದೇವಾಲಯಕ್ಕೆ ಭಕ್ತರು ಭೇಟಿ ನೀಡಬೇಕು. ಇಚ್ಛಾಶಕ್ತಿ, ಕ್ರಿಯಾಶಕ್ತಿ, ಜ್ಞಾನಶಕ್ತಿಯಾಗಿ ನೆಲೆ ನಿಂತಿರುವ ತ್ರಿಗುಣಾತ್ಮಿಕ ಶ್ರೀ ದುರ್ಗಾಪರಮೇಶ್ವರೀ ನಂಬಿ ಬರುವ ಭಕ್ತರಿಗೆ ಸದಾ ಅನುಗ್ರಹ ನೀಡುವಳು. ದೇವಸ್ಥಾನದೊಳಗೆ ರಾಜಕೀಯ ಪ್ರವೇಶಿಸದಂತೆ ಎಲ್ಲರೂ ಸಾತ್ವಿಕ ಗುಣದಿಂದ ಸೇವೆ ಮಾಡಿ ಎಂದರು.

ಮಂಗಳೂರು ಕೆನರಾ ಕಾಲೇಜಿನ ಉಪನ್ಯಾಸಕಿ ಪ್ರಮೀಳಾ ರಾವ್‌ ,ಧಾರ್ಮಿಕ ಉಪನ್ಯಾಸ ನೀಡಿದರು. ಮುಖ್ಯ ಅತಿಥಿಯಾಗಿದ್ದ ಬೆಳ್ತಂಗಡಿ ಶ್ರೀ ಗುರುದೇವ ಕಾಲೇಜಿನ ಪ್ರಾಂಶುಪಾಲ ಎ. ಕೃಷ್ಣಪ್ಪ ಪೂಜಾರಿ ಮಾತನಾಡಿ, ಆತ್ಮಸಂಸ್ಕಾರಕ್ಕಾಗಿ ಪ್ರಾರ್ಥನೆ, ದೇಹ ಸಂಸ್ಕಾರಕ್ಕಾಗಿ ಸೇವೆ ಮಾಡಿದಲ್ಲಿ ನಮ್ಮ ಜನ್ಮ ಸಾರ್ಥಕವಾಗಲಿದೆ. ದೈವಪ್ರೀತಿ, ಪಾಪ ಭೀತಿ ಇಲ್ಲದೇ ಇದ್ದಲ್ಲಿ ಜೀವನದಲ್ಲಿ ಸುಖ, ನೆಮ್ಮದಿ ಸಾಧ್ಯವಿಲ್ಲ ಎಂದರು.

Advertisement

ಕಾರ್ಯತಡ್ಕ ಉಮಾ ಮಹೇಶ್ವರ ದೇವಸ್ಥಾನದ ಟ್ರಸ್ಟಿ ಮೋಹನ ಗೌಡ ಪುತ್ಯೆ, ಕಳೆಂಜ ಶ್ರೀ ಸದಾಶಿವ ದೇವಸ್ಥಾನದ ಮೊಕ್ತೇಸರ ಅರವಿಂದ ಕುಡ್ವ, ಪ್ರಗತಿಪರ ಕೃಷಿಕ ಈಶ್ವರ ಭಟ್‌ ಹಿತ್ತಿಲು, ಕೊಕ್ಕಡ ಗಣೇಶ್‌ ಕ್ಲಿನಿಕ್‌ನ ಡಾ| ಗಣೇಶ್‌ ಡಿ., ಕೊಕ್ಕಡ ಶ್ರೀ ವೈದ್ಯನಾಥೇಶ್ವರ ವಿಷ್ಣುಮೂರ್ತಿ ದೇವಸ್ಥಾನದ ವ್ಯವಸ್ಥಾಪನ ಸಮಿತಿ ನಿಕಟಪೂರ್ವ ಅಧ್ಯಕ್ಷ ಸತ್ಯನಾರಾಯಣ ಭಟ್‌ ಹೂವಿನಕೊಪ್ಪಲು, ಜೀರ್ಣೋದ್ಧಾರ ಸಮಿತಿ ಟ್ರಸ್ಟ್‌ನ ಅಧ್ಯಕ್ಷ ತುಕ್ರಪ್ಪ ಶೆಟ್ಟಿ ನೂಜೆ, ಕೆ. ಈಶ್ವರ ಭಟ್‌ ಉಪಸ್ಥಿತರಿದ್ದರು.

