ಧಾರವಾಡ : ಇಲ್ಲಿನ ಆರ್.ಎನ್.ಶೆಟ್ಟಿ ಕ್ರೀಡಾಂಗಣದಲ್ಲಿ ಕರ್ನಾಟಕ ಕಲಾ ಕಾಲೇಜು ವತಿಯಿಂದ ಮೂರು ದಿನಗಳ ಕಾಲ ಹಮ್ಮಿಕೊಂಡಿರುವ 2023-24 ನೇ ಕವಿವಿ ಮಟ್ಟದ 70ನೇ ಅಂತರ ಕಾಲೇಜುಗಳ ಅಥ್ಲೆಟಿಕ್ ಕ್ರೀಡಾಕೂಟದ ಮೊದಲ ದಿನವಾದ ಶನಿವಾರವೇ ಹೆಚ್ಚು ಕಮ್ಮಿ ಅರ್ಧ ಶತಮಾನದ (48 ವರ್ಷ) ಕೂಟ ದಾಖಲೆ ಸೇರಿದಂತೆ ಈ ಹಿಂದಿನ ಮೂರು ದಾಖಲೆಗಳು ಧೂಳೀಪಟವಾಗಿವೆ.
ಧಾರವಾಡದ ವಿದ್ಯಾಗಿರಿಯ ಜೆಎಸ್‌ಎಸ್ ಶ್ರೀ ಮಂಜುನಾಥೇಶ್ವರ ಸ್ನಾತಕ ಮತ್ತು ಸ್ನಾತಕೋತ್ತರ ಅಧ್ಯಯನ ಸಂಸ್ಥೆಯ ಮೂವರು ಕ್ರೀಡಾಪಟುಗಳು ವಿವಿಧ ಕ್ರೀಡೆಗಳಲ್ಲಿ 48, 18, 10 ವರ್ಷಗಳ ಈ ಹಿಂದಿನ ದಾಖಲೆಗಳನ್ನು ಮುರಿಯುವ ಮೂಲಕ ಹೊಸ ದಾಖಲೆ ನಿರ್ಮಿಸಿದ್ದಾರೆ.
ಇದಲ್ಲದೇ ಮೊದಲ ದಿನವೇ ನಾಲ್ಕು ಚಿನ್ನ, ಎರಡು ಬೆಳ್ಳಿ ಪದಕ ಸೇರಿದಂತೆ ಒಟ್ಟು ಪದಕಗಳೊಂದಿಗೆ ಜೆಎಸ್‌ಎಸ್ ಶ್ರೀ ಮಂಜುನಾಥೇಶ್ವರ ಸ್ನಾತಕ ಮತ್ತು ಸ್ನಾತಕೋತ್ತರ ಅಧ್ಯಯನ ಸಂಸ್ಥೆಯು ಅಗ್ರಸ್ಥಾನದಲ್ಲಿ ಮುನ್ನಡೆದಿದೆ. ಮೂರು ಚಿನ್ನ, ಮೂರು ಬೆಳ್ಳಿ ಪದಕಗಳೊಂದಿಗೆ ಕರ್ನಾಟಕ ಕಲಾ ಮಹಾವಿದ್ಯಾಲಯವು 6 ಪದಕಗಳನ್ನು ಪಡೆದುಕೊಂಡು ದ್ವಿತೀಯ ಸ್ಥಾನದಲ್ಲಿ ಮುನ್ನಡೆದಿದ್ದರೆ ಶಿರಸಿಯ ಎಂಇಎಸ್ ವಾಣಿಜ್ಯ ಮಹಾವಿದ್ಯಾಲಯವು 2 ಚಿನ್ನದ ಪದಕ ಪಡೆದುಕೊಂಡಿದೆ.
