Advertisement

KBC 14ನಲ್ಲಿ ಕೋಟಿ ಗೆದ್ದ ಮಹಿಳೆ: ಹೇಗಿತ್ತು ತಯಾರಿ, ಹಣ ಏನು ಮಾಡಲಿದ್ದಾರೆ?

05:51 PM Sep 19, 2022 | Team Udayavani |

ಮುಂಬಯಿ: ಕೌನ್‌ ಬನೇಗಾ ಕರೋಡ್‌ಪತಿ ಕಾರ್ಯಕ್ರಮದ 14ನೇ ಸೀಸನ್ ನಲ್ಲಿ 1 ಕೋಟಿ ರೂ. ಗೆದ್ದಿರುವ ಮಹಾರಾಷ್ಟ್ರದ ಕೊಲ್ಹಾಪುರದ ಮಹಿಳೆ ಕವಿತಾ ಚಾವ್ಲಾ ತಮ್ಮ ಪಯಣದ ಬಗ್ಗೆ ಮಾತಾನಾಡಿದ್ದಾರೆ.

Advertisement

ಅಮಿತಾಭ್‌ ಬಚ್ಚನ್‌ ನಡೆಸಿ ಕೊಡುವ ಕೌನ್‌ ಬನೇಗಾ ಕರೋಡ್‌ ಪತಿ ಕಾರ್ಯಕ್ರಮದ 14 ನೇ ಆವೃತ್ತಿ ನಡೆಯುತ್ತಿದೆ. ಈ ಬಾರಿಯ ಕಾರ್ಯಕ್ರಮದಲ್ಲಿ 1 ಕೋಟಿ ಗೆದ್ದಿರುವ ಮೊದಲ ಮಹಿಳೆ ಕವಿತಾ ಅವರು, ಇಂಡಿಯಾ ಟುಡೇಯೊಂದಿಗೆ ಮಾತಾನಾಡಿದ್ದಾರೆ. “ಇದೊಂದು ರೆಕಾರ್ಡ್‌ ಆಗಿ ಹೋಯಿತು. ಕೊಲ್ಹಾಪುರದ ಮೊದಲ ಕೋಟ್ಯಾಧಿಪತಿ ಮಹಿಳೆ ಆಗಬೇಕೆಂದಿದ್ದೆ. ಆ ಪ್ರಯತ್ನದಲ್ಲಿ ಇಷ್ಟು ವರ್ಷ ಕಳೆಯಿತು. ಇಂದು ಆ ಕನಸು ನನಸಾಗಿದೆ” ಎಂದರು.

ತಯಾರಿ ಹೇಗಿತ್ತು? : ಕಾರ್ಯಕ್ರಮಕ್ಕೆ ಬರುವ ಮುನ್ನ ಹೇಗೆಲ್ಲಾ ತಯಾರಿ ಇತ್ತು ಎನ್ನುವ ಪ್ರಶ್ನೆಗೆ ಉತ್ತರಿಸಿದ ಅವರು, ನಾನು ಯಾವುದೇ ನಿರ್ದಿಷ್ಟವಾದ ಪುಸ್ತಕವನ್ನು ಓದಿಲ್ಲ. ನಾನು ನನ್ನ ಮಗನಿಗೆ ಏನು ಹೇಳಿ ಕೊಡುತ್ತಿದ್ದೇನೋ, ಆ ಪುಸ್ತಕವನ್ನು ತೆಗೆದಿಡುತ್ತಿದ್ದೆ, ಅದರಲ್ಲಿ ಬರುವ ಮುಖ್ಯವಾದ ವಿಷಯಗಳಿಗೆ ಅಂಡರ್‌ ಲೈನ್‌ ಹಾಕಿ, ಆ ಬಗ್ಗೆ  ಓದುತ್ತಿದ್ದೆ. ಕೆಬಿಸಿ ಕಾರ್ಯಕ್ರಮ ನೋಡುತ್ತಿದ್ದೆ. ಅಲ್ಲಿ ಬರುವ ಪ್ರಶ್ನೆಗಳನ್ನು ನೋಡುತ್ತಿದ್ದೆ, ಮಹತ್ವದ ಪ್ರಶ್ನೆಗಳ ಬಗ್ಗೆ ಆಮೇಲೆ ಓದುತ್ತಿದ್ದೆ ಎಂದು ಕವಿತಾ ಹೇಳಿದರು.

ಕಾರ್ಯಕ್ರಮದಲ್ಲಿ ಗೆದ್ದ ಕೋಟಿ ಹಣ ಹೇಗೆ ಬಳಸುತ್ತೀರಿ ಎನ್ನವುದಕ್ಕೆ ಕವಿತಾ ಅವರು ಕೊಟ್ಟ ಉತ್ತರ, ಆ ಹಣದಲ್ಲಿ ನಾನು ಮೊದಲ ಆದ್ಯತೆ ಕೊಡುವುದು ನನ್ನ ಮಗನ ಶಿಕ್ಷಣಕ್ಕೆ. ನಾನು ಅವನನ್ನು ಆತನ ಮುಂದಿನ ಶಿಕ್ಷಣಕ್ಕೆ ವಿದೇಶಕ್ಕೆ ಕಳುಹಿಸಬೇಕೆಂದಿದ್ದೇನೆ. ವಿದೇಶದಲ್ಲಿ ಕಲಿತು ದೇಶಕ್ಕೆ ಹೆಮ್ಮೆ ತರುವುದು ನನ್ನ ಕನಸು ಎಂದು ಅವರು ಹೇಳಿದರು.

ಪ್ರತಿಯೊಬ್ಬರ ಹಾಗೆ ನನಗೂ ಕರೋಡ್‌ ಪತಿಯಲ್ಲಿ ಭಾಗವಹಿಸುವುದು ಕನಸಾಗಿತ್ತು. ಕಾರ್ಯಕ್ರಮದಲ್ಲಿ ಭಾಗಿಯಾದ ನನ್ನ ಮುಖ್ಯ ಉದ್ದೇಶ ಹಣಗಳಿಸುವುದಲ್ಲ ಸ್ವಾಭಿಮಾನ ಮತ್ತು ಘನತೆಯನ್ನು ಗಳಿಸುವುದು. ಈ ಕಾರ್ಯಕ್ರಮದಲ್ಲಿ ಒಬ್ಬರು ಸ್ವಾಭಿಮಾನವನ್ನು ಗಳಿಸಿದ್ದನ್ನು ನೋಡಿದ್ದೆ. ನಾನು ನನ್ನ ಆಟದ ಮೂಲಕ ಸ್ವಾಭಿಮಾನವನ್ನು ಗಳಿಸಬೇಕೆಂದಿದ್ದೆ. ಕಾರ್ಯಕ್ರಮದ ಶೀರ್ಷಿಕೆಯಂತೆ ಪ್ರತಿಯೊಬ್ಬರು ಕೋಟ್ಯಾಧಿಪತಿ ಆಗಬಹುದು. ನನ್ನ ಕನಸು ಕೂಡ ಅದೇ ಇತ್ತು. ನಾನು ಕೋಟಿ ಗೆಲ್ಲುತ್ತೇನೆ ಎನ್ನುವ ವಿಶ್ವಾಸವಿತ್ತು. ನಾನು ಕೋಟಿ ಗೆದ್ದು ಮನೆಗೆ ಹೋಗಲಿದ್ದೇನೆ ಎಂದು ಹೇಳಿದರು.1 ಕೋಟಿ ಗೆದ್ದ ಬಳಿಕ ಕವಿತಾ 7.5 ಕೋಟಿಯ ಪ್ರಶ್ನೆಗೆ ಉತ್ತರಿಸುವ ಪ್ರಯತ್ನ ಮಾಡಲಿದ್ದಾರೆ. ಇದರ ಪ್ರೋಮೋವನ್ನು ಸೋನಿ ಚಾನೆಲ್‌ ರಿಲೀಸ್‌ ಮಾಡಿದೆ.

Advertisement

 

Advertisement

Udayavani is now on Telegram. Click here to join our channel and stay updated with the latest news.

Next