ನಟಿ ಕವಿತಾ ಗೌಡ ನಾಯಕಿಯಾಗಿ ಅಭಿನಯಿಸಿರುವ “ಹುಟ್ಟುಹಬ್ಬದ ಶುಭಾಶಯಗಳು’ ಚಿತ್ರ ಈ ವಾರ ಬಿಡುಗಡೆಯಾಗುತ್ತಿದೆ. ಅಂದಹಾಗೆ, “ಹುಟ್ಟುಹಬ್ಬದ ಶುಭಾಶಯಗಳು’ ಈ ವರ್ಷ ಬಿಡುಗಡೆಯಾಗುತ್ತಿರುವ ಕವಿತಾ ಅಭಿನಯದ ಎರಡನೇ ಚಿತ್ರವಾಗಿದ್ದು, ಹಿಂದೆಂದಿಗಿಂತಲೂ ತನಗೆ ಹೊಸಥರದ ಚಿತ್ರ ಮತ್ತು ಪಾತ್ರ ಇಲ್ಲಿ ಸಿಕ್ಕಿದೆ ಎಂಬ ಖುಷಿಯಲ್ಲಿದ್ದಾರೆ ಕವಿತಾ ಗೌಡ.
“”ಹುಟ್ಟುಹಬ್ಬದ ಶುಭಾಶಯಗಳು’ ಸಿನಿಮಾದಲ್ಲಿ ನಾನು ಸೋಶಿಯಲ್ ಮೀಡಿಯಾದಲ್ಲಿ ತುಂಬ ಆ್ಯಕ್ಟೀವ್ ಆಗಿರುವ ಹುಡುಗಿ. ಎಲ್ಲ ವಿಷಯಗಳನ್ನೂ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡುವಂಥ, ಜಾಲಿಯಾಗಿರುವಂಥ ಕ್ಯಾರೆಕ್ಟರ್ ನನ್ನದು. ಸಿನಿಮಾದಲ್ಲಿ ಪ್ರತಿ ಕ್ಯಾರೆಕ್ಟರ್‌ಗೂ ಎರಡು ಶೇಡ್‌ಗಳಿರುವುದರಿಂದ, ನನ್ನ ಕ್ಯಾರೆಕ್ಟರ್‌ಗೂ ಡಬಲ್ ಶೇಡ್’ ಇದೆ ಎಂದು ತಮ್ಮ ಪಾತ್ರ ಪರಿಚಯ ಮಾಡಿಕೊಡುತ್ತಾರೆ ಕವಿತಾ ಗೌಡ.
ಸಿನಿಮಾದ ಸಬ್ಜೆಕ್ಟ್ ಬಗ್ಗೆ ಮಾತನಾಡುವ ಕವಿತಾ, “ನಾನು ಒಂದು ಬರ್ತ್‌ಡೇ ಪಾರ್ಟಿಯನ್ನು ಆಯೋಜಿಸುತ್ತೇನೆ. ಆ ಬರ್ತ್‌ಡೇ ಪಾರ್ಟಿಯಲ್ಲಿ ಒಂದು ಕೊಲೆ ಆಗುತ್ತದೆ. ಆ ಕೊಲೆ ಹೇಗಾಗುತ್ತದೆ? ಅದನ್ನು ಮಾಡಿದ್ದು ಯಾರು? ಅನ್ನೋದೇ ಸಿನಿಮಾದ ಕಥೆಯ ಒಂದು ಎಳೆ. ಕೊಲೆ ಯಾಕಾಗಿ ಆಯ್ತು? ಕೊಲೆ ಮಾಡಿದವರು ಸಿಗುತ್ತಾರಾ.., ಇಲ್ಲವಾ? ಅನ್ನೋದು ಕ್ಲೈಮ್ಯಾಕ್ಸ್. ಅದನ್ನ ಸ್ಕ್ರೀನ್ ಮೇಲೇ ನೋಡ್ಬೇಕು. ಒಂದೇ ಮಾತಿನಲ್ಲಿ ಹೇಳ್ಳೋದಾದ್ರೆ, ಇದು ಸೀಟ್‌ನ ತುದಿಯಲ್ಲಿ ಕೂರಿಸುವಂಥ ಪಾತ್ರ’ ಎಂದು “ಹುಟ್ಟುಹಬ್ಬದ ಶುಭಾಶಯಗಳು’ ಚಿತ್ರದ ಕಥಾಹಂದರ ಬಿಚ್ಚಿಡುತ್ತಾರೆ.
ಇದನ್ನೂ ಓದಿ:ಪ್ರೇಕ್ಷಕರಿಗೆ ಆಪ್ತವಾಗುವ ಸಿನಿಮಾವಿದು… ರಚ್ಚು ಮೇಲೆ ಹೆಚ್ಚು ವಿಶ್ವಾಸ
“ಹುಟ್ಟುಹಬ್ಬದ ಶುಭಾಶಯಗಳು’ ಚಿತ್ರದ ಕಥೆ ಒಂದು ರಾತ್ರಿಯಲ್ಲಿ ನಡೆಯುವುದರಿಂದ, ಇಡೀ ಸಿನಿಮಾದ ಬಹುತೇಕ ಶೂಟಿಂಗ್ ರಾತ್ರಿಯಲ್ಲೇ ನಡೆಸಲಾಗಿದೆ. ಸುಮಾರು ಎರಡೂ ವರೆ ವರ್ಷದ ಹಿಂದೆಯೇ ಸಿನಿಮಾ ಶುರುವಾಗಿದ್ದರೂ, ಕೋವಿಡ್‌ನಿಂದಾಗಿ ಬಿಡುಗಡೆ ಸ್ವಲ್ಪ ತಡವಾಯಿತು. ಈಗಾಗಲೇ ಸಿನಿಮಾದ ಟ್ರೇಲರ್, ಸಾಂಗ್ ಹಿಟ್ ಆಗಿರುವುದರಿಂದ, ಸಿನಿಮಾ ಕೂಡ ಪ್ರೇಕ್ಷಕರಿಗೆ ಇಷ್ಟವಾಗುತ್ತದೆ ಅನ್ನೋದು ಕವಿತಾ ಅವರ ನಂಬಿಕೆ.
ಇನ್ನು “ಕ್ರಿಸ್ಟಲ್ ಪಾರ್ಕ್ ಸಿನಿಮಾಸ್’ ಬ್ಯಾನರ್‌ನಲ್ಲಿ ನಿರ್ಮಾಣವಾಗಿರುವ “ಹುಟ್ಟುಹಬ್ಬದ ಶುಭಾಶಯಗಳು’ ಚಿತ್ರಕ್ಕೆ ನಾಗರಾಜ್ ಬೇತೂರ್ ನಿರ್ದೇಶನವಿದೆ. ಚಿತ್ರದಲ್ಲಿ ದಿಗಂತ್, ಸುಜಯ್ ಶಾಸ್ತ್ರೀ, ಮಡೆನೂರು ಮನು, ವಾಣಿ, ರತನ್ ಮೊದಲಾದವರು ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.