ಗೌರವಾರ್ಪಣೆ
ಜೀರ್ಣೋದ್ಧಾರ ಸಮಿತಿ, ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷರು ಡಾ| ಹೆಗ್ಗಡೆಯವರಿಗೆ ಫ‌ಲ – ತಾಂಬೂಲ ಸಮರ್ಪಿಸಿದರು. ಜನಾರ್ದನ ಗೌಡ ಮೂಡುಬೈಲು, ಸವಿತಾ ಮೂಡುಬೈಲು, ಶಿವಪ್ಪ ಗೌಡ ಬದಿಯಡ್ಕ, ವಿಟ್ಠಲ ಶೆಟ್ಟಿ ನೂಜೆ, ಗೋಪಾಲಕೃಷ್ಣ ಬರೆಗುಡ್ಡೆ ಅತಿಥಿಗಳಿಗೆ ಶಾಲು, ಸ್ಮರಣಿಕೆ ನೀಡಿ ಗೌರವಿಸಿದರು.

ಬ್ರಹ್ಮಕಲಶೋತ್ಸವದಲ್ಲಿ ಶ್ರಮಿಸಿದ 30 ಕಾರ್ಯಕರ್ತರಿಗೆ ಡಾ| ಹೆಗ್ಗಡೆ ಹಾಗೂ ಶ್ರೀ ಮೋಹನದಾಸ ಸ್ವಾಮೀಜಿ ಅವರು ಶಾಲು, ಸ್ಮರಣಿಕೆ ನೀಡಿ ಗೌರವಿಸಿದರು. ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಕುಶಾಲಪ್ಪ ಗೌಡ ಪೂವಾಜೆ ಸ್ವಾಗತಿಸಿದರು. ನಾರಾಯಣ ಒಡಿನ ವಂದಿಸಿದರು. ಉಪನ್ಯಾಸಕ ಚೇತನ್‌ ಆನೆಗುಂಡಿ ಕಾರ್ಯಕ್ರಮ ನಿರೂಪಿಸಿದರು.

ಪರಿವಾರ ದೈವಗಳ ಪ್ರತಿಷ್ಠೆ
ಮೂಡುಬೈಲು ಹಾಗೂ ಕೊಡೆಂಕಿರಿಯಲ್ಲಿರುವ ಪರಿವಾರ ದೈವಗಳ ಪ್ರತಿಷ್ಠೆ, ಕಲಶಾಭಿಷೇಕ ಬೆಳಗ್ಗೆ 5.30ರ ಕುಂಭ ಲಗ್ನ
ಸುಮುಹೂರ್ತದಲ್ಲಿ ನಡೆಯಿತು. ಬಳಿಕ ತಂಬಿಲ ನಡೆಯಿತು. ಬೆಳಗ್ಗಿನ ಪೂಜೆ, ಗಣಪತಿ ಹವನ, ತ್ರಿಕಾಲಪೂಜೆ, ಅಂಕುರ ಪೂಜೆ, 4 ಶಾಂತಿ ಹೋಮಗಳು, ಹೋಮ ಕಲಶಾಭಿಷೇಕ ನಡೆಯಿತು. ಸಂಜೆ ತ್ರಿಕಾಲ ಪೂಜೆ, ಅಂಕುರ ಪೂಜೆ ನಡೆಯಿತು. ಬೆಳಗ್ಗೆ ಕಳೆಂಜ, ಪುದುವೆಟ್ಟು,ಧರ್ಮಸ್ಥಳ,ಶಿರಾಡಿ ಗ್ರಾಮಸ್ಥರಿಂದ ಹೊರೆಕಾಣಿಕೆ ಸಮರ್ಪಣೆಯಿತ್ತು. ಸಂಜೆ ಕೊಕ್ಕಡ ಶ್ರೀ ವೈದ್ಯನಾಥೇಶ್ವರ ಭಜನ ಮಂಡಳಿ, ಬೂಡುದಮಕ್ಕಿ ಶ್ರೀ ಭುವನೇಶ್ವರಿ ಭಜನ ಮಂಡಳಿಯವರಿಂದ ಭಜನ ಕಾರ್ಯಕ್ರಮವಿತ್ತು. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಗಿರೀಶ್‌ ರೈ ಕಕ್ಕೆಪದವು ಮತ್ತು ಬಳಗದವರಿಂದ ಯಕ್ಷಗಾನ ಗಾನ ವೈಭವ ನಡೆಯಿತು.

Advertisement

Udayavani is now on Telegram. Click here to join our channel and stay updated with the latest news.

Next