ಬೆಂಗಳೂರು: ರಾಜ್ಯ ಸರ್ಕಾರದ ನೋಂದಣಿ ಮತ್ತು ಮುಂದ್ರಾಂಕ ಇಲಾಖೆಯ ಅಧಿಕೃತ ಕಾವೇರಿ ವೆಬ್‌ಸೈಟ್ ಮೂಲಕ ಎಇಪಿಎಸ್ ವ್ಯವಸ್ಥೆ ಬಳಸಿ ಸಾರ್ವಜನಿಕರ ಬ್ಯಾಂಕ್ ಖಾತೆಯಿಂದ ಹಣ ದೋಚುತ್ತಿದ್ದ ಇಬ್ಬರು ಬಿಹಾರ ಮೂಲದ ಆರೋಪಿಗಳು ಈಶಾನ್ಯ ವಿಭಾಗದ ಸೆನ್ ಠಾಣೆ ಪೊಲೀಸರ ಬಲೆಗೆ ಬಿದ್ದಿದ್ದಾರೆ.
ಬಿಹಾರದ ಅಬುಜರ್ (28) ಮತ್ತು ಮೊಹಮ್ಮದ್ ಪರ್ವಾಜ್ ಎಜºನಿ ಅನ್ಸಾರಿ(26) ಬಂಧಿತರು. ಆರೋಪಿಗಳಿಂದ 1.05 ಲಕ್ಷ ರೂ. ನಗದು, 2 ಲ್ಯಾಪ್‌ಟಾಪ್, 2 ಮೊಬೈಲ್ ಮತ್ತು ಮೂರು ಬೆರಳಚ್ಚು ಸಾಧನಗಳನ್ನು ವಶಕ್ಕೆ ಪಡೆಯಲಾಗಿದೆ.
ಮೊಬೈಲ್ ನಂಬರ್ ಮತ್ತು ಇ-ಮೇಲ್ ವಿಳಾಸದ ಮೂಲಕ ಕಾವೇರಿ ವೆಬ್‌ಸೈಟ್‌ಗೆ ಪ್ರವೇಶಿಸುತ್ತಿದ್ದ ಆರೋಪಿಗಳು, ಅದರಲ್ಲಿದ್ದ ಸಾರ್ವಜನಿಕರ ನೋಂದಣಿ ಪತ್ರಗಳನ್ನು ಡೌನ್ ಲೋಡ್ ಮಾಡಿಕೊಳ್ಳುತ್ತಿದ್ದರು. ಬಳಿಕ ನೋಂದಣಿ ಪತ್ರದಲ್ಲಿದ್ದ ಆಧಾರ್ ನಂಬರ್ ಮತ್ತು ಬೆರಳಚ್ಚು(ಪಿಂಗರ್‌ಪ್ರಿಂಟ್)ಗಳನ್ನು ನಕಲು ಮಾಡಿಕೊಳ್ಳುತ್ತಿದ್ದರು. ಆ ಬಳಿಕ ಎಇಪಿಎಸ್ (ಆಧಾರ್ ಎನೆಬಲ್ ಪೇಮೆಂಟ್ ಸಿಸ್ಟಂ) ಸೌಲಭ್ಯದ ಮೂಲಕ ಸಾರ್ವಜನಿಕರ ಬ್ಯಾಂಕ್ ಖಾತೆಗಳಿಂದ ಅವರ ಗಮನಕ್ಕೆ ಬಾರದಂತೆ ಹಣ ವರ್ಗಾವಣೆ ಮಾಡಿಕೊಂಡು ವಂಚಿಸುತ್ತಿದ್ದರು.
ಆರೋಪಿಗಳು ಇತ್ತೀಚೆಗೆ ದೂರುದಾರರೊಬ್ಬರ ಬ್ಯಾಂಕ್ ಖಾತೆಯಿಂದ 38 ಸಾವಿರ ರೂ. ಮತ್ತು 10 ಸಾವಿರ ರೂ. ದೋಚಿದ್ದರು. ಆದರೆ, ದೂರುದಾರರು ಬ್ಯಾಂಕ್ ಮಾಹಿತಿಯಾಗಲಿ, ಓಟಿಪಿಯಾಗಲಿ ಯಾರಿಗೂ ನೀಡಿರಲಿಲ್ಲ. ಅಲ್ಲದೆ, ಅಪರಿಚಿತ ಲಿಂಕ್ ಕೂಡ ಕ್ಲಿಕ್ ಮಾಡಿರಲಿಲ್ಲ. ಆದರೂ, ವಂಚನೆಗೊಳಗಾಗಿದ್ದರು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ತಾಂತ್ರಿಕ ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ನಗರ ಪೊಲೀಸ್ ಆಯಕ್ತ ಬಿ.ದಯಾನಂದ ಹೇಳಿದರು.
ಎಇಪಿಎಸ್ ದುರುಪಯೋಗ: ಅನಕ್ಷರಸ್ಥರು ಹಾಗೂ ರೈತರಿಗೆ ಅನುಕೂಲವಾಗಲಿ ಎಂಬ ಕಾರಣಕ್ಕೆ ಮೊಬೈಲ್ ನಂಬರ್, ಓಟಿಪಿ, ಪಾಸ್‌ಬುಕ್ ಇಲ್ಲದೆ ಹಣ ಡ್ರಾ ಮಾಡಿ ಕೊಳ್ಳಲು ಎಇಪಿಎಸ್ ವ್ಯವಸ್ಥೆ ಜಾರಿಗೆ ತರಲಾಗಿದೆ. ಆಧಾರ್ ನಂಬರ್, ಬಯೋಮೆಟ್ರಿಕ್ ಮೂಲಕವೇ ಹಣ ಡ್ರಾ ಮಾಡಲು ಮೈಕ್ರೋ ಎಟಿಎಂ ಕೇಂದ್ರಗಳನ್ನು ತೆರೆಯಲಾಗಿದೆ. ಅದನ್ನು ದುರುಪಯೋಗ ಪಡಿಸಿಕೊಂಡಿರುವ ಆರೋಪಿಗಳು, ಕಾವೇರಿ ವೆಬ್‌ಸೈಟ್‌ಗೆ ಪ್ರವೇಶಿಸಿ, ಅಲ್ಲಿರುವ ಮುಂದ್ರಾಂಕ ಪತ್ರಗಳನ್ನು ಡೌನ್‌ಲೋಡ್ ಮಾಡಿಕೊಂಡು, ಫೋಟೋ ಶ್ಯಾಪ್ ಮೂಲಕ ಥರ್ಮಲ್ ಇಮೇಜ್ ಮಾಡಿ, ಬಳಿಕ ಸಿಲಿಕಾನ್ ಪೇಪರ್ ಮೇಲೆ ಪಡಿಹಚ್ಚು ಪಡೆಯುತ್ತಿದ್ದರು.
ಬಳಿಕ ಮೈಕ್ರೋ ಎಟಿಎಂಗಳ ಮೂಲಕ ಹಣ ಡ್ರಾ ಮಾಡಿಕೊಳ್ಳುತ್ತಿದ್ದರು. ಈ ಸಂಬಂಧ ಎಲ್ಲ ನೋಂದಣಿ ಮತ್ತು ಮುಂದ್ರಾಂಕ ಕಚೇರಿಯ ಹಿರಿಯ ಅಧಿಕಾರಿಗಳನ್ನು ಸಂಪರ್ಕಿಸಿ, ತಾಂತ್ರಿಕ ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದೆ. ಬಂಧಿತರು ಬಿಹಾರದಲ್ಲಿ ಸೈಬರ್‌ಸೆಂಟರ್ ಗಳನ್ನು ಹೊಂದಿದ್ದರು ಎಂಬುದು ಗೊತ್ತಾಗಿದೆ. ಹೀಗಾಗಿ ಸಾರ್ವಜನಿಕರ ಬಯೋಮೆಟ್ರಿಕ್ ಮತ್ತು ಆಧಾರ್ ಕಾರ್ಡ್ ನಂಬರ್‌ಗಳನ್ನು ಕಾವೇರಿ ವೆಬ್‌ಸೈಟ್‌ನಲ್ಲಿ ಮರೆ ಮಾಚಲು ಸಂಬಂಧಿಸಿದ ಇಲಾಖೆ ಅಧಿಕಾರಿಗಳ ಮುಖ್ಯಸ್ಥರಿಗೆ ಸಲಹೆ ನೀಡಲಾಗಿದೆ ಎಂದು ಪೊಲೀಸ್ ಆಯುಕ್ತರು ಹೇಳಿದರು.