ಹಿಂದಿನ ದಾಖಲೆ ಧೂಳೀಪಟ : 1975 ರಲ್ಲಿ ಕೆಸಿಡಿ ಮಹಾವಿದ್ಯಾಲಯದಿಂದ ಕುಂದನ್ ಸಿಂಗ್ ಸ್ಥಾಪಿಸಿದ್ದ 37.07 ಮೀಟರ್ ಜಾವೆಲಿನ್ ಎಸೆತದ ದಾಖಲೆಯನ್ನು 48 ವರ್ಷಗಳಿಂದ ಯಾರೂ ಹಿಂದಿಕ್ಕಲು ಸಾಧ್ಯವಾಗಿರಲಿಲ್ಲ. ಇದೀಗ ಜೆಎಸ್‌ಎಸ್ ಶ್ರೀ ಮಂಜುನಾಥೇಶ್ವರ ಸ್ನಾತಕ ಮತ್ತು ಸ್ನಾತಕೋತ್ತರ ಅಧ್ಯಯನ ಸಂಸ್ಥೆಯ ಕ್ರೀಡಾಪಟುವಾದ ಉಡುಪಿಯ ಶ್ರಾವ್ಯ ಬರೋಬ್ಬರಿ 41.43 ಮೀಟರ್ ಎಸೆತದ ಮೂಲಕ ಹಿಂದಿನ ದಾಖಲೆ ಮುರಿದು, ಹೊಸ ದಾಖಲೆ ಬರೆದಿದ್ದಾರೆ. ಇನ್ನು ಪುರುಷರ ಗುಂಡು ಎಸೆತದಲ್ಲಿ ಮೈಸೂರಿನ ಸುಭಾಸ ಡಿ 14.26 ಮೀಟರ್ ಎಸೆಯುವ ಮೂಲಕ 2005 ರಲ್ಲಿ ಗದಗದ ಶರತರಾಜ್ ಆರ್ ದಾಖಲಿಸಿದ್ದ ಬರೋಬ್ಬರಿ 18 ವರ್ಷದ ಹಿಂದಿನ 14.23 ಮೀಟರ್ ದಾಖಲೆಯನ್ನು ಹಿಂದಿಕ್ಕಿ ಹೊಸ ದಾಖಲೆ ನಿರ್ಮಿಸಿದ್ದಾರೆ. ಇದರ ಜತೆಗೆ ಮಹಿಳೆಯರ 100 ಮೀಟರ್ ಓಟವನ್ನು ಕಾರವಾರದ ನಯನಾ ಕೊಕರೆ ಬರೀ 12.10 ಸೆಕೆಂಡ್‌ನಲ್ಲಿ ಕ್ರಮಿಸುವ ಮೂಲಕ 2013 ರಲ್ಲಿ ಪ್ರಿಯಾಂಕಾ ಕೆ ದಾಖಲಿಸಿದ್ದ 10 ವರ್ಷ ಹಿಂದಿನ 12.26 ಸೆಕೆಂಡ್ ದಾಖಲೆಯನ್ನು ಮುರಿದು, ಹೊಸ ದಾಖಲೆ ಬರೆದಿದ್ದಾರೆ.
ಕಳೆದ 48 ವರ್ಷಗಳ ದಾಖಲೆ ಮುರಿಯಬೇಕೆಂಬ ಗುರಿಯಿತ್ತು. ಈ ಗುರಿ ಸಾಽಸಲು ಸಾಕಷ್ಟು ಕಠಿಣ ಅಭ್ಯಾಸ ಮಾಡಿದ್ದು, ಅದಕ್ಕಾಗಿತರಬೇತಿಯಲ್ಲದೇ ಆರ್ಥಿಕವಾಗಿಯೂ ಜೆಎಸ್‌ಎಸ್ ಸಂಸ್ಥೆಯು ಸಹಾಯ ಮಾಡಿದಲ್ಲದೇ ಅಗತ್ಯ ಪ್ರೋತ್ಸಾಹ ಕೊಟ್ಟಿದೆ. ಈ ಪ್ರೋತ್ಸಾಹದಿಂದ ಹಾಕಿದ ಶ್ರಮಕ್ಕೆ ತಕ್ಕ ಫಲಿತಾಂಶ ಬಂದಿದ್ದು, ಈ ದಾಖಲೆ ಮುರಿಯಬೇಕೆಂಬ ಕನಸು ನನಸಾಗಿದೆ. ಇದಲ್ಲದೇ ಮುಂದೆ ಆಲ್ ಇಂಡಿಯಾ ವಿಶ್ವವಿದ್ಯಾಲಯ ಹಾಗೂ ಖೇಲೋ ಇಂಡಿಯಾದಲ್ಲಿ ಪಾಲ್ಗೊಳ್ಳಬೇಕೆಂಬ ಗುರಿ ಇದೆ.
- ಶ್ರಾವ್ಯಾ, ಉಡುಪಿ