Advertisement

ಇ-ಖಾತಾ ತಿದ್ದುಪಡಿಯೇ ಭಾರೀ ಸವಾಲು; ತಿದ್ದುಪಡಿ ಅವಕಾಶ ಶೇ.3ರಿಂದ ಶೇ.15ಕ್ಕೆ ಏರಿಕೆಗೆ ಆಗ್ರಹ

01:01 AM Dec 17, 2024 | Team Udayavani |

ಉಡುಪಿ: ಆಸ್ತಿ ನೋಂದಣಿ, ಅಡಮಾನ, ಪಾಲುಪಟ್ಟಿ, ದಾನ, ವೀಲುನಾಮೆ ನಿಟ್ಟಿನಲ್ಲಿ ಕಡ್ಡಾಯ ವಾಗಿರುವ ಇ-ಖಾತೆಯ ತಿದ್ದುಪಡಿಯೇ ಈಗ ದೊಡ್ಡ ಸವಾಲಾಗಿದೆ.

Advertisement

ಕಾವೇರಿ ತಂತ್ರಾಂಶದೊಂದಿಗೆ ಇ-ಖಾತಾ (ನಗರ ಪ್ರದೇಶ), ಇ-ಸ್ವತ್ತು (ಗ್ರಾಮೀಣ ಪ್ರದೇಶ) ಲಿಂಕ್‌ ಮಾಡಿದ್ದರಿಂದ ಕೆಲವು ತಿದ್ದುಪಡಿ ಮಾಡಲು ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗಿದೆ.

ದಾಖಲೆಗಳೆಲ್ಲವೂ ಸರಿಯಿದ್ದು ಅರ್ಜಿ ಭರ್ತಿ ಮಾಡಿ ಸಂಬಂಧಪಟ್ಟ ಸ್ಥಳೀಯಾಡಳಿತಕ್ಕೆ ಅರ್ಜಿ ಸಲ್ಲಿಸಿದ 15 ದಿನದೊಳಗೆ ಇ-ಖಾತಾ ದೊರೆಯುತ್ತದೆ. ಅದಕ್ಕೆ ವೆಚ್ಚವೂ ತೀರಾ ಕಡಿಮೆ ಇರುತ್ತದೆ. ಮಧ್ಯವರ್ತಿಗಳ ಸಹಾಯವಿಲ್ಲದೆ ನೇರವಾಗಿ ಅರ್ಜಿ ಸಲ್ಲಿಸಿದರೆ 100 ರೂ.ಗಳ ಒಳಗೆ ಇ-ಖಾತಾ ಸಿಗುತ್ತದೆ. ಆದರೆ ಸಣ್ಣ ಪುಟ್ಟ ತಪ್ಪಾಗಿದ್ದರೂ ತಿದ್ದುಪಡಿಗಾಗಿ ವರ್ಷಗಟ್ಟಲೆ ಕಾಯಬೇಕಾಗುತ್ತದೆ.

ಶೇ. 3ರಷ್ಟು ಮಾತ್ರ ಅವಕಾಶ
ನಗರಸಭೆ ಅಥವಾ ಸ್ಥಳೀಯಾಡಳಿತ ತಮ್ಮ ವ್ಯಾಪ್ತಿಯಲ್ಲಿ ನೂರು ಇ-ಖಾತಾ ಹಂಚಿಕೆ ಮಾಡಿದರೆ ತಿದ್ದುಪಡಿಗೆ ಕೇವಲ ಮೂರಕ್ಕೆ ಮಾತ್ರ ಅವಕಾಶ ಇರುತ್ತದೆ. ಅಂದರೆ ಶೇ. 3ರಷ್ಟು ಮಾತ್ರ ತಿದ್ದುಪಡಿಗೆ ಸರಕಾರ ಅವಕಾಶ ಕಲ್ಪಿಸಿದ್ದರೂ ಅರ್ಜಿ ಸಲ್ಲಿಸಿದ ಎಲ್ಲರಿಗೂ ತಿದ್ದುಪಡಿಗೆ ಅವಕಾಶ ಸಿಗುತ್ತದೆ ಎಂದು ಹೇಳಲು ಸಾಧ್ಯವೇ ಇಲ್ಲ. ಒಂದಾದ ಅನಂತರ ಇನ್ನೊಂದು ಬರುವುದರಿಂದ ಮೂರರ ಕೋಟಾ ಮುಗಿದ ಅನಂತರ ಪುನಃ ಕಾಯಬೇಕಾಗುತ್ತದೆ. ಇದನ್ನು ಕನಿಷ್ಠ ಶೇ. 15ಕ್ಕೆ ಏರಿಸಬೇಕು ಎಂಬ ಬೇಡಿಕೆ ಇದೆ.

ತಂತ್ರಾಂಶ ಅಪ್‌ ಗ್ರೇಡ್ ಅಗತ್ಯ
ಕರಾವಳಿ ಭಾಗದಲ್ಲಿ ತುಂಡು ಭೂಮಿ ಹೆಚ್ಚಿದೆ. ಅಲ್ಲದೆ ಭೂಮಿಯು ಉದ್ದ ಮತ್ತು ಅಗಲ ಸಮ ಪ್ರಮಾಣದಲ್ಲಿ ಇರುವುದಿಲ್ಲ. ಇ ಖಾತಾ ಅಥವಾ ಇ ಸ್ವತ್ತು ತಂತ್ರಾಂಶದಲ್ಲಿ ತುಂಡು ಭೂಮಿ ಯಾವುದೇ ಅಳತೆ ಇದ್ದರೂ ಅದು ಸ್ವೀಕರಿಸುತ್ತದೆ. ಆದರೆ ಅದನ್ನು ಕಾವೇರಿ ತಂತ್ರಾಂಶದ ಜತೆಗೆ ಲಿಂಕ್‌ ಮಾಡುವ ಸಂದರ್ಭದಲ್ಲಿ ಅದು ತೆಗೆದುಕೊಳ್ಳುವುದಿಲ್ಲ. ಉದ್ದ  ಅಗಲ ಸಮ ಇದ್ದರೆ ಮಾತ್ರ ತೆಗೆದುಕೊಳ್ಳುತ್ತದೆ. ನಮ್ಮಲ್ಲಿ ಆ ರೀತಿ ಸಮಾನ ಅಳತೆಯ ಭೂಮಿ ಕಡಿಮೆ, ತುಂಡು ಭೂಮಿ ಆಗಿರುವುದರಿಂದ ಉದ್ದ, ಅಗಲ ಬೇರೆ ಬೇರೆ ಅಳತೆಯಲ್ಲಿರುತ್ತದೆ. ಅಸಮ ನಿವೇಶನ, ಬಹು ಮಾಲಕತ್ವವು ಇ ಖಾತಾದ ಮೂಲಕ ಕಾವೇರಿ ತಂತ್ರಾಂಶದಲ್ಲಿ ಪ್ರತಿಫ‌ಲಿಸುವುದರಿಂದ ಜನರಿಗೆ ಸಮಸ್ಯೆಯಾಗುತ್ತಿದೆ. ಗ್ರಾಮೀಣ ಭಾಗದ 9/11 ಸಮಸ್ಯೆಯೂ ಇದರಿಂದ ಹೆಚ್ಚಾಗಿದೆ.

Advertisement

ಸರ್ವರ್‌ ಸಮಸ್ಯೆ
ತಂತ್ರಾಂಶದಲ್ಲಿ ಗೊಂದಲ ಒಂದೆಡೆಯಾದರೆ ಸರ್ವರ್‌ ಸಮಸ್ಯೆಯೂ ಹೆಚ್ಚಿದೆ. ಮಾಹಿತಿ ಅಪ್‌ಲೋಡ್‌ ಮಾಡುವ ಸಂದರ್ಭದಲ್ಲಿ ಸರ್ವರ್‌ ಕೈ ಕೊಡುವುದೇ ಹೆಚ್ಚು. ಇ ಖಾತಾ ತೆಗೆಯಲು ಮಾಹಿತಿ ಅಪ್‌ಲೋಡ್‌ ಮಾಡುವಾಗ ಸರ್ವರ್‌ ಸಮಸ್ಯೆ ಎದುರಾದರೆ ಪುನಃ ಪುನಃ ಮೊದಲಿನಿಂದಲೇ ಅಪ್‌ಲೋಡ್‌ ಮಾಡಬೇಕಾಗುತ್ತದೆ. ಜನರು ಸರ್ವರ್‌ ಸಮಸ್ಯೆಯಿಂದಲೇ ಹೆಚ್ಚು ಹೈರಾಣಾಗಿದ್ದಾರೆ.

ಇ-ಖಾತಾ ಮಾಡಿಸಲು ಏನೇನು ಬೇಕು?
ಇ-ಖಾತೆ ಪಡೆಯಲು ಮಾಲಕರು ಜಾಗದ ಮೂಲ ದಾಖಲೆ (ಕ್ರಯಪತ್ರ, ವೀಲುನಾಮೆ, ವಿಭಾಗ ಪತ್ರ, ಗೀಫ್ಟ್ಡೀಡ್‌ ಇತ್ಯಾದಿ, ಭೂ ಪರಿವರ್ತನೆ ಆದೇಶ (ಕನ್ವರ್ಷನ್‌) ಮಾಲಕರ ಚಿತ್ರ ಹಾಗೂ ಸ್ವತ್ತಿನ ಚಿತ್ರ, ತೆರಿಗೆ ಪಾವತಿ ರಶೀದಿ ಹಾಗೂ ಕೆವೈಸಿ ದಾಖಲೆಗಳನ್ನು ನೀಡಬೇಕು.

ಕಾವೇರಿ ತಂತ್ರಾಂಶದೊಂದಿಗೆ ಇ-ಸ್ವತ್ತು ಮತ್ತು ಇ-ಖಾತೆ ಲಿಂಕ್‌ ಮಾಡಿರುವುದರಿಂದ ಕೆಲವು ಸಮಸ್ಯೆ ತಲೆದೋರಿದ್ದು, ಅವುಗಳನ್ನು ಆಗಿಂದಾಗ್ಗೆ ಸರಿಪಡಿಸುವ ಕಾರ್ಯ ಆಗುತ್ತಿದೆ. ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಉದ್ಭವಿಸುವ ಸಮಸ್ಯೆಯ ಬಗ್ಗೆ ಪರಿಶೀಲಿಸಲಾಗುವುದು.
-ಡಾ| ಕೆ. ವಿದ್ಯಾಕುಮಾರಿ, ಜಿಲ್ಲಾಧಿಕಾರಿ, ಉಡುಪಿ

- ರಾಜು ಖಾರ್ವಿ ಕೊಡೇರಿ

Advertisement

Udayavani is now on Telegram. Click here to join our channel and stay updated with the latest news.

